ಪಾಕಿಸ್ತಾನವನ್ನು ಭಾರತ ಹೀನಾಯವಾಗಿ ಸೋಲಿಸಿದೆ, ರೋಹಿತ್ ಪರಿಪೂರ್ಣ ಆಟಗಾರ: ಶುಐಬ್ ಅಖ್ತರ್

Photo : cricketworldcup.com
ಕರಾಚಿ: ಭಾರತ ವಿರುದ್ಧ ಶನಿವಾರ ನಡೆದ ಏಕದಿನ ವಿಶ್ವಕಪ್ ಪಂದ್ಯದಲ್ಲಿ ನೀರಸ ಪ್ರದರ್ಶನ ನೀಡಿರುವ ಪಾಕಿಸ್ತಾನ ಕ್ರಿಕೆಟ್ ತಂಡದ ವಿರುದ್ಧ ಮಾಜಿ ವೇಗದ ಬೌಲರ್ ಶುಐಬ್ ಅಖ್ತರ್ ವಾಗ್ದಾಳಿ ನಡೆಸಿದ್ದು, ಭಾರತ ತಂಡ ಪಾಕಿಸ್ತಾನ ತಂಡವನ್ನು ಮಕ್ಕಳ ರೀತಿ ಹೀನಾಯವಾಗಿ ಸೋಲಿಸಿತು ಎಂದರು.
ಭಾರತ ತಂಡ ಪಾಕಿಸ್ತಾನವನ್ನು ಕೇವಲ 191 ರನ್ಗೆ ಆಲೌಟ್ ಮಾಡಿದ್ದು, ಆ ನಂತರ ನಾಯಕ ರೋಹಿತ್ ಶರ್ಮಾ ಅವರ ಅರ್ಧಶತಕದ ಬಲದಿಂದ 20 ಓವರ್ ಗಳು ಬಾಕಿ ಇರುವಾಗಲೇ 7 ವಿಕೆಟ್ ಗಳ ಅಂತರದಿಂದ ಮಣಿಸಿತ್ತು.
ರೋಹಿತ್ ರನ್ನು ವಿಶೇಷವಾಗಿ ಪ್ರಶಂಶಿಸಿದ ಪಾಕ್ ನ ಮಾಜಿ ವೇಗದ ಬೌಲರ್ ಅಖ್ತರ್, ಅಗ್ರ ಸರದಿಯಲ್ಲಿ ತನ್ನ ದಿಟ್ಟ ಬ್ಯಾಟಿಂಗ್ ಮೂಲಕ ಪಂದ್ಯವನ್ನು ಏಕಪಕ್ಷೀಯವಾಗಿ ವಶಪಡಿಸಿಕೊಂಡರು ಎಂದರು.
ಪಾಕಿಸ್ತಾನದ ತುಂಬಾ ನಿರಾಶಾದಾಯಕ ಪ್ರದರ್ಶನ ಇದಾಗಿದೆ. ಭಾರತವು ಸಂಪೂರ್ಣವಾಗಿ ಪಾಕಿಸ್ತಾನವನ್ನು ಸದೆಬಡಿಯಿತು. ರೋಹಿತ್ ಶರ್ಮಾ ಒನ್ ಮ್ಯಾನ್ ಆರ್ಮಿ ಆಗಿ ಕಂಡು ಬಂದರು. ಅವರೊಬ್ಬ ಪರಿಪೂರ್ಣ ಬ್ಯಾಟರ್, ಪರಿಪೂರ್ಣ ಟೀಮ್ ಮ್ಯಾನ್. ರೋಹಿತ್ ಶರ್ಮಾ ಬ್ಯಾಟಿಂಗ್ ನೋಡಲು ಖುಷಿಯಾಗುತ್ತದೆ. ಪಾಕಿಸ್ತಾನ ದಾಳಿಯನ್ನು ಅವರು ಚೆನ್ನಾಗಿ ಎದುರಿಸಿದರು. ಕಳೆದ ಎರಡು ವರ್ಷಗಳಿಂದ ಗಳಿಸದೆ ಇರುವ ರನ್ ಅನ್ನು ಈಗ ಕಲೆ ಹಾಕಿ ಸೇಡು ತೀರಿಸಿಕೊಂಡರು ಎಂದು ಅಖ್ತರ್ ತನ್ನ ಯೂಟ್ಯೂಬ್ ಚಾನೆಲ್ ನಲ್ಲಿ ಹೇಳಿದ್ದಾರೆ.







