ನಾನು ಚೇತರಿಕೆಯ ಹಾದಿಯಲ್ಲಿದ್ದೇನೆ : ಶ್ರೇಯಸ್ ಅಯ್ಯರ್

ಶ್ರೇಯಸ್ ಅಯ್ಯರ್ | Photo Credit : PTI
ಸಿಡ್ನಿ, ಅ.30: ಆಸ್ಟ್ರೇಲಿಯ ತಂಡದ ವಿರುದ್ಧ ಮೂರನೇ ಏಕದಿನ ಪಂದ್ಯದ ವೇಳೆ ಗಾಯಗೊಂಡಿದ್ದ ಭಾರತೀಯ ಬ್ಯಾಟರ್ ಶ್ರೇಯಸ್ ಅಯ್ಯರ್ ಗುರುವಾರ ಸಾಮಾಜಿಕ ಮಾಧ್ಯಮದಲ್ಲಿ ತನ್ನ ಆರೋಗ್ಯದ ಬಗ್ಗೆ ಹೊಸ ಮಾಹಿತಿ ಹಂಚಿಕೊಂಡಿದ್ದಾರೆ.
‘‘ನಾನು ಸದ್ಯ ಚೇತರಿಕೆಯ ಪ್ರಕ್ರಿಯೆಯಲ್ಲಿದ್ದೇನೆ. ದಿನದಿಂದ ದಿನಕ್ಕೆ ಸುಧಾರಿಸುತ್ತಿದ್ದೇನೆ. ನನಗೆ ದೊರೆತ ಎಲ್ಲ ರೀತಿಯ ಶುಭಾಶಯಗಳು ಹಾಗೂ ಬೆಂಬಲ ನೋಡಿ ತುಂಬಾ ಕೃತಜ್ಞನಾಗಿದ್ದೇನೆ. ನನ್ನ ಆರೋಗ್ಯ ಚೇತರಿಕೆಗೆ ಶುಭ ಹಾರೈಸಿರುವ ಎಲ್ಲರಿಗೂ ಧನ್ಯವಾದಗಳು’’ ಎಂದು ಶ್ರೇಯಸ್ ಅಯ್ಯರ್ ಇನ್ಸ್ಟಾಗ್ರಾಮ್ನಲ್ಲಿ ಬರೆದಿದ್ದಾರೆ.
ಶ್ರೇಯಸ್ ಶನಿವಾರ ಕ್ಯಾಚ್ ಪಡೆದ ನಂತರ ಪಕ್ಕೆಲುಬಿನ ಗಾಯಕ್ಕೆ ಒಳಗಾಗಿದ್ದರು. ಆಂತರಿಕ ರಕ್ತಸ್ರಾವವಾದ ನಂತರ ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದು ಐಸಿಯುಗೆ ದಾಖಲಿಸಲಾಗಿತ್ತು. ಇದೀಗ ಚೇತರಿಸಿಕೊಳ್ಳುತ್ತಿರುವ ಶ್ರೇಯಸ್ ಸೋಮವಾರ ಐಸಿಯುನಿಂದ ಹೊರಬಂದಿದ್ದಾರೆ.
ಭಾರತದ ಟಿ-20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಮಂಗಳವಾರ ಶ್ರೇಯಸ್ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದು, ‘‘ನಾನು ನಮ್ಮ ಫಿಸಿಯೋ ಕಮಲೇಶ್ ಜೈನ್ಗೆ ಫೋನ್ ಮಾಡಿದ್ದೇನೆ. ಅಯ್ಯರ್ ಇದೀಗ ಫೋನ್ನಲ್ಲಿ ಪ್ರತಿಕ್ರಿಯಿಸಿದ್ದು, ದೇವರ ದಯೆಯಿಂದ ಅವರು ಈಗ ಚೆನ್ನಾಗಿದ್ದಾರೆ. ಟಿ-20 ಸರಣಿಯ ನಂತರ ಅವರೊಂದಿಗೆ ನಾವು ಸ್ವದೇಶಕ್ಕೆ ವಾಪಸಾಗಲಿದ್ದೇವೆ’’ ಎಂದಿದ್ದರು.







