ಕ್ರೀಡೆಯನ್ನು ರಾಜಕೀಯಗೊಳಿಸಿರುವುದು ಅತ್ಯಂತ ಅವಮಾನಕರ: ಶಶಿ ತರೂರ್

ಶಶಿ ತರೂರ್ | Photo Credit: PTI
ಹೊಸದಿಲ್ಲಿ: ಐಸಿಸಿ ಟಿ-20 ವಿಶ್ವಕಪ್ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಉಳಿದಿದ್ದು, ಪಾಕಿಸ್ತಾನ ತಂಡವು ಫೆ.15ರಂದು ಭಾರತ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಿದೆ. ಪಾಕಿಸ್ತಾನದ ಈ ನಿರ್ಧಾರ ಕುರಿತು ವ್ಯಾಪಕ ಚರ್ಚೆ ನಡೆಯುತ್ತಿದ್ದು, ಇದೇ ವಿಚಾರವಾಗಿ ಕಾಂಗ್ರೆಸ್ ಸಂಸದ ಶಶಿ ತರೂರ್ ಪ್ರತಿಕ್ರಿಯೆ ನೀಡಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಭಾರತ ಹಾಗೂ ಪಾಕಿಸ್ತಾನದ ನಡುವೆ ರಾಜಕೀಯ ಉದ್ವಿಗ್ನತೆ ಹೆಚ್ಚುತ್ತಿರುವ ಕುರಿತು ಪ್ರತಿಕ್ರಿಯಿಸಿದ ತರೂರ್, ಕ್ರೀಡೆಯನ್ನು ರಾಜಕೀಯದಿಂದ ದೂರವಿಡಬೇಕು ಎಂದು ಪ್ರತಿಪಾದಿಸಿದರು.
‘‘ಉಭಯ ದೇಶಗಳು ಕ್ರೀಡೆಯನ್ನು ಈ ರೀತಿ ರಾಜಕೀಯಗೊಳಿಸಿರುವುದು ಅತ್ಯಂತ ಅವಮಾನಕರ ಸಂಗತಿ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ಬಾಂಗ್ಲಾದೇಶದ ಕ್ರಿಕೆಟಿಗ ಮುಸ್ತಫಿಝುರ್ರಹ್ಮಾನ್ರನ್ನು ಕೆಕೆಆರ್ ಫ್ರಾಂಚೈಸಿ ಐಪಿಎಲ್ನಿಂದ ಹೊರ ಹಾಕಬಾರದಿತ್ತು. ಕ್ರೀಡೆಯಲ್ಲಿ ರಾಜಕೀಯ ಒಳ ನುಸುಳುವಿಕೆ ದುರದೃಷ್ಟಕರ. ರೆಹಮಾನ್ ಕುರಿತು ಬಾಂಗ್ಲಾದೇಶದ ಪ್ರತಿಕ್ರಿಯೆ ಕೂಡ ಅತಿರೇಕವಾಗಿತ್ತು’’ಎಂದು ತರೂರ್ ಹೇಳಿದರು.
‘‘ಕ್ರಿಕೆಟ್ ಎಲ್ಲರೂ ಇಷ್ಟಪಡುವ ಕ್ರೀಡೆಯಾಗಿದ್ದು, ಕನಿಷ್ಠ ಆಟದ ಮೈದಾನದಲ್ಲಾದರೂ ಇದು ನಮ್ಮನ್ನು ಒಟ್ಟುಗೂಡಿಸುವ ಒಂದು ಸಾಧನವಾಗಿರಬೇಕು. ಆತುರದ ನಿರ್ಧಾರ ತೆಗೆದುಕೊಂಡ ಎಲ್ಲರಿಗೂ ಇದೊಂದು ಎಚ್ಚರಿಕೆಯ ಕರೆಯಾಗಿದೆ. ಇದನ್ನು ಐಸಿಸಿ ಮಧ್ಯಸ್ಥಿಕೆವಹಿಸಿ ಬಿಕ್ಕಟ್ಟು ಬಗೆಹರಿಸಬೇಕು’’ಎಂದು ಹೇಳಿದ್ದಾರೆ.







