ಐಪಿಎಲ್ ನಾಯಕನಾಗಿ ವಿಶಿಷ್ಟ ದಾಖಲೆ ಸೃಷ್ಟಿಸಿದ ಶ್ರೇಯಸ್ ಅಯ್ಯರ್

PC: x.com/ShreyasIyer15
ಹೊಸದಿಲ್ಲಿ: ಭಾನುವಾರ ನಡೆದ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ 10 ವಿಕೆಟ್ ಗಳ ಸುಲಭ ಜಯ ಸಾಧಿಸುವ ಮೂಲಕ ಪಂಜಾಬ್ ಕಿಂಗ್ಸ್ ಪ್ಲೇಆಫ್ ಸ್ಥಾನವನ್ನು ಖಾತರಿಪಡಿಸಿಕೊಂಡಿದೆ. 12 ಪಂದ್ಯಗಳಿಂದ 17 ಅಂಕ ಸಂಪಾದಿಸಿದ ಪಂಜಾಬ್, ಅಷ್ಟೇ ಅಂಕ ಪಡೆದ ಆರ್ಸಿಬಿ ಬಳಿಕ ಮೂರನೇ ಸ್ಥಾನದಲ್ಲಿದೆ. ಹೆಚ್ಚಿನ ರನ್ರೇಟ್ ಆಧಾರದಲ್ಲಿ ಆರ್ಸಿಬಿ ದ್ವಿತೀಯ ಸ್ಥಾನಿಯಾಗಿದೆ.
ಮೊದಲ ಬಾರಿಗೆ ನಾಯಕನಾಗಿ ಪಂಜಾಬ್ ತಂಡವನ್ನು ಪ್ಲೇಆಫ್ ಹಂತಕ್ಕೆ ಒಯ್ದ ಶ್ರೇಯಸ್ ಅಯ್ಯರ್ ವಿಶಿಷ್ಟ ದಾಖಲೆಯನ್ನೂ ಸ್ಥಾಪಿಸಿದ್ದಾರೆ. ಮೂರು ಭಿನ್ನ ತಂಡಗಳ ನಾಯಕರಾಗಿ ಪ್ಲೇಆಫ್ ಹಂತಕ್ಕೆ ತಂಡವನ್ನು ಮುನ್ನಡೆಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಇದಕ್ಕೂ ಮುನ್ನ 2019 ಮತ್ತು 2020ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ 2024ರಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಅವರು ಪ್ಲೇಆಫ್ ಹಂತಕ್ಕೆ ಮುನ್ನಡೆಸಿದ್ದರು.
ಒಟ್ಟಾರೆಯಾಗಿ ಮೂರು ಭಿನ್ನ ಐಪಿಎಲ್ ಫ್ರಾಂಚೈಸಿ ಪರ ಆಡಿದ ಐದನೇ ಆಟಗಾರ ಎಂಬ ಹೆಗ್ಗಳಿಕೆಗೆ ಅಯ್ಯರ್ ಪಾತ್ರರಾಗಿದ್ದಾರೆ. ಸ್ಟೀವ್ ಸ್ಮಿತ್, ಕುಮಾರ್ ಸಂಗಕ್ಕಾರ, ಮಹೇಲಾ ಜಯವರ್ಧನೆ ಮತ್ತು ಅಜಿಂಕ್ಯಾ ರೆಹಾನೆ ಈ ಮೊದಲು ಈ ಸಾಧನೆ ಮಾಡಿದ್ದರು. ಈ ಪೈಕಿ ಅಯ್ಯರ್ ಮತ್ತು ಸಂಗಕ್ಕಾರ ಮಾತ್ರ ಮೂರು ತಂಡಗಳ ಪೂರ್ಣಾವಧಿ ನಾಯಕರಾಗಿದ್ದರು. ಪಂಜಾಬ್ ತಂಡ ತನ್ನ ಕೊನೆಯ ಎರಡು ಲೀಗ್ ಪಂದ್ಯಗಳಲ್ಲಿ ಮೇ 24ರಂದು ಡೆಲ್ಲಿ ಕ್ಯಾಪಿಟಲ್ಸ್ ಮತ್ತು 26ರಂದು ಮುಂಬೈ ಇಂಡಿಯನ್ಸ್ ವಿರುದ್ಧ ಆಡಲಿದೆ.





