ಶ್ರೇಯಸ್ ಅಯ್ಯರ್ ಚೇತರಿಕೆ; ಆಸ್ಪತ್ರೆಯಿಂದ ಬಿಡುಗಡೆ

ಶ್ರೇಯಸ್ ಅಯ್ಯರ್ (File Photo: PTI)
ಹೊಸದಿಲ್ಲಿ: ಸಿಡ್ನಿಯಲ್ಲಿ ಆಸ್ಟ್ರೇಲಿಯಾ ತಂಡದ ವಿರುದ್ಧ ನಡೆದಿದ್ದ ಮೂರನೆ ಹಾಗೂ ಅಂತಿಮ ಪಂದ್ಯದಲ್ಲಿ ಕ್ಯಾಚ್ ಪಡೆಯುವ ಪ್ರಯತ್ನದಲ್ಲಿ ಗಾಯಗೊಂಡಿದ್ದ ಭಾರತೀಯ ಏಕದಿನ ತಂಡದ ಉಪ ನಾಯಕ ಶ್ರೇಯಸ್ ಅಯ್ಯರ್ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು, ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ಈ ಕುರಿತು ಶನಿವಾರ ಪ್ರಕಟನೆ ಬಿಡುಗಡೆ ಮಾಡಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI), “ಶ್ರೇಯಸ್ ಅಯ್ಯರ್ ಅವರ ಆರೋಗ್ಯ ಸ್ಥಿರವಾಗಿದ್ದು, ಉತ್ತಮವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಅವರನ್ನಿಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ” ಎಂದು ತಿಳಿಸಿದೆ.
ಸಿಡ್ನಿಯಲ್ಲಿ ನಡೆದಿದ್ದ ಮೂರನೆಯ ಏಕದಿನ ಪಂದ್ಯದಲ್ಲಿ ಹರ್ಷಿತ್ ರಾಣಾ ಬೌಲಿಂಗ್ ನಲ್ಲಿ ಆಸ್ಟ್ರೇಲಿಯ ಬ್ಯಾಟರ್ ಅಲೆಕ್ಸ್ ಕ್ಯಾರಿ ನೀಡಿದ್ದ ಕಠಿಣ ಕ್ಯಾಚ್ ಅನ್ನು ಹಿಡಿಯುವ ಪ್ರಯತ್ನದಲ್ಲಿ ಶ್ರೇಯಸ್ ಅಯ್ಯರ್ ಎಡ ಕೆಳಭಾಗದ ಪಕ್ಕೆಲುಬಿನ ಗಾಯಕ್ಕೆ ತುತ್ತಾಗಿದ್ದರು. ಅವರು ದೈಹಿಕವಾಗಿ ಸಮರ್ಥರಾದ ಕೂಡಲೇ ಭಾರತ ತಂಡಕ್ಕೆ ಮರಳುವ ನಿರೀಕ್ಷೆ ಇದ್ದರೂ, ಕನಿಷ್ಠ ಪಕ್ಷ ಮುಂದಿನ ಎರಡು ತಿಂಗಳ ಕಾಲ ಅವರು ತಂಡದಿಂದ ಹೊರಗುಳಿಯಬೇಕಾದ ಅನಿವಾರ್ಯತೆ ಇದೆ ಎಂದು ಹೇಳಲಾಗಿದೆ.





