ಶಾಂಘೈ ಮಾಸ್ಟರ್ಸ್: ಅಲೆಜಾಂಡ್ರೊ ಡೇವಿಡೋವಿಚ್ಗೆ ಪ್ರಶಸ್ತಿ

Photo Credit: PTI
ಶಾಂಘೈ, ಅ.18: ಸ್ಪೇನ್ ಆಟಗಾರ ಅಲೆಜಾಂಡ್ರೊ ಡೇವಿಡೋವಿಚ್ ರವಿವಾರ ನಡೆದ ಶಾಂಘೈ ಓಪನ್ ಟೆನಿಸ್ ಟೂರ್ನಿಯ ಫೈನಲ್ನಲ್ಲಿ ತಮ್ಮದೇ ದೇಶದ ರಾಫೆಲ್ ಜೋಡಾರ್ ಅವರನ್ನು ಮಣಿಸಿ ಚೊಚ್ಚಲ ಮಾಸ್ಟರ್ಸ್-1000 ಪ್ರಶಸ್ತಿ ಗೆದ್ದರು.
27ರ ವಯಸ್ಸಿನ ಡೇವಿಡೋವಿಚ್ ಎರಡು ಗಂಟೆ ಹಾಗೂ 28 ನಿಮಿಷಗಳ ಕಾಲ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ರಾಫೆಲ್ ಅವರನ್ನು 1-6, 7-6(5), 6-4 ಸೆಟ್ಗಳಿಂದ ಮಣಿಸಿದರು.
ತಮ್ಮ ಮೊದಲ ಐದು ಟೂರ್ ಮಟ್ಟದ ಫೈನಲ್ಗಳಲ್ಲಿ ಸೋತಿದ್ದ ವಿಶ್ವದ 26ನೇ ರ್ಯಾಂಕ್ನ ಆಟಗಾರ ಡೇವಿಡೋವಿಚ್ ಇದೀಗ ಸತತ ಮೂರನೇ ಬಾರಿ ಪ್ರಶಸ್ತಿ ಜಯಿಸಿದ್ದಾರೆ. ಈ ಋತುವಿನಲ್ಲಿ ಮಲ್ಲೋರ್ಕಾ ಹಾಗೂ ಚೆಂಗ್ಡುವಿನಲ್ಲಿ ನಡೆದ ಎಟಿಪಿ 250 ಸ್ಪರ್ಧೆಗಳಲ್ಲಿ ಅವರು ಜಯಶಾಲಿಯಾಗಿದ್ದರು.
ಬೆನ್ನುನೋವಿನಿಂದಾಗಿ ಎರಡು ತಿಂಗಳು ವಿಶ್ರಾಂತಿ ಪಡೆದ ಬಳಿಕ ಡೇವಿಡೋವಿಚ್ ಚೆಂಗ್ಡುವಿನಲ್ಲಿ ಪ್ರಶಸ್ತಿ ಗೆದ್ದಿದ್ದರು. ಫೈನಲ್ಗೇರುವ ಹಾದಿಯಲ್ಲಿ ಸತತ ಮೂರು ಪಂದ್ಯಗಳಲ್ಲಿ ರೋಚಕ ಗೆಲುವು ದಾಖಲಿಸಿದ ಅವರು, ಇದೀಗ ತಮ್ಮ ವೃತ್ತಿಜೀವನದ ಅತಿದೊಡ್ಡ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಮೂರನೇ ಸುತ್ತಿನಲ್ಲಿ ಅಮೆರಿಕದ ಫ್ರಾನ್ಸಿಸ್ ಟಿಯಾಫೊ ವಿರುದ್ಧ ಮ್ಯಾಚ್ ಪಾಯಿಂಟ್ ಉಳಿಸಿಕೊಂಡಿದ್ದ ಡೇವಿಡೋವಿಚ್, ಪೋಲೆಂಡ್ನ ಹ್ಯೂಬರ್ಟ್ ಹರ್ಕಾಝ್ ಹಾಗೂ ಅಗ್ರ ಶ್ರೇಯಾಂಕದ ಜರ್ಮನಿಯ ಅಲೆಕ್ಸಾಂಡರ್ ಝ್ವೆರೆವ್ ಅವರನ್ನು ಮಣಿಸಿದ್ದರು.
ಫೈನಲ್ ಪಂದ್ಯದಲ್ಲಿ 20ರ ಹರೆಯದ ಜೋಡಾರ್ ಮೊದಲ ಸೆಟ್ ಅನ್ನು 6-1 ಅಂತರದಿಂದ ಗೆದ್ದು ಶುಭಾರಂಭ ಮಾಡಿದರು. 2022ರ ಮಾಂಟೆಕಾರ್ಲೊ ಬಳಿಕ ತಮ್ಮ ಎರಡನೇ ಮಾಸ್ಟರ್ಸ್-1000 ಟೂರ್ನಿಯ ಫೈನಲ್ನಲ್ಲಿ ಆಡಿದ ಡೇವಿಡೋವಿಚ್ ಎರಡನೇ ಸೆಟ್ನಲ್ಲೂ ಹಿನ್ನಡೆ ಅನುಭವಿಸಿದ್ದರು. ವಿಶ್ವದ 13ನೇ ರ್ಯಾಂಕ್ನ ಆಟಗಾರ ಜೋಡಾರ್ ಒಂದು ಹಂತದಲ್ಲಿ 3-2ರ ಮುನ್ನಡೆ ಪಡೆದಿದ್ದರು. ಆದರೆ, ಹಿರಿಯ ಆಟಗಾರ ಡೇವಿಡೋವಿಚ್ ಮರಳಿ ಹೋರಾಟ ನಡೆಸುವಲ್ಲಿ ಯಶಸ್ವಿಯಾದರು.
ಶಾಂಘೈ ಮಾಸ್ಟರ್ಸ್ ಟ್ರೋಫಿ ಗೆಲ್ಲುವ ಮೂಲಕ ಡೇವಿಡೋವಿಚ್ ಎಟಿಪಿ ರ್ಯಾಂಕಿಂಗ್ನಲ್ಲಿ ಅಗ್ರ 20ರೊಳಗೆ ಮರಳಲು ಸಜ್ಜಾಗಿದ್ದಾರೆ. ಕಳೆದ ವರ್ಷ ನವೆಂಬರ್ನಲ್ಲಿ 14ನೇ ರ್ಯಾಂಕ್ ತಲುಪಿದ್ದು ಅವರ ಜೀವನಶ್ರೇಷ್ಠ ಸಾಧನೆಯಾಗಿದೆ.






