2027ರ ಏಕದಿನ ವಿಶ್ವಕಪ್ನಲ್ಲಿ ಸ್ಥಾನ ಪಡೆಯುವ ವಿಶ್ವಾಸದಲ್ಲಿ ಶಾರ್ದುಲ್ ಠಾಕೂರ್

Photo Courtesy : BCCI
ಮುಂಬೈ, ಅ.28: ದಕ್ಷಿಣ ಆಫ್ರಿಕಾದಲ್ಲಿ 2027ರಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ನಲ್ಲಿ 8ನೇ ಕ್ರಮಾಂಕದಲ್ಲಿ ಆಲ್ರೌಂಡರ್ ಆಗಿ ಆಡುವತ್ತ ಬಲಗೈ ಮಧ್ಯಮ ವೇಗದ ಬೌಲರ್ ಶಾರ್ದುಲ್ ಠಾಕೂರ್ ಚಿತ್ತಹರಿಸಿದ್ದಾರೆ.
‘‘ಉತ್ತಮ ಪ್ರದರ್ಶನ ನೀಡಿ ಭಾರತೀಯ ಕ್ರಿಕೆಟ್ ತಂಡಕ್ಕೆ ಮರಳುವುದು ನನಗೆ ಅತ್ಯಂತ ಮುಖ್ಯವಾಗಿದೆ. ಉತ್ತಮ ಪ್ರದರ್ಶನವು ನನ್ನ ಆಯ್ಕೆಗೆ ನೆರವಾಗಲಿದೆ. ಏಕದಿನ ವಿಶ್ವಕಪ್ ಕೂಡ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿದ್ದು, 8ನೇ ಕ್ರಮಾಂಕದಲ್ಲಿ ಬೌಲಿಂಗ್ ಆಲ್ರೌಂಡರ್ ಸ್ಥಾನ ತೆರೆದುಗೊಳ್ಳುವ ಸಾಧ್ಯತೆಯಿದೆ’’ಎಂದು ಛತ್ತೀಸ್ಗಢ ವಿರುದ್ದ ಮುಂಬೈ ತಂಡ ಡ್ರಾ ಸಾಧಿಸಿದ ನಂತರ ಠಾಕೂರ್ ಸುದ್ದಿಗಾರರಿಗೆ ತಿಳಿಸಿದರು.
ಆಸ್ಟ್ರೇಲಿಯ ವಿರುದ್ಧ ಇತ್ತೀಚೆಗೆ ನಡೆದ ಏಕದಿನ ಸರಣಿಯಲ್ಲಿ ನಿತೀಶ್ ರೆಡ್ಡಿ ಹಾಗೂ ಹರ್ಷಿತ್ ರಾಣಾ 8ನೇ ಕ್ರಮಾಂಕ ಸ್ಪರ್ಧೆಯಲ್ಲಿದ್ದರು. ಏಕದಿನ ವಿಶ್ವಕಪ್ ಟೂರ್ನಿ ಆರಂಭವಾಗಲು ಇನ್ನೂ ಒಂದೂವರೆ ವರ್ಷ ಬಾಕಿ ಇದ್ದು, ಸಾಕಷ್ಟು ಬದಲಾವಣೆ ಆಗಬಹುದು.
‘‘ಅಂತಾರಾಷ್ಟ್ರೀಯ ಕ್ರಿಕೆಟಿಗೆ ನಾನು ತಯಾರಾಗಿದ್ದೇನೆ. ನಾಳೆ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಆಡಲು ಹೇಳಿದರೆ ಆಡಲು ಸಿದ್ಧವಿದ್ದೇನೆ’’ ಎಂದು ಠಾಕೂರ್ ಹೇಳಿದರು.
ಮುಂಬೈ ರಣಜಿ ತಂಡದ ನಾಯಕ ಠಾಕೂರ್ ಸ್ವದೇಶದಲ್ಲಿ ನಡೆದ 2023ರ ವಿಶ್ವಕಪ್ನಲ್ಲಿ ಭಾರತದ ಪರ ಕೊನೆಯ ಬಾರಿ ಏಕದಿನ ಪಂದ್ಯವನ್ನಾಡಿದ್ದರು. ಇತ್ತೀಚೆಗೆ ಇಂಗ್ಲೆಂಡ್ ಪ್ರವಾಸದಲ್ಲಿ ಭಾರತದ ಟೆಸ್ಟ್ ತಂಡದಲ್ಲಿದ್ದರು. ಆದರೆ ವಿಂಡೀಸ್ ವಿರುದ್ದ ಸ್ವದೇಶದಲ್ಲಿ ನಡೆದ ಸರಣಿಯಿಂದ ಕಡೆಗಣಿಸಲ್ಪಟ್ಟಿದ್ದರು







