ಆಸ್ಟ್ರೇಲಿಯ ‘ಎ’ ವಿರುದ್ಧ ಚತುರ್ದಿನ ಪಂದ್ಯ | ಭಾರತ ‘ಎ’ತಂಡ ಪ್ರಕಟ, ಶ್ರೇಯಸ್ ಅಯ್ಯರ್ ನಾಯಕ

ಶ್ರೇಯಸ್ ಅಯ್ಯರ್ | PC : PTI
ಹೊಸದಿಲ್ಲಿ, ಸೆ.6: ಆಸ್ಟ್ರೇಲಿಯ ‘ಎ’ ತಂಡದ ವಿರುದ್ಧ ಲಕ್ನೊದಲ್ಲಿ ನಡೆಯಲಿರುವ ಮುಂಬರುವ ಎರಡು ಚತುರ್ದಿನ ಪಂದ್ಯಗಳಿಗೆ ಶ್ರೇಯಸ್ ಅಯ್ಯರ್ ನಾಯಕತ್ವದ 15 ಸದಸ್ಯರನ್ನು ಒಳಗೊಂಡ ಭಾರತ ‘ಎ’ ತಂಡವನ್ನು ಬಿಸಿಸಿಐ ಶನಿವಾರ ಪ್ರಕಟಿಸಿದೆ.
ಸರಣಿಯು ಸೆಪ್ಟಂಬರ್ 16ರಿಂದ ಆರಂಭವಾಗಲಿದೆ, ಕೆ.ಎಲ್.ರಾಹುಲ್ ಹಾಗೂ ಮುಹಮ್ಮದ್ ಸಿರಾಜ್ ಸೆ.23ರಂದು ಆರಂಭವಾಗಲಿರುವ 2ನೇ ಪಂದ್ಯದ ವೇಳೆ ತಂಡವನ್ನು ಸೇರಿಕೊಳ್ಳಲಿದ್ದಾರೆ.
ಅಯ್ಯರ್ ಅವರು ಏಶ್ಯಕಪ್ಗೆ ಭಾರತೀಯ ತಂಡಕ್ಕೆ ಆಯ್ಕೆಯಾಗಿಲ್ಲ. ಏಶ್ಯಕಪ್ ಟೂರ್ನಿಯು ಸೆ.9ರಿಂದ ಯುಎಇನಲ್ಲಿ ಆರಂಭವಾಗಲಿದೆ. ಪ್ರಮುಖ ಬ್ಯಾಟರ್ ಅಯ್ಯರ್ ಸದ್ಯ ಬೆಂಗಳೂರಿನಲ್ಲಿ ನಡೆಯುತ್ತಿರುವ ದುಲೀಪ್ ಟ್ರೋಫಿ ಸೆಮಿ ಫೈನಲ್ನಲ್ಲಿ ಪಶ್ಚಿಮ ವಲಯದ ಪರವಾಗಿ ಕೇಂದ್ರ ವಲಯದ ವಿರುದ್ಧ ಆಡುತ್ತಿದ್ದಾರೆ.
ತಂಡದಲ್ಲಿ ಅನುಭವಿ ಹಾಗೂ ಉದಯೋನ್ಮುಖ ಪ್ರತಿಭೆಗಳ ಮಿಶ್ರಣವಿದೆ. ಧ್ರುವ ಜುರೆಲ್ ಉಪ ನಾಯಕ ಹಾಗೂ ವಿಕೆಟ್ಕೀಪರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಇತರ ಪ್ರಮುಖ ಆಟಗಾರರಾದ ಆರಂಭಿಕ ಬ್ಯಾಟರ್ ಅಭಿಮನ್ಯು ಈಶ್ವರನ್ ಹಾಗೂ ದೇವದತ್ತ ಪಡಿಕ್ಕಲ್ ಜೊತೆಗೆ ಭರವಸೆಯ ಯುವ ಆಟಗಾರರಾದ ಸಾಯಿ ಸುದರ್ಶನ್ ಹಾಗೂ ಆಯುಷ್ ಬದೋನಿ ತಂಡದಲ್ಲಿದ್ದಾರೆ.
ಪ್ರಸಿದ್ಧ ಕೃಷ್ಣ ಹಾಗೂ ಖಲೀಲ್ ಅಹ್ಮದ್ ನೇತೃತ್ವದ ಬೌಲಿಂಗ್ ವಿಭಾಗದಲ್ಲಿ ಸ್ಪಿನ್ನರ್ಗಳಾದ ಹರ್ಷ ದುಬೆ, ತನುಷ್ ಕೋಟ್ಯಾನ್ ಹಾಗೂ ಮಾನವ್ ಸುಥರ್ ಅವರಿದ್ದಾರೆ. ತಂಡದಲ್ಲಿ ಆಲ್ರೌಂಡರ್ ನಿತೀಶ್ಕುಮಾರ್ ರೆಡ್ಡಿ ಹಾಗೂ ಲೆಗ್ ಸ್ಪಿನ್ನರ್ ಗುರ್ನೂರ್ ಬ್ರಾರ್ ಅವರಿದ್ದಾರೆ.
*ಭಾರತ ‘ಎ’ ತಂಡ: ಶ್ರೇಯಸ್ ಅಯ್ಯರ್(ನಾಯಕ), ಅಭಿಮನ್ಯು ಈಶ್ವರನ್, ಎನ್.ಜಗದೀಶನ್(ವಿಕೆಟ್ಕೀಪರ್), ಸಾಯಿ ಸುದರ್ಶನ್, ಧ್ರುವ ಜುರೆಲ್(ಉಪ ನಾಯಕ, ವಿಕೆಟ್ಕೀಪರ್), ದೇವದತ್ತ ಪಡಿಕ್ಕಲ್, ಹರ್ಷ ದುಬೆ, ಆಯುಷ್ ಬದೋನಿ, ನಿತೀಶ್ ಕುಮಾರ್ ರೆಡ್ಡಿ, ತನುಷ್ ಕೋಟ್ಯಾನ್, ಪ್ರಸಿದ್ಧ ಕೃಷ್ಣ, ಗುರ್ನೂರ್ ಬ್ರಾರ್, ಖಲೀಲ್ ಅಹ್ಮದ್, ಮಾನವ್ ಸುಥರ್, ಯಶ್ ಠಾಕೂರ್.







