ಸತತ ಎರಡನೇ ಫೈನಲ್ ಪಂದ್ಯ ಸೋತ ಶ್ರೇಯಸ್ ಅಯ್ಯರ್

ಶ್ರೇಯಸ್ ಅಯ್ಯರ್ | PC : PTI
ಮುಂಬೈ: ಶ್ರೇಯಸ್ ಅಯ್ಯರ್ ಒಂದು ತಿಂಗಳಲ್ಲಿ ಎರಡು ಆಘಾತಕಾರಿ ಸೋಲು ಕಂಡಿದ್ದಾರೆ. ಭಾರತ ಕ್ರಿಕೆಟ್ ತಂಡದ ಬ್ಯಾಟರ್ ಅಯ್ಯರ್ 2025ರ ಆವೃತ್ತಿಯ ಐಪಿಎಲ್ ಫೈನಲ್ ನಲ್ಲಿ ಪಂಜಾಬ್ ಕಿಂಗ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಸೋತ 10 ದಿನಗಳು ಕಳೆದ ನಂತರ ಟಿ20 ಮುಂಬೈ ಲೀಗ್ ನಲ್ಲಿ ಮತ್ತೊಂದು ಫೈನಲ್ ಪಂದ್ಯದಲ್ಲಿ ಸೋಲುಂಡಿದ್ದಾರೆ.
ಸ್ಥಳೀಯ ಟಿ20 ಸ್ಪರ್ಧಾವಳಿಯಲ್ಲಿ ಅಯ್ಯರ್ ಸೊಬೊ ಮುಂಬೈ ಪಾಲ್ಕೊನ್ಸ್ ತಂಡದ ನಾಯಕತ್ವ ವಹಿಸಿದ್ದು, ಜೂನ್ ತಿಂಗಳನ್ನು ಗೆಲುವಿನೊಂದಿಗೆ ಅಂತ್ಯಗೊಳಿಸುವತ್ತ ಚಿತ್ತ ಹರಿಸಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ಮುಂಬೈ ಫಾಲ್ಕೊನ್ಸ್ ತಂಡವು ವಾಂಖೆಡೆ ಸ್ಟೇಡಿಯಮ್ ನಲ್ಲಿ ನಡೆದಿದ್ದ ಫೈನಲ್ ಪಂದ್ಯದಲ್ಲಿ ಮುಂಬೈ ಸೌತ್ ಸೆಂಟ್ರಲ್ ಮರಾಠ ರಾಯಲ್ಸ್ ವಿರುದ್ಧ ಸೋಲುಂಡಿದೆ. ಐಪಿಎಲ್ ಫೈನಲ್ ಪಂದ್ಯದಂತೆಯೇ ಈ ಪಂದ್ಯದಲ್ಲೂ ಅಯ್ಯರ್ ಅವರು ಬ್ಯಾಟಿಂಗ್ ನಲ್ಲಿ ವೈಫಲ್ಯ ಕಂಡಿದ್ದಾರೆ.
ಪ್ರಸಕ್ತ ಜೂನ್ ತಿಂಗಳಲ್ಲಿ ಶ್ರೇಯಸ್ ಅಯ್ಯರ್ ಸತತ ಎರಡು ಫೈನಲ್ ಪಂದ್ಯಗಳನ್ನು ಸೋತಿದ್ದಾರೆ. ಈ ಎರಡು ಪಂದ್ಯಗಳಿಗಿಂತ ಮೊದಲು ಸತತ ಐದು ಫೈನಲ್ ಪಂದ್ಯಗಳಲ್ಲಿ ಅಯ್ಯರ್ ಜಯಶಾಲಿಯಾಗಿದ್ದರು.
ರಣಜಿ ಟ್ರೋಫಿ ಎತ್ತಿ ಹಿಡಿದಿದ್ದ ಮುಂಬೈ ಕ್ರಿಕೆಟ್ ತಂಡದ ಭಾಗವಾಗಿದ್ದ ಅಯ್ಯರ್, ಮುಂಬೈ ತಂಡವು ಇರಾನಿ ಕಪ್ ಗೆಲ್ಲಲು ನಿರ್ಣಾಯಕ ಪಾತ್ರವಹಿಸಿದ್ದರು. 2024ರಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡವು ಸ್ಮರಣೀಯ ಐಪಿಎಲ್ ಟಿ20 ಪ್ರಶಸ್ತಿ ಗೆಲ್ಲುವಲ್ಲಿ ನಾಯಕತ್ವವಹಿಸಿದ್ದರು.ತನ್ನ ರಾಜ್ಯ ತಂಡ ಮುಂಬೈ, ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಪ್ರಶಸ್ತಿ ಜಯಿಸಲು ನೇತೃತ್ವವಹಿಸಿದ್ದರು. ಈ ವರ್ಷಾರಂಭದಲ್ಲಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದ ಭಾರತ ಕ್ರಿಕೆಟ್ ತಂಡದ ಸದಸ್ಯರಾಗಿದ್ದರು.
ಪಂದ್ಯದ ನಂತರ ಭಾವುಕರಾಗಿ ಮಾತನಾಡಿದ ಅಯ್ಯರ್, ‘‘ಯಾವುದೇ ನಿರ್ದಿಷ್ಟ ಘಟನೆಯನ್ನು ನಿಖರವಾಗಿ ಹೇಳಲು ಬಯಸುವುದಿಲ್ಲ. ಒಟ್ಟಾರೆಯಾಗಿ ನಮ್ಮ ಹುಡುಗರು ಅದ್ಭುತ ಪ್ರಯತ್ನ ಮಾಡಿದ್ದಾರೆ. ಫೈನಲ್ ಗೆ ಹೋಗುವ ಹಾದಿಯಲ್ಲಿ ನಾವು ಕೇವಲ ಒಂದು ಪಂದ್ಯ ಸೋತಿದ್ದೇವೆ. ಆದರೆ ಫೈನಲ್ ಪಂದ್ಯದ ಸೋಲಿಗೆ ಯಾರನ್ನೂ ದೂರಲಾರೆ. ಇದು ನನಗೆ ತುಂಬಾ ಬೇಸರ ತಂದಿದೆ’’ ಎಂದರು.
ಈ ಸಂದರ್ಭದಲ್ಲಿ ಹಾಜರಾಗಿದ್ದ ಭಾರತೀಯ ಕ್ರಿಕೆಟ್ ದಂತಕತೆ ರೋಹಿತ್ ಶರ್ಮಾ ಅವರು ಅಯ್ಯರ್ ಗೆ ರನ್ನರ್ಸ್ ಅಪ್ ಪದಕವನ್ನು ಪ್ರದಾನಿಸಿದರು.







