ಟಿ-20 ವಿಶ್ವಕಪ್ ಗೆದ್ದ ನಂತರ ಅಭಿಮಾನಿಗಳ ಕಣ್ತಪ್ಪಿಸಿ ರೈಲಿನಲ್ಲಿ ಮುಂಬೈಗೆ ಪ್ರಯಾಣಿಸಿದ ಶಿವಂ ದುಬೆ

ಶಿವಂ ದುಬೆ | Photo Credit : PTI
ಹೊಸದಿಲ್ಲಿ, ಮಾ.11: ಭಾರತ ಕ್ರಿಕೆಟ್ ತಂಡವು 2026ರ ಆವೃತ್ತಿಯ ಟಿ-20 ವಿಶ್ವಕಪ್ ಟ್ರೋಫಿ ಗೆದ್ದ ನಂತರ ಹೆಚ್ಚಿನ ಜನರು ಆಟಗಾರರು ವಿಶೇಷ ವಿಮಾನದಲ್ಲಿ ಪ್ರಯಾಣಿಸಬಹುದೆಂದು ನಿರೀಕ್ಷಿಸಿದ್ದರು. ಆದರೆ ಆಲ್ರೌಂಡರ್ ಶಿವಂ ದುಬೆ ಅಹ್ಮದಾಬಾದ್ನಿಂದ ಮುಂಬೈಗೆ ವಾಪಸಾಗಲು ವಿಭಿನ್ನ ಮಾರ್ಗ ಆಯ್ದುಕೊಂಡರು.
ವಿಮಾನಗಳೆಲ್ಲವೂ ಬುಕ್ ಆಗಿದ್ದ ಹಿನ್ನೆಲೆಯಲ್ಲಿ ಶಿವಂ ದುಬೆ ತನ್ನ ಪತ್ನಿ ಹಾಗೂ ಸ್ನೇಹಿತರೊಂದಿಗೆ ಸಾಮಾನ್ಯ ಪ್ರಯಾಣಿಕರಂತೆ ರೈಲಿನಲ್ಲಿ ಮುಂಬೈಗೆ ಪ್ರಯಾಣಿಸಿದ್ದಾರೆ.
ಮೊದಲಿಗೆ ನನಗೆ ಹಾಗೂ ನನ್ನ ಕುಟುಂಬಕ್ಕಾಗಿ ವಿಮಾನದ ಟಿಕೆಟ್ಗಾಗಿ ಪ್ರಯತ್ನಿಸಿದ್ದೆ. ಆದರೆ, ಯಾವುದೇ ಸೀಟು ಸಿಗಲಿಲ್ಲ. ಹೀಗಾಗಿ ಅಹ್ಮದಾಬಾದ್ನಿಂದ ಮುಂಬೈಗೆ ಬೆಳಗ್ಗಿನ ಜಾವದ ರೈಲಿನಲ್ಲಿ ಹೋಗಲು ನಿರ್ಧರಿಸಿದ್ದೆ. ನಮಗೆ ರಸ್ತೆ ಮಾರ್ಗದಲ್ಲೂ ಹೋಗಬಹುದಿತ್ತು. ಆದರೆ ರೈಲಿನಲ್ಲಿ ಬೇಗನೆ ತಲುಪಲು ಸಾಧ್ಯವಾಯಿತು’’ ಎಂದು ‘ಇಂಡಿಯನ್ ಎಕ್ಸ್ಪ್ರೆಸ್’ಗೆ ದುಬೆ ತಿಳಿಸಿದರು.
