ಬಿಸಿಸಿಐ ನಿರ್ಧಾರ 'ನಾಚಿಕೆಗೇಡು': ಶಮಿ ಕೈಬಿಟ್ಟಿದ್ದಕ್ಕೆ ಕೋಚ್ ಕೆಂಡಾಮಂಡಲ

ಮೊಹ್ಮದ್ ಶಮಿ PC: x.com/HarshologyX
ಕೊಲ್ಕತ್ತಾ: ಶುಭ್ಮನ್ ಗಿಲ್ ನಾಯಕತ್ವದಲ್ಲಿ ಈ ತಿಂಗಳ 11 ರಿಂದ ಪ್ರವಾಸಿ ನ್ಯೂಝಿಲೆಂಡ್ ವಿರುದ್ಧ ನಡೆಯುವ ಏಕದಿನ ಸರಣಿಯಲ್ಲಿ ಆಡುವ 15 ಮಂದಿ ಆಟಗಾರರ ತಂಡವನ್ನು ಬಿಸಿಸಿಐ ಪ್ರಕಟಿಸಿದ್ದು, ತಂಡದಿಂದ ವೇಗದ ಬೌಲರ್ ಮೊಹ್ಮದ್ ಶಮಿ ಅವರನ್ನು ಕೈಬಿಟ್ಟ ಕ್ರಮವನ್ನು ಅವರ ಬಂಗಾಳದ ಮುಖ್ಯ ಕೋಚ್ ಲಕ್ಷ್ಮಿ ರತನ್ ಶುಕ್ಲ ಕಟುವಾಗಿ ಟೀಕಿಸಿದ್ದಾರೆ.
ಗಾಯಾಳುವಾಗಿರುವ ಶ್ರೇಯಸ್ ಅಯ್ಯರ್ ಅವರ ದೈಹಿಕ ಸಾಮರ್ಥ್ಯವನ್ನು ಬಿಸಿಸಿಐ ಕ್ಷಮತಾ ಕೇಂದ್ರ ದೃಢಪಡಿಸುವವರೆಗೆ ಅವರು ತಂಡದಲ್ಲಿ ಸ್ಥಾನ ಪಡೆಯುವುದು ಅನುಮಾನವಾಗಿದ್ದರೂ, ಅವರನ್ನು ಉಪನಾಯಕನನ್ನಾಗಿ ನೇಮಕ ಮಾಡಲಾಗಿದೆ. ವೇಗದ ಬೌಲರ್ ಮೊಹ್ಮದ್ ಸಿರಾಜ್ ಏಕದಿನ ತಂಡಕ್ಕೆ ಮರಳಿದ್ದಾರೆ. ದೇಶಿ ಕ್ರಿಕೆಟ್ ನಲ್ಲಿ ಶಮಿ ಸತತವಾಗಿ ಆಡುತ್ತಿದ್ದರೂ, ಹಿರಿಯ ವೇಗದ ಆಟಗಾರನನ್ನು ಕಡೆಗಣಿಸಲಾಗಿದೆ.
ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ ನಿರ್ಧಾರವನ್ನು ಕಟುವಾಗಿ ಟೀಕಿಸಿರುವ ಲಕ್ಷ್ಮಿ ರತನ್ ಶುಕ್ಲಾ, ದೇಶಿ ಕ್ರಿಕೆಟ್ ಗೆ ಇತರ ಯಾವುದೇ ಅಂತರರಾಷ್ಟ್ರೀಯ ಆಟಗಾರರಿಗಿಂತ ಹೆಚ್ಚು ಬದ್ಧತೆಯನ್ನು ಶಮಿ ತೋರಿದ್ದಾರೆ. ಆಯ್ಕೆಗಾರರ ನಿರ್ಧಾರ ನ್ಯಾಯಸಮ್ಮತವಲ್ಲ ಎಂದು ಅವರು ವಿಶ್ಲೇಷಿಸಿದ್ದಾರೆ.
"ಮೊಹ್ಮದ್ ಶಮಿ ಅವರಿಗೆ ಆಯ್ಕೆ ಸಮಿತಿ ಅನ್ಯಾಯ ಮಾಡಿದೆ. ಇತ್ತೀಚಿನ ದಿನಗಳಲ್ಲಿ ಯಾವುದೇ ಅಂತರರಾಷ್ಟ್ರೀಯ ಆಟಗಾರ ತೋರಿಸದಷ್ಟು ಬದ್ಧತೆಯನ್ನು ಮೊಹ್ಮದ್ ಶಮಿ ತೋರಿದ್ದಾರೆ. ದೇಶಿ ಕ್ರಿಕೆಟ್ ನಲ್ಲಿ ಕಠಿಣ ಪರಿಶ್ರಮ ಹಾಕಿದರೂ ಶಮಿ ಬಗ್ಗೆ ಆಯ್ಕೆ ಸಮಿತಿ ಕೈಗೊಂಡಿರುವ ನಿರ್ಧಾರ ನಾಚಿಕೆಗೇಡು" ಎಂದು ಶುಕ್ಲಾ ಹೇಳಿದ್ದಾರೆ.







