ಏಕದಿನ ಪಂದ್ಯಗಳಿಂದ ರೋಹಿತ್, ಕೊಹ್ಲಿ ನಿವೃತ್ತಿ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ರವಿಶಾಸ್ತ್ರಿ

ಭಾರತ ತಂಡದ ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್ನಿಂದ ನಿವೃತ್ತಿ ಪಡೆದ ಬಳಿಕ ಇದೇ ಮೊದಲ ಬಾರಿಗೆ ಈ ತಿಂಗಳ 19ರಿಂದ ಆರಂಭವಾಗುವ ಆಸ್ಟ್ರೇಲಿಯಾ ವಿರುದ್ಧದ ಏಕ ದಿನ ಸರಣಿಯಲ್ಲಿ ಆಡಲಿದ್ದು, 2027ರ ವಿಶ್ವಕಪ್ ವರೆಗೂ ಅವರು ತಂಡದಲ್ಲಿ ಮುಂದುವರಿಯುತ್ತಾರೆಯೇ ಎಂಬ ಬಗ್ಗೆ ವ್ಯಾಪಕ ಚರ್ಚೆಗಳು ನಡೆಯುತ್ತಿವೆ. ಏತನ್ಮಧ್ಯೆ ಭಾರತ ತಂಡದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿಯವರು ಉಭಯ ಆಟಗಾರರ ನಿವೃತ್ತಿ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಫೋಕ್ಸ್ ಸ್ಪೋಟ್ರ್ಸ್ ಜತೆಗಿನ ಸಂವಾದದಲ್ಲಿ ಉಭಯ ಆಟಗಾರರ ಸಾಮರ್ಥ್ಯದ ಬಗ್ಗೆ ಮತ್ತು ಭಾರತದ ಸೀಮಿತ ಓವರ್ ಗಳ ಕ್ರಿಕೆಟ್ ತಂಡಕ್ಕೆ ಕೊಡುಗೆ ನೀಡುವ ಸ್ಫೂರ್ತಿ ಮುಂದುವರಿದ ಬಗ್ಗೆ ಶಾಸ್ತ್ರಿ ವಿಶ್ವಾಸ ವ್ಯಕ್ತಪಡಿಸಿದರು.
"ವಿರಾಟ್ ಮಾಸ್ಟರ್ ಚೇಸರ್ ಮತ್ತು ರೋಹಿತ್ ಅಗ್ರಕ್ರಮಾಂಕದಲ್ಲಿ ಸ್ಫೋಟಕ ಬ್ಯಾಟ್ಸ್ಮನ್. ತಮ್ಮಲ್ಲಿ ಇನ್ನೂ ಸಾಕಷ್ಟು ಕ್ರಿಕೆಟ್ ಉಳಿದುಕೊಂಡಿದೆ ಎಂಬ ಭಾವನೆ ಅವರದ್ದು" ಎಂದು ಶಾಸ್ತ್ರಿ ವಿಶ್ಲೇಷಿಸಿದರು. ಅಂತರರಾಷ್ಟ್ರೀಯ ಕ್ರಿಕೆಟ್ ನಲ್ಲಿ ಆಟಗಾರರ ಧೀರ್ಘಾಯುಷ್ಯ ಹಲವು ಅಂಶಗಳನ್ನ ಅವಲಂಬಿಸಿದೆ ಎಂದು ಹೇಳಿದರು.
"ಕ್ರಿಕೆಟ್ ಬಗ್ಗೆ ನಿಮಗೆ ಎಷ್ಟು ಹಸಿವು ಇದೆ, ಎಷ್ಟರ ಮಟ್ಟಿಗೆ ನೀವು ಸಮರ್ಥರು, ಇನ್ನೂ ಆಟದ ಬಗ್ಗೆ ಆಳವಾದ ಒಲವು ಉಳಿದುಕೊಂಡಿದೆಯೇ ಮುಂತಾದ ಹಲವು ಅಂಶಗಳು ಗಣನೆಗೆ ಬರುತ್ತವೆ. ಅವರ ಅನುಭವ ಹೆಚ್ಚಿನ ನೆರವಿಗೆ ಬರಲಿದೆ" ಎಂದು ಸ್ಪಷ್ಟಪಡಿಸಿದರು. 2027ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆಯುವ ವಿಶ್ವಕಪ್ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಾದ ಅಗತ್ಯವನ್ನು ಶಾಸ್ತ್ರಿ ಪ್ರತಿಪಾದಿಸಿದರು.







