ಕಿವೀಸ್ ವಿರುದ್ಧದ ಭಾರತೀಯ ಟಿ20 ತಂಡಕ್ಕೆ ಶ್ರೇಯಸ್, ರವಿ ಬಿಷ್ಣೋಯ್ ಸೇರ್ಪಡೆ

Shreyas Iyer (L) and Ravi Bishnoi. Credit: PTI Photo
ಮುಂಬೈ, ಜ. 17: ನ್ಯೂಝಿಲ್ಯಾಂಡ್ ವಿರುದ್ಧದ ಮುಂಬರುವ ಐದು ಪಂದ್ಯಗಳ ಟಿ20 ಸರಣಿಗೆ ಭಾರತ ತಂಡಕ್ಕೆ ಶ್ರೇಯಸ್ ಅಯ್ಯರ್ ಮತ್ತು ರವಿ ಬಿಷ್ಣೋಯ್ರನ್ನು ಸೇರಿಸಲಾಗಿದೆ.
ಶ್ರೇಯಸ್ರನ್ನು ಸರಣಿಯ ಮೊದಲ ಮೂರು ಪಂದ್ಯಗಳಿಗೆ ತಿಲಕ್ ವರ್ಮಾರ ಬದಲಿಗೆ ಸೇರ್ಪಡೆಗೊಳಿಸಿದರೆ, ಆಲ್ರೌಂಡರ್ ವಾಶಿಂಗ್ಟನ್ ಸುಂದರ್ ಸ್ಥಾನಕ್ಕೆ ಲೆಗ್ ಸ್ಪಿನ್ನರ್ ಬಿಷ್ಣೋಯ್ರನ್ನು ತರಲಾಗಿದೆ.
ತಿಲಕ್ ಈ ತಿಂಗಳ ಆದಿ ಭಾಗದಲ್ಲಿ ಕಿಬ್ಬೊಟ್ಟೆಯ ಗಾಯಕ್ಕೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಹಾಗಾಗಿ, ಅವರು ಕಿವೀಸ್ ವಿರುದ್ಧದ ಟಿ20 ಸರಣಿಯ ಮೊದಲ ಮೂರು ಪಂದ್ಯಗಳಿಗೆ ಲಭ್ಯವಿರುವುದಿಲ್ಲ. ‘‘ಅವರು ತರಬೇತಿಗೆ ಮರಳಿದಾಗ ಅವರ ಚೇತರಿಕೆಯ ಆಧಾರದಲ್ಲಿ ಉಳಿದ ಎರಡು ಪಂದ್ಯಗಳಿಗೆ ಅವರ ಲಭ್ಯತೆಯನ್ನು ನಿರ್ಧರಿಸಲಾಗುವುದು’’ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯ ಪತ್ರಿಕಾ ಹೇಳಿಕೆಯೊಂದು ತಿಳಿಸಿದೆ.
ಈ ನಡುವೆ, ನ್ಯೂಝಿಲ್ಯಾಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಪಕ್ಕೆಲುಬಿನ ಗಾಯಕ್ಕೆ ಒಳಗಾಗಿರುವ ವಾಶಿಂಗ್ಟನ್ ಸುಂದರ್ ಆ ತಂಡದ ವಿರುದ್ಧದ ಟಿ20 ಸರಣಿಯಿಂದ ಹೊರಬಿದ್ದಿದ್ದಾರೆ. ಅವರು ಎರಡನೇ ಏಕದಿನ ಪಂದ್ಯದಲ್ಲೂ ತಂಡದಿಂದ ಹೊರಗಿದ್ದರು. ಉಳಿದ ಎರಡು ಏಕದಿನ ಪಂದ್ಯಗಳಲ್ಲಿ ಅವರ ಸ್ಥಾನದಲ್ಲಿ ಆಯುಶ್ ಬದೋನಿ ಆಡುತ್ತಿದ್ದಾರೆ.
ತುಂಬಾ ಸಮಯ ಹೊರಗಿದ್ದ ಬಳಿಕ, ಶ್ರೇಯಸ್ ಮತ್ತು ಬಿಷ್ಣೋಯ್ ಭಾರತೀಯ ಟಿ20 ತಂಡಕ್ಕೆ ಮರಳಿದ್ದಾರೆ. ಶ್ರೇಯಸ್ ಕೊನೆಯ ಅಂತರ್ರಾಷ್ಟ್ರೀಯ ಟಿ20 ಪಂದ್ಯವನ್ನು ಆಡಿದ್ದು ಎರಡು ವರ್ಷಗಳಿಗೂ ಹೆಚ್ಚು ಹಿಂದೆ. ಅವರು 2023 ಡಿಸೆಂಬರ್ನಲ್ಲಿ ಆಸ್ಟ್ರೇಲಿಯದ ವಿರುದ್ಧ ಕೊನೆಯ ಪಂದ್ಯವನ್ನು ಆಡಿದ್ದರು.
ಪರಿಷ್ಕೃತ ಭಾರತ ಟಿ20 ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಅಭಿಶೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ಕೀಪರ್), ಶ್ರೇಯಸ್ ಅಯ್ಯರ್, ಹಾರ್ದಿಕ್ ಪಾಂಡ್ಯ, ಶಿವಮ್ ದುಬೆ, ಅಕ್ಷರ್ ಪಟೇಲ್ (ಉಪನಾಯಕ), ರಿಂಕು ಸಿಂಗ್, ಜಸ್ಪ್ರೀತ್ ಬುಮ್ರಾ, ಹರ್ಷಿತ್ ರಾಣಾ, ಅರ್ಶದೀಪ್ ಸಿಂಗ್, ಕುಲದೀಪ್ ಯಾದವ್, ವರುಣ್ ಚಕ್ರವರ್ತಿ, ಇಶಾನ್ ಕಿಶನ್ (ವಿಕೆಟ್ಕೀಪರ್), ರವಿ ಬಿಷ್ಣೋಯ್.







