ಆಸ್ಟ್ರೇಲಿಯಾ ʼಎʼ ಪಂದ್ಯಕ್ಕೂ ಕೆಲವೇ ಗಂಟೆಗಳ ಮೊದಲು ನಾಯಕತ್ವ ತ್ಯಜಿಸಿ ತಂಡದಿಂದ ನಿರ್ಗಮಿಸಿದ ಶ್ರೇಯಸ್ ಅಯ್ಯರ್

Photo | NDTV
ಬೆಂಗಳೂರು: ಆಸ್ಟ್ರೇಲಿಯಾ ಎ ವಿರುದ್ಧದ ಎರಡನೇ ಪ್ರಥಮ ದರ್ಜೆ ಪಂದ್ಯಕ್ಕೂ ಕೆಲವೇ ಗಂಟೆಗಳ ಮೊದಲು ಭಾರತ ಎ ತಂಡದಲ್ಲಿ ಅಚ್ಚರಿಯ ಬೆಳವಣಿಗೆ ನಡೆದಿದೆ. ನಾಯಕ ಶ್ರೇಯಸ್ ಅಯ್ಯರ್ ಹಠಾತ್ತಾಗಿ ನಾಯಕತ್ವವನ್ನು ತ್ಯಜಿಸಿ ತಂಡದಿಂದ ಹೊರನಡೆದಿದ್ದಾರೆ.
ತಂಡದ ಆಡಳಿತ ಮಂಡಳಿ ಅಥವಾ ಅಯ್ಯರ್ ಸ್ವತಃ ನಿರ್ಗಮನದ ನಿಖರ ಕಾರಣವನ್ನು ಬಹಿರಂಗಪಡಿಸದಿದ್ದರೂ, ಅದು "ವೈಯಕ್ತಿಕ ಕಾರಣ" ಎಂದು ಮೂಲಗಳು ತಿಳಿಸಿವೆ. ಅಯ್ಯರ್ ವಿರಾಮ ಪಡೆದು ಮುಂಬೈಗೆ ಮರಳಿದ್ದು, ಆಸ್ಟ್ರೇಲಿಯಾ ಎ ವಿರುದ್ಧದ ಎರಡನೇ ನಾಲ್ಕು ದಿನಗಳ ಪಂದ್ಯದಲ್ಲಿ ಆಡಲು ಸಾಧ್ಯವಿಲ್ಲ ಎಂದು ಆಯ್ಕೆದಾರರಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಬಿಸಿಸಿಐ ಧ್ರುವ್ ಜುರೆಲ್ ಅವರನ್ನು ನಾಯಕನನ್ನಾಗಿ ನೇಮಕ ಮಾಡಿದೆ.
ಮೊದಲ ಪಂದ್ಯದಲ್ಲಿ ಅಯ್ಯರ್ ನಿರೀಕ್ಷಿತ ಪ್ರದರ್ಶನ ತೋರಲಿಲ್ಲ. ಅವರು ಕ್ರಮವಾಗಿ 8 ಮತ್ತು 13 ರನ್ ಗಳಿಸಿದ್ದರು. ಸ್ಪಿನ್ನರ್ ಕೋರಿ ರೊಸಿಸಿಯೋಲಿ ವಿರುದ್ಧ ವಿವಾದಾತ್ಮಕ ಅಂಪೈರಿಂಗ್ ತೀರ್ಪಿಗೆ ಅಯ್ಯರ್ ಬಲಿಯಾಗಿದ್ದರು. ಒಟ್ಟಾರೆಯಾಗಿ ಭಾರತ ಎ ತಂಡ ಸಮಬಲ ಸಾಧಿಸಿತು. ಆಸ್ಟ್ರೇಲಿಯಾ ಎ 532 ರನ್ ಗಳಿಸಿದರೆ, ಭಾರತ ಎ 531 ರನ್ ಗಳಿಸಿತು.
ಇಂಗ್ಲೆಂಡ್ ಪ್ರವಾಸಕ್ಕೆ ಅಯ್ಯರ್ ಆಯ್ಕೆಯಾಗಿರಲಿಲ್ಲ. ಜೊತೆಗೆ ಟಿ20 ಏಷ್ಯಾ ಕಪ್ 2025 ತಂಡದಲ್ಲಿಯೂ ಅವರಿಗೆ ಅವಕಾಶ ಸಿಗಲಿಲ್ಲ. ಏಕದಿನ ಪಂದ್ಯದಲ್ಲಿ ಅವರು ಇನ್ನೂ ಪ್ರಮುಖ ಆಟಗಾರರಾಗಿದ್ದಾರೆ. ಕಳೆದ ವರ್ಷ ಚಾಂಪಿಯನ್ಸ್ ಟ್ರೋಫಿ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ ಅವರು, ಮೂರು ಸ್ವರೂಪದ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆಯಲು ಶ್ರಮಿಸುತ್ತಿದ್ದಾರೆ. ಆದರೆ ಟೆಸ್ಟ್ ಮತ್ತು ಟಿ20 ತಂಡಗಳಲ್ಲಿ ಸ್ಥಾನ ಪಡೆಯುವುದು ಶ್ರೇಯಸ್ ಅಯ್ಯರ್ಗೆ ಇನ್ನೂ ಸವಾಲಾಗಿ ಮುಂದುವರಿದಿದೆ.







