ಮುಂಬೈ ರಣಜಿ ತಂಡದ ನಾಯಕನಾಗಿ ಶಾರ್ದುಲ್ ಠಾಕೂರ್ ನೇಮಕ

ಶಾರ್ದುಲ್ ಠಾಕೂರ್ | PC : ANI
ಮುಂಬೈ, ಸೆ.26: ಭಾರತದ ಟೆಸ್ಟ್ ತಂಡದ ಆಲ್ರೌಂಡರ್ ಶಾರ್ದುಲ್ ಠಾಕೂರ್ 2025-26ರ ಸಾಲಿನ ರಣಜಿ ಟ್ರೋಫಿ ಋತುವಿಗೆ ಮುಂಬೈ ಕ್ರಿಕೆಟ್ ತಂಡದ ನಾಯಕನಾಗಿ ಶುಕ್ರವಾರ ನೇಮಕಗೊಂಡಿದ್ದಾರೆ.
33ರ ಹರೆಯದ ಠಾಕೂರ್ ಈ ತಿಂಗಳಾರಂಭದಲ್ಲಿ ದುಲೀಪ್ ಟ್ರೋಫಿ ಟೂರ್ನಿಯ ಸೆಮಿ ಫೈನಲ್ನಲ್ಲಿ ಪಶ್ಚಿಮ ವಲಯ ತಂಡವನ್ನು ನಾಯಕನಾಗಿ ಮುನ್ನಡೆಸಿದ್ದರು.
ಸಂಜಯ್ ಪಾಟೀಲ್ ನೇತೃತ್ವದ ಮುಂಬೈ ಆಯ್ಕೆ ಸಮಿತಿಯು ಠಾಕೂರ್ರನ್ನು ನೂತನ ನಾಯಕನಾಗಿ ನೇಮಿಸಿದ್ದಲ್ಲದೆ, ಈ ಋತುವಿಗೆ 24 ಸಂಭಾವ್ಯ ಆಟಗಾರರ ಪಟ್ಟಿಯನ್ನು ಪ್ರಕಟಿಸಿದೆ. ಅಕ್ಟೋಬರ್ 15ರಂದು ಶ್ರೀನಗರದಲ್ಲಿ ಜಮ್ಮು-ಕಾಶ್ಮೀರ ತಂಡದ ವಿರುದ್ದ ಆಡಲಿರುವ ಮೊದಲ ರಣಜಿ ಪಂದ್ಯಕ್ಕಿಂತ ಮೊದಲು ಈ ಪಟ್ಟಿಯನ್ನು ಸಂಕ್ಷಿಪ್ತಗೊಳಿಸಲಾಗುತ್ತದೆ.
ಠಾಕೂರ್ 97 ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಗಳಲ್ಲಿ 302 ವಿಕೆಟ್ಗಳನ್ನು ಪಡೆದಿದ್ದಾರೆ. 2021ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಶ್ರೇಷ್ಠ ಬೌಲಿಂಗ್(7/61)ಮಾಡಿದ್ದರು. ಬ್ಯಾಟಿಂಗ್ನಲ್ಲಿ 2 ಶತಕಗಳ ಸಹಿತ ಒಟ್ಟು 2,688 ರನ್ ಗಳಿಸಿದ್ದಾರೆ. 14 ಟೆಸ್ಟ್ ಪಂದ್ಯಗಳಲ್ಲಿ ಆಡಿರುವ ಠಾಕೂರ್ 33 ವಿಕೆಟ್ಗಳನ್ನು ಕಬಳಿಸಿದ್ದಾರೆ.
‘‘ಶಾರ್ದುಲ್ ಠಾಕೂರ್ರನ್ನು ಮುಂಬೈ ತಂಡದ ನಾಯಕನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಅವರು ಕೂಡ ಆಯ್ಕೆ ಸಮಿತಿಯ ಸಭೆಯಲ್ಲಿದ್ದರು. ಹೆಚ್ಚುವರಿ ಹೊಣೆಗಾರಿಕೆ ವಹಿಸಿಕೊಳ್ಳಲು ತುಂಬಾ ಉತ್ಸುಕರಾಗಿದ್ದಾರೆ’’ಎಂದು ಮುಂಬೈ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ಅಭಯ್ ಹಡಪ್ ಹೇಳಿದ್ದಾರೆ.
ಠಾಕೂರ್ ಅವರು ಆಗಸ್ಟ್ 21ರಂದು ನಾಯಕತ್ವ ತ್ಯಜಿಸಿದ್ದ ಅಜಿಂಕ್ಯ ರಹಾನೆ ಅವರ ಸ್ಥಾನವನ್ನು ತುಂಬಲಿದ್ದಾರೆ.
ಬುಚಿ ಬಾಬು ಟ್ರೋಫಿಯ ವೇಳೆ ಗಾಯಗೊಂಡು ಚೇತರಿಸಿಕೊಂಡಿರುವ ಮಧ್ಯಮ ಸರದಿಯ ಬ್ಯಾಟರ್ ಸರ್ಫರಾಝ್ ಖಾನ್, ಕಾಲಿನ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಂಡಿರುವ ವೇಗದ ಬೌಲರ್ ತುಷಾರ್ ದೇಶಪಾಂಡೆ ಹಾಗೂ ಆಲ್ರೌಂಡರ್ ಮುಶೀರ್ ಖಾನ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.







