ಶಾಕಿಬ್ ಅಲ್ ಹಸನ್ ದಾಖಲೆ ಮುರಿದ ಲಿಟನ್ ದಾಸ್

ಲಿಟನ್ ದಾಸ್ | PC : X
ಢಾಕಾ. ಸೆ. 4: ಸಿಲ್ಹೆಟ್ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಮ್ ನಲ್ಲಿ ಬುಧವಾರ ನಡೆದ ನೆದರ್ಲ್ಯಾಂಡ್ಸ್ ವಿರುದ್ಧದ 3ನೇ ಟಿ20 ಅಂತರರಾಷ್ಟ್ರೀಯ ಪಂದ್ಯದಲ್ಲಿ ಅರ್ಧ ಶತಕ ಬಾರಿಸುವುದರೊಂದಿಗೆ ಬಾಂಗ್ಲಾದೇಶ ತಂಡದ ನಾಯಕ ಲಿಟನ್ ದಾಸ್ ಮಹತ್ವದ ಮೈಲಿಗಲ್ಲೊಂದನ್ನು ಸ್ಥಾಪಿಸಿದ್ದಾರೆ.
ಇದು ಬಾಂಗ್ಲಾದೇಶದ ಪರವಾಗಿ ಅವರ 14ನೇ ಟಿ20 ಅರ್ಧ ಶತಕವಾಗಿದೆ. ಈ ಮೂಲಕ ಅವರು ನೂತನ ರಾಷ್ಟ್ರೀಯ ದಾಖಲೆಯನ್ನು ನಿರ್ಮಿಸಿದ್ದಾರೆ. ಅವರು ಮಾಜಿ ನಾಯಕ ಶಾಕಿಬ್ ಅಲ್ ಹಸನ್ ರ ದಾಖಲೆಯನ್ನು ಮುರಿದಿದ್ದಾರೆ. ಶಾಕಿಬ್ ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 13 ಅರ್ಧ ಶತಕಗಳನ್ನು ಬಾರಿಸಿದ್ದಾರೆ. ದಾಸ್ ಆರು ಬೌಂಡರಿಗಳು ಮತ್ತು ನಾಲ್ಕು ಸಿಕ್ಸರ್ ಗಳನ್ನು ಒಳಗೊಂಡ 73 ರನ್ಗಳನ್ನು 46 ಎಸೆತಗಳಲ್ಲಿ ಸಿಡಿಸಿದರು.
30 ವರ್ಷದ ದಾಸ್ ಈಗ 110 ಟಿ20 ಅಂತರ್ರಾಷ್ಟ್ರೀಯ ಪಂದ್ಯಗಳಿಂದ 1,927 ರನ್ಗಳನ್ನು ಕಲೆಹಾಕಿದ್ದಾರೆ.
ಆದಾಗ್ಯೂ, ಪಂದ್ಯವು ಮಳೆಯಿಂದಾಗಿ ರದ್ದಾಯಿತು. ಬಾಂಗ್ಲಾದೇಶದ ಇನಿಂಗ್ಸ್ ನ 18.2 ಓವರ್ ಗಳ ಬಳಿಕ ಪಂದ್ಯವನ್ನು ನಿಲ್ಲಿಸಲಾಯಿತು.
ಬಾಂಗ್ಲಾದೇಶವು ಮೊದಲ ಟಿ20 ಪಂದ್ಯವನ್ನು 8 ವಿಕೆಟ್ಗಳಿಂದ ಗೆದ್ದಿತ್ತು. 2ನೇ ಪಂದ್ಯವನ್ನೂ ಬಾಂಗ್ಲಾದೇಶವೇ 9 ವಿಕೆಟ್ಗಳಿಂದ ಗೆದ್ದಿದೆ. ಈಗ ಸರಣಿಯ 3ನೇ ಹಾಗೂ ಅಂತಿಮ ಪಂದ್ಯವು ಮಳೆಯಿಂದಾಗಿ ರದ್ದುಗೊಂಡಿದೆ. ಹಾಗಾಗಿ, ಆತಿಥೇಯ ಬಾಂಗ್ಲಾದೇಶವು ಟಿ20 ಸರಣಿಯನ್ನು 2-0 ಅಂತರದಿಂದ ಗೆದ್ದಿದೆ.







