ನ್ಯೂಝಿಲ್ಯಾಂಡ್ ವಿರುದ್ಧದ ಏಕದಿನ ಸರಣಿ| ಟೀಮ್ ಇಂಡಿಯಾ ಸೇರಲು ಶ್ರೇಯಸ್ ಅಯ್ಯರ್ಗೆ ಹಸಿರು ನಿಶಾನೆ

photo: PTI
ಹೊಸದಿಲ್ಲಿ, ಜ.9: ನ್ಯೂಝಿಲ್ಯಾಂಡ್ ವಿರುದ್ಧ ಮುಂಬರುವ ಮೂರು ಪಂದ್ಯಗಳ ಏಕದಿನ ಸರಣಿಯನ್ನಾಡಲು ಭಾರತೀಯ ಕ್ರಿಕೆಟ್ ತಂಡವನ್ನು ಸೇರಲು ಶ್ರೇಯಸ್ ಅಯ್ಯರ್ಗೆ ಹಸಿರು ನಿಶಾನೆ ತೋರಲಾಗಿದೆ.
ಈ ತಿಂಗಳಾರಂಭದಲ್ಲಿ ಭಾರತದ 15 ಸದಸ್ಯರ ತಂಡದಲ್ಲಿ ಶ್ರೇಯಸ್ ಅಯ್ಯರ್ರನ್ನು ಆಯ್ಕೆ ಮಾಡಲಾಗಿತ್ತು. ಆದರೆ ಅವರ ಲಭ್ಯತೆಯು ಫಿಟ್ನೆಸ್ ಸಾಬೀತುಪಡಿಸುವುದನ್ನು ಅವಲಂಬಿಸಿತ್ತು.
50 ಓವರ್ಗಳ ವಿಜಯ್ ಹಝಾರೆ ಟ್ರೋಫಿ ಟೂರ್ನಿಯಲ್ಲಿ ತನ್ನ ಮ್ಯಾಚ್ ಫಿಟ್ನೆಸ್ ಅನ್ನು ಸಾಬೀತುಪಡಿಸಿರುವ ಶ್ರೇಯಸ್ ಅಯ್ಯರ್ ಶುಕ್ರವಾರ ಭಾರತೀಯ ತಂಡವನ್ನು ಸೇರಿದ್ದಾರೆ.
ಅಕ್ಟೋಬರ್ 25ರಂದು ಸಿಡ್ನಿಯಲ್ಲಿ ನಡೆದಿದ್ದ ಏಕದಿನ ಪಂದ್ಯದ ವೇಳೆ ಕ್ಯಾಚ್ ಪಡೆಯುವ ಯತ್ನದಲ್ಲಿದ್ದಾಗ ಗುಲ್ಮದ ಗಾಯಕ್ಕೊಳಗಾಗಿದ್ದ ಭಾರತದ ಏಕದಿನ ತಂಡದ ಉಪ ನಾಯಕ ಅಯ್ಯರ್ ಇದೀಗ ಅಂತರ್ರಾಷ್ಟ್ರೀಯ ಕ್ರಿಕೆಟಿಗೆ ವಾಪಸಾಗಲು ಸಜ್ಜಾಗಿದ್ದಾರೆ.
ಗುಲ್ಮದ ಸೀಳುವಿಕೆಯಿಂದ ಉಂಟಾದ ಆಂತರಿಕ ರಕ್ತಶ್ರಾವದಿಂದಾಗಿ ಅಯ್ಯರ್ರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸ್ವದೇಶದಲ್ಲಿ ನಡೆದಿದ್ದ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಿಂದ ವಂಚಿತರಾಗಿದ್ದ ಅಯ್ಯರ್ ಆ ನಂತರ ಚೇತರಿಸಿಕೊಳ್ಳಲಾರಂಭಿಸಿದರು.
ವಿಜಯ್ ಹಝಾರೆ ಟ್ರೋಫಿ ಟೂರ್ನಿಯಲ್ಲಿ ಮುಂಬೈ ತಂಡದ ಪರ 82 ಹಾಗೂ 45 ರನ್ ಗಳಿಸಿದ್ದ ಅಯ್ಯರ್ ನ್ಯೂಝಿಲ್ಯಾಂಡ್ ವಿರುದ್ಧದ ಏಕದಿನ ಸರಣಿಗೆ ತಯಾರಿ ನಡೆಸಿದ್ದರು. ಶಾರ್ದುಲ್ ಠಾಕೂರ್ ಅನುಪಸ್ಥಿತಿಯಲ್ಲಿ ಎರಡು ಪಂದ್ಯಗಳಲ್ಲಿ ಅಯ್ಯರ್ ಮುಂಬೈ ತಂಡದ ನಾಯಕತ್ವವಹಿಸಿದ್ದರು.
ಭಾರತ ಏಕದಿನ ತಂಡದ ಬಹುತೇಕ ಆಟಗಾರರು ಜನವರಿ 7ರಂದು ವಡೋದರಕ್ಕೆ ತೆರಳಿದ್ದಾರೆ. ವಡೋದರವು ರವಿವಾರದಂದು ಸುಮಾರು 15 ವರ್ಷಗಳ ನಂತರ ಮೊದಲ ಬಾರಿ ಪುರುಷರ ಅಂತರ್ರಾಷ್ಟ್ರೀಯ ಪಂದ್ಯವನ್ನು ಆಯೋಜಿಸುತ್ತಿದೆ. ಹೊಸತಾಗಿ ನಿರ್ಮಿಸಿರುವ ಕೋಟಂಬಿ ಸ್ಟೇಡಿಯಂನಲ್ಲಿ ಈಗಾಗಲೇ ಡಬ್ಲ್ಯುಪಿಎಲ್ ಹಾಗೂ ಮಹಿಳೆಯರ ಏಕದಿನ ಪಂದ್ಯಗಳು ನಡೆದಿವೆ.







