2026ರ ಐಪಿಎಲ್ | ಕೆಕೆಆರ್ ಸಹಾಯಕ ಕೋಚ್ ಆಗಿ ಶೇನ್ ವಾಟ್ಸನ್ ನೇಮಕ

ಶೇನ್ ವಾಟ್ಸನ್ | Photo Credit : X
ಹೊಸದಿಲ್ಲಿ, ನ.13: ಆಸ್ಟ್ರೇಲಿಯದ ಮಾಜಿ ಆಲ್ರೌಂಡರ್ ಶೇನ್ ವಾಟ್ಸನ್ರನ್ನು ಮುಂಬರುವ 2026ರ ಆವೃತ್ತಿಯ ಐಪಿಎಲ್ ಟೂರ್ನಿಗೆ ತಮ್ಮ ತಂಡದ ಸಹಾಯಕ ಕೋಚ್ ಆಗಿ ನೇಮಿಸಲಾಗಿದೆ ಎಂದು ಕೋಲ್ಕತಾ ನೈಟ್ ರೈಡರ್ಸ್(ಕೆಕೆಆರ್)ಗುರುವಾರ ಪ್ರಕಟಿಸಿದೆ.
ಸೀಮಿತ ಓವರ್ ಕ್ರಿಕೆಟ್ನಲ್ಲಿ ಓರ್ವ ಯಶಸ್ವಿ ಕ್ರಿಕೆಟಿಗನಾಗಿದ್ದ ವಾಟ್ಸನ್ 59 ಟೆಸ್ಟ್, 190 ಏಕದಿನ ಹಾಗೂ 58 ಟಿ-20 ಪಂದ್ಯಗಳಲ್ಲಿ ಆಸ್ಟ್ರೇಲಿಯ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದ್ದಾರೆ. ಎಲ್ಲ ಮಾದರಿಯ ಕ್ರಿಕೆಟ್ನಲ್ಲಿ 10,000ಕ್ಕೂ ಅಧಿಕ ಅಂತರ್ರಾಷ್ಟ್ರೀಯ ರನ್ ಗಳಿಸಿದ್ದಲ್ಲದೆ, 280 ವಿಕೆಟ್ಗಳನ್ನು ಪಡೆದಿದ್ದಾರೆ. 2007 ಹಾಗೂ 2015ರಲ್ಲಿ ಐಸಿಸಿ ವಿಶ್ವಕಪ್ ವಿಜೇತ ಆಸ್ಟ್ರೇಲಿಯದ ತಂಡದ ಪ್ರಮುಖ ಸದಸ್ಯರಾಗಿದ್ದರು. ತನ್ನ ವೃತ್ತಿ ಜೀವನದುದ್ದಕ್ಕೂ ಹಲವು ಪ್ರಶಸ್ತಿ ಗೆಲುವಿನ ಭಾಗವಾಗಿದ್ದರು.
‘‘ನಾನು ತರಬೇತುದಾರರ ಗುಂಪಿನೊಂದಿಗೆ ಕೆಲಸ ಮಾಡಲು ಉತ್ಸುಕನಾಗಿರುವೆ. ಕೋಲ್ಕತಾ ತಂಡ ಮತ್ತೊಂದು ಪ್ರಶಸ್ತಿ ಗೆಲ್ಲಲು ಆಟಗಾರರಿಗೆ ನೆರವಾಗುವೆ’’ಎಂದು ಫ್ರಾಂಚೈಸಿ ಬಿಡುಗಡೆಗೊಳಿಸಿರುವ ಹೇಳಿಕೆಯಲ್ಲಿ ವಾಟ್ಸನ್ ತಿಳಿಸಿದ್ದಾರೆ.
ವಾಟ್ಸನ್ 2008ರಿಂದ 2020ರ ತನಕ 12 ವರ್ಷಗಳ ಕಾಲ ಐಪಿಎಲ್ ಟೂರ್ನಿಯಲ್ಲಿ ಆಡಿದ್ದು, 145 ಪಂದ್ಯಗಳನ್ನು ಆಡಿದ್ದಾರೆ. 4 ಶತಕಗಳನ್ನು ಗಳಿಸಿದ್ದು, ರಾಜಸ್ಥಾನ ರಾಯಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಚಾಂಪಿಯನ್ಶಿಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಆಸ್ಟ್ರೇಲಿಯದ ಮಾಜಿ ಉಪ ನಾಯಕ ವಾಟ್ಸನ್ ನಿವೃತ್ತಿಯ ನಂತರ ಕೋಚ್ ಹಾಗೂ ಸಲಹೆಗಾರನಾಗಿ ಜಾಗತಿಕ ಮಟ್ಟದ ಲೀಗ್ಗಳಲ್ಲಿ ಹಲವು ಫ್ರಾಂಚೈಸಿಗಳಲ್ಲಿ ಕೆಲಸ ಮಾಡಿದ್ದಾರೆ.
‘‘ಶೇನ್ ವಾಟ್ಸನ್ರನ್ನು ಕೆಕೆಆರ್ ಕುಟುಂಬಕ್ಕೆ ಸ್ವಾಗತಿಸಲು ನಮಗೆ ರೋಮಾಂಚನವಾಗುತ್ತಿದೆ. ಉನ್ನತ ಮಟ್ಟದಲ್ಲಿ ಆಟಗಾರ ಹಾಗೂ ಕೋಚ್ ಆಗಿ ಅವರ ಅನುಭವವು ನಮ್ಮ ತಂಡದ ತಯಾರಿಗೆ ಅಮೂಲ್ಯ ಕೊಡುಗೆ ನೀಡಬಹುದು. ಮೈದಾನದ ಹೊರಗೆ ಹಾಗೂ ಒಳಗೆ ಅವರ ಕೊಡುಗೆಗಳನ್ನು ನಾವು ಎದುರು ನೋಡುತ್ತಿದ್ದೇವೆ’’ಎಂದು ಕೆಕೆಆರ್ ಸಿಇಒ ವೆಂಕಿ ಮೈಸೂರು ಹೇಳಿದ್ದಾರೆ.







