ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ ವೇಳೆ ಶ್ರೇಯಸ್ ಅಯ್ಯರ್ಗೆ ಪಕ್ಕೆಲುಬಿನ ಗಾಯ, ಆಂತರಿಕ ರಕ್ತಸ್ರಾವ ; ಸಿಡ್ನಿ ಆಸ್ಪತ್ರೆಯಲ್ಲಿ ಚಿಕಿತ್ಸೆ

Photo | AFP
ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಪಕ್ಕೆಲುಬಿನ ಗಾಯದಿಂದ ಆಂತರಿಕ ರಕ್ತಸ್ರಾವಕ್ಕೆ ಒಳಗಾದ ಭಾರತದ ತಂಡದ ಉಪನಾಯಕ ಶ್ರೇಯಸ್ ಅಯ್ಯರ್ ಅವರನ್ನು ಸಿಡ್ನಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಸ್ತುತ ಅವರು ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ಪಡೆಯುತ್ತಿದ್ದಾರೆ.
ಪಂದ್ಯದ ವೇಳೆ ಬ್ಯಾಕ್ವರ್ಡ್ ಪಾಯಿಂಟ್ನಿಂದ ಹಿಂದಕ್ಕೆ ಓಡುತ್ತಾ ಅಲೆಕ್ಸ್ ಕ್ಯಾರಿಯನ್ನು ಔಟ್ ಮಾಡುವ ವೇಳೆ ಅಯ್ಯರ್ ಅವರ ಎಡ ಪಕ್ಕೆಲುಬಿಗೆ ತೀವ್ರ ಗಾಯವಾಗಿದೆ. ಶನಿವಾರ ಆಟದ ಬಳಿಕ ಅವರಿಗೆ ಅಸ್ವಸ್ಥತೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತಂಡದ ವೈದ್ಯರು ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ದರು.
ಆಸ್ಪತ್ರೆಯಲ್ಲಿ ನಡೆಸಿದ ಪರೀಕ್ಷೆಗಳಲ್ಲಿ ಆಂತರಿಕ ರಕ್ತಸ್ರಾವ ಪತ್ತೆಯಾಗಿದ್ದು, ಸೋಂಕು ತಡೆಗಟ್ಟುವ ಸಲುವಾಗಿ ಅವರನ್ನು ನಿಗಾ ಘಟಕದಲ್ಲಿ ಇರಿಸಲಾಗಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
“ಅಯ್ಯರ್ ಅವರ ಸ್ಥಿತಿ ಪ್ರಸ್ತುತ ಸ್ಥಿರವಾಗಿದೆ. ಅವರು ಚೇತರಿಸಿಕೊಂಡ ಬಳಿಕ ಎರಡರಿಂದ ಏಳು ದಿನಗಳವರೆಗೆ ವೀಕ್ಷಣೆಯಲ್ಲಿರುತ್ತಾರೆ,” ಎಂದು ವೈದ್ಯಕೀಯ ತಂಡ ತಿಳಿಸಿದೆ.
“ತಂಡದ ವೈದ್ಯರು ಯಾವುದೇ ಅಪಾಯಕ್ಕೆ ಅವಕಾಶ ನೀಡಲಿಲ್ಲ. ಶ್ರೇಯಸ್ ಬಲಿಷ್ಠ ಆಟಗಾರರು, ಅವರು ಶೀಘ್ರದಲ್ಲೇ ಮೈದಾನಕ್ಕೆ ಮರಳುವರು” ಎಂದು ಘಟನೆಯ ಕುರಿತು ಮಾಹಿತಿ ನೀಡಿದ ಮೂಲಗಳು ತಿಳಿಸಿವೆ.







