ವೃತ್ತಿಪರ ಕ್ರಿಕೆಟ್ನಿಂದ ಶಾನ್ ಮಾರ್ಷ್ ನಿವೃತ್ತಿ

ಶಾನ್ ಮಾರ್ಷ್ | Photo: PTI
ಹೊಸದಿಲ್ಲಿ: ಆಸ್ಟ್ರೇಲಿಯ ಕ್ರಿಕೆಟಿಗ ಶಾನ್ ಮಾರ್ಷ್ ರವಿವಾರ ವೃತ್ತಿಪರ ಕ್ರಿಕೆಟ್ನಿಂದ ನಿವೃತ್ತಿಯಾಗುವುದಾಗಿ ಘೋಷಿಸಿದ್ದಾರೆ.
ಬಿಗ್ಬ್ಯಾಶ್ ಲೀಗ್ನಲ್ಲಿ ಬುಧವಾರ ಸಿಡ್ನಿ ಥಂಡರ್ ವಿರುದ್ಧ ಮೆಲ್ಬರ್ನ್ ರೆನೆಗೆಡ್ಸ್ ಪರ ಕೊನೆಯ ಪಂದ್ಯವನ್ನು ಆಡಲಿದ್ದಾರೆ.
ನಿವೃತ್ತಿಯ ನಿರ್ಧಾರದ ಮೂಲಕ ಮಾರ್ಷ್ ಆಸ್ಟ್ರೇಲಿಯದ ಮಾಜಿ ನಾಯಕ ಆ್ಯರೊನ್ ಫಿಂಚ್ರನ್ನು ಅನುಸರಿಸಿದ್ದಾರೆ.
ಮೆಲ್ಬರ್ನ್ ಪರ ಆಡಲು ನಾನು ಇಷ್ಟಪಡುವೆ. ಕಳೆದ ಐದು ವರ್ಷಗಳಿಂದ ಕೆಲವು ಶ್ರೇಷ್ಠ ಆಟಗಾರರನ್ನು ಭೇಟಿಯಾಗಿರುವೆ. ನಾನು ಮಾಡಿರುವ ಗೆಳೆತನವು ಜೀವನದ ಕೊನೆಯ ತನಕ ಇರುತ್ತದೆ. ನನಗೆ ಆರಂಭದಿಂದ ಕೊನೆಯ ತನಕ ಬೆಂಬಲಿಸಿರುವ ಮೆಲ್ಬರ್ನ್ ತಂಡದ ಕೋಚ್ ಗಳು ಹಾಗೂ ಸಿಬ್ಬಂದಿ ವರ್ಗ, ತೆರೆಮರೆಯಲ್ಲಿದ್ದು ಬೆಂಬಲಿಸಿದವರಿಗೂ ಧನ್ಯವಾದ ಹೇಳುವೆ ಎಂದು 40ರ ವಯಸ್ಸಿನ ಮಾರ್ಷ್ ಹೇಳಿದ್ದಾರೆ.
ಗಾಯದ ಸಮಸ್ಯೆಯೊಂದಿಗೆ ಈ ಋತುವನ್ನು ಆರಂಭಿಸಿದ್ದ ಮಾರ್ಷ್ 5 ಪಂದ್ಯಗಳಲ್ಲಿ ಮೂರು ಅರ್ಧಶತಕಗಳ ಸಹಿತ 181 ರನ್ ಗಳಿಸಿದ್ದರು. 2019-20 ಋತುವಿನಲ್ಲಿ ಮೆಲ್ಬರ್ನ್ ತಂಡವನ್ನು ಸೇರುವ ಮೊದಲು 2011ರಿಂದ 2019ರ ತನಕ ದೀರ್ಘ ಕಾಲ ಪರ್ತ್ ಸ್ಕೋಚರ್ಸ್ ತಂಡವನ್ನು ಪ್ರತಿನಿಧಿಸಿದ್ದರು.
ಮಾರ್ಷ್ ಆಸ್ಟ್ರೇಲಿಯದ ಪರ ಎಲ್ಲ ಮೂರು ಮಾದರಿಯ ಕ್ರಿಕೆಟ್ ನಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದರು. ಅಂತರರಾಷ್ಟ್ರೀಯ ಕ್ರಿಕೆಟ್ ನಲ್ಲಿ 13 ಶತಕಗಳ ಸಹಿತ ಒಟ್ಟು 5,293 ರನ್ ಗಳಿಸಿದ್ದರು. ದಿ ಓವಲ್ ನಲ್ಲಿ ನಡೆದಿದ್ದ 2019ರ ಏಕದಿನ ವಿಶ್ವಕಪ್ ನಲ್ಲಿ ಶ್ರೀಲಂಕಾದ ವಿರುದ್ಧ ಕಾಂಗರೂ ಪಡೆಯ ಪರ ಕೊನೆಯ ಪಂದ್ಯ ಆಡಿದ್ದರು