ಭಾರತಕ್ಕಾಗಿ ಆಗಷ್ಟೇ ವಿಶ್ವಕಪ್ ಗೆದ್ದ ಕಾರಣ ರೈಲ್ವೆ ನಿಲ್ದಾಣ ಅಥವಾ ರೈಲಿನೊಳಗೆ ಕ್ರಿಕೆಟ್ ಅಭಿಮಾನಿಗಳ ಕಣ್ತಪ್ಪಿಸಿಕೊಂಡು ಹೋಗುವುದು ದುಬೆಗೆ ದೊಡ್ಡ ತಲೆ ನೋವಾಗಿತ್ತು. ಈ ಕುರಿತು ಅವರ ಕುಟುಂಬ ಹಾಗೂ ಸ್ನೇಹಿತರುಗಳು ಚಿಂತಿತರಾಗಿದ್ದರು.
‘‘ನನ್ನ ಎಲ್ಲ ಕುಟುಂಬ ಹಾಗೂ ಸ್ನೇಹಿತರು ಚಿಂತಿತರಾಗಿದ್ದರು. ರೈಲ್ವೆ ನಿಲ್ದಾಣ ಅಥವಾ ರೈಲಿನೊಳಗೆ ಯಾರಾದರೂ ನಿನ್ನನ್ನು ಗುರುತಿಸಿದರೆ ಏನು ಮಾಡುತ್ತಿಯಾ?’ ಎಂದು ಎಲ್ಲರೂ ಪ್ರಶ್ನಿಸಿದ್ದರು’’ ಎಂದು ದುಬೆ ಹೇಳಿದ್ದಾರೆ.
ಕ್ರಿಕೆಟ್ ಅಭಿಮಾನಿಗಳ ಗಮನವನ್ನು ಬೇರೆಡೆಗೆ ಸೆಳೆಯಲು ಸಾದಾ ಉಡುಪನ್ನು ಧರಿಸಿದ್ದ ದುಬೆ, ತಲೆಗೆ ಕ್ಯಾಪ್ ಹಾಕಿ, ಮುಖಕ್ಕೆ ಮಾಸ್ಕ್ ಧರಿಸಿದ್ದರು. ಉದ್ದ ತೋಳಿನ ಟಿ-ಶರ್ಟ್ ಧರಿಸಿದ್ದರು. ರೈಲ್ವೆ ನಿಲ್ದಾಣದಲ್ಲಿ ಹೆಚ್ಚು ಜನಜಂಗುಳಿ ಇಲ್ಲದ ಬೆಳಗ್ಗೆ 5:10ರ ರೈಲನ್ನು ಆಯ್ಕೆ ಮಾಡಿದ್ದರು. ರೈಲು ಹತ್ತಲು ಕೆಲವೇ ನಿಮಿಷಗಳ ತನಕ ಕಾರಿನಲ್ಲಿ ಕುಳಿತು ಕಾದಿದ್ದರು.
ರೈಲು ಪ್ರಯಾಣದ ವೇಳೆ ಟಾಪ್ ಬರ್ತ್ನಲ್ಲಿದ್ದ ದುಬೆ ಬಳಿ ಟಿಕೆಟ್ ಪರಿಶೀಲಿಸಲು ಬಂದ ಟಿಸಿ ಅವರು, ಶಿವಂ ದುಬೆ? ಇವರ್ಯಾರು ಕ್ರಿಕೆಟಿಗರೇ? ಎಂದು ಕೇಳಿದ್ದರು. ಆಗ ತಕ್ಷಣವೇ ಪ್ರತಿಕ್ರಿಯಿಸಿದ ದುಬೆ ಪತ್ನಿ, ಅಲ್ಲ ಅವರಲ್ಲ, ಅವರು ಇಲ್ಲಿಗೇಕೆ ಬರುತ್ತಾರೆ ಎಂದು ಹೇಳಿದರು. ಆಗ ಟಿಸಿ ಮುಂದೆ ನಡೆದರು.
ದುಬೆ ಕೊನೆಗೂ ಸುರಕ್ಷಿತವಾಗಿ ಮುಂಬೈಗೆ ತಲುಪಿದರು. ರೈಲ್ವೇ ನಿಲ್ದಾಣದಿಂದ ಹೊರ ಹೋಗಲು ಪೊಲೀಸರು ಸಹಕರಿಸಿದರು.







