IPL 2027ರ ಆವೃತ್ತಿಗೂ ಮುನ್ನ ಸ್ಯಾಮ್ ಕರನ್ ಬದಲಿಗೆ ರಾಜಸ್ಥಾನ್ ರಾಯಲ್ಸ್ ಗೆ ಮುಹಮ್ಮದ್ ಶಮಿ?: ವರದಿ
ಆಟಗಾರರ ವಿನಿಮಯಕ್ಕೆ LSG, RR ಒಲವು

ಮೊಹಮ್ಮದ್ ಶಮಿ , ಸ್ಯಾಮ್ ಕರನ್ | Photo Credit : PTI
ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ 2027ರ ಆವೃತ್ತಿಗೂ ಮುನ್ನ ಆಟಗಾರರ ವಿನಿಮಯದ ಕುರಿತು ಲಕ್ನೋ ಸೂಪರ್ ಜೈಂಟ್ಸ್ (LSG) ಮತ್ತು ರಾಜಸ್ಥಾನ್ ರಾಯಲ್ಸ್ (RR) ನಡುವೆ ಮಾತುಕತೆ ನಡೆಯುತ್ತಿದೆ. ಈ ಒಪ್ಪಂದದ ಭಾಗವಾಗಿ ಅನುಭವಿ ವೇಗದ ಬೌಲರ್ ಮುಹಮ್ಮದ್ ಶಮಿ ಅವರು LSG ತಂಡದಿಂದ ರಾಜಸ್ಥಾನ್ ರಾಯಲ್ಸ್ ಗೆ ಸೇರುವ ಸಾಧ್ಯತೆಯಿದೆ. ಇದಕ್ಕೆ ಬದಲಾಗಿ ಇಂಗ್ಲೆಂಡ್ ನ ಆಲ್ ರೌಂಡರ್ ಸ್ಯಾಮ್ ಕರನ್ ಅವರು LSG ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ವರದಿಯೊಂದು ತಿಳಿಸಿದೆ.
ಈ ವಿನಿಮಯ ಒಪ್ಪಂದ ಕಾರ್ಯರೂಪಕ್ಕೆ ಬಂದರೆ, ಕಳೆದ ಋತುವಿನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಪ್ರಮುಖ ಸ್ಟ್ರೈಕ್ ಬೌಲರ್ ಆಗಿದ್ದ ಇಂಗ್ಲೆಂಡ್ ನ ವೇಗಿ ಜೋಫ್ರಾ ಆರ್ಚರ್ ಅವರೊಂದಿಗೆ ಶಮಿ ಜೋಡಿಯಾಗಲಿದ್ದಾರೆ ಎಂದು cricinfo.com ವರದಿ ಮಾಡಿದೆ.
IPL 2026ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿತ್ತು.
IPL 2026ರಲ್ಲಿ ಪವರ್ ಪ್ಲೇ ಓವರ್ ಗಳಲ್ಲಿ 8.71ರ ಸರಾಸರಿ ಕಾಯ್ದುಕೊಳ್ಳುವ ಜೊತೆಗೆ 23 ವಿಕೆಟ್ಗಳನ್ನು ಪಡೆಯುವಲ್ಲಿ ಶಮಿ ಪ್ರಮುಖ ಪಾತ್ರ ವಹಿಸಿದ್ದರು. 2024ರಿಂದೀಚೆಗೆ ಪವರ್ ಪ್ಲೇ ಓವರ್ ಗಳಲ್ಲಿ 8.76ರ ಸರಾಸರಿಯಲ್ಲಿ 14 ವಿಕೆಟ್ ಗಳನ್ನು ಕಬಳಿಸಿದ್ದಾರೆ.
ಸ್ಯಾಮ್ ಕರನ್ ಪಾಲಿಗೆ ಲಕ್ನೋ ಸೂಪರ್ ಜೈಂಟ್ಸ್ IPL ನ ಮೂರನೇ ಫ್ರಾಂಚೈಸಿಯಾಗಲಿದೆ. ಇದಕ್ಕೂ ಮೊದಲು ಅವರು ಪಂಜಾಬ್ ಕಿಂಗ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ಪರ ತಲಾ ಎರಡು ಬಾರಿ ಆಡಿದ್ದರು. ಗಾಯದ ಸಮಸ್ಯೆಯಿಂದಾಗಿ ಅವರು IPL 2026ರಲ್ಲಿ ಆಡಿರಲಿಲ್ಲ.
ಇದೇ ವಿನಿಮಯ ಒಪ್ಪಂದದ ಭಾಗವಾಗಿ ತಮಿಳುನಾಡಿನ ಎಡಗೈ ಸ್ಪಿನ್ನರ್ ಎಂ. ಸಿದ್ಧಾರ್ಥ್ ಅವರನ್ನು ರಾಜಸ್ಥಾನ್ ರಾಯಲ್ಸ್ ಗಾಗಿ ಬಿಡುಗಡೆ ಮಾಡಲು LSG ಒಪ್ಪಿಕೊಂಡಿದೆ ಎಂದು ಪಿಟಿಐ ವರದಿ ಮಾಡಿದೆ.






