ಸೂರ್ಯಕುಮಾರ್ ಬದಲು T20 ನಾಯಕನಾಗಿ ಶ್ರೇಯಸ್ ಅಯ್ಯರ್; ಭಾರತ ತಂಡದಲ್ಲಿ ಭಾರೀ ಬದಲಾವಣೆ

ಶ್ರೇಯಸ್ ಅಯ್ಯರ್ | ಸೂರ್ಯಕುಮಾರ್ ಯಾದವ್
ಹೊಸದಿಲ್ಲಿ: ಭಾರತ T20 ಅಂತರರಾಷ್ಟ್ರೀಯ ತಂಡದ ನಾಯಕತ್ವದಲ್ಲಿ ಮಹತ್ವದ ಬದಲಾವಣೆ ಮಾಡಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI), ಸೂರ್ಯಕುಮಾರ್ ಯಾದವ್ ಅವರನ್ನು ನಾಯಕ ಸ್ಥಾನದಿಂದ ಕೆಳಗಿಳಿಸಿ ಶ್ರೇಯಸ್ ಅಯ್ಯರ್ ಅವರನ್ನು ನೂತನ ನಾಯಕನಾಗಿ ನೇಮಿಸಿದೆ.
ಮಾರ್ಚ್ 2026ರಲ್ಲಿ ಭಾರತ ತಂಡವನ್ನು ಸತತ ಎರಡನೇ T20 ವಿಶ್ವಕಪ್ ಪ್ರಶಸ್ತಿಯತ್ತ ಮುನ್ನಡೆಸಿದ್ದರೂ, ಸೂರ್ಯಕುಮಾರ್ ಅವರ ವೈಯಕ್ತಿಕ ಪ್ರದರ್ಶನದಲ್ಲಿನ ಕುಸಿತ ಹಾಗೂ ಭವಿಷ್ಯದ ಯೋಜನೆಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.
BCCI ಉನ್ನತ ಆಡಳಿತ ಮಂಡಳಿ ಸಭೆಯ ಬಳಿಕ ಈ ನಿರ್ಧಾರಕ್ಕೆ ಅಂತಿಮ ರೂಪ ನೀಡಲಾಗಿದ್ದು, ಶನಿವಾರ ಪ್ರಕಟವಾಗಲಿರುವ ತಂಡದಲ್ಲಿ ವ್ಯಾಪಕ ಬದಲಾವಣೆಗಳು ಕಂಡುಬರುವ ಸಾಧ್ಯತೆ ಇದೆ. 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ ಹಾಗೂ ಆಸ್ಟ್ರೇಲಿಯಾ ಮತ್ತು ನ್ಯೂಝಿಲೆಂಡ್ ನಲ್ಲಿ ನಡೆಯಲಿರುವ T20 ವಿಶ್ವಕಪ್ ಗಳನ್ನು ಗುರಿಯಾಗಿಸಿಕೊಂಡು ಆಯ್ಕೆದಾರರು ದೀರ್ಘಾವಧಿಯ ಯೋಜನೆ ರೂಪಿಸಿದ್ದಾರೆ ಎನ್ನಲಾಗಿದೆ.
ICC ಟ್ರೋಫಿ ಗೆಲುವಿನ ಬಳಿಕ ಭಾರತ ತಂಡದ ನಾಯಕತ್ವದಲ್ಲಿ ಬದಲಾವಣೆ ಮಾಡುತ್ತಿರುವುದು ಸತತ ಎರಡನೇ ವರ್ಷವಾಗಿದೆ. 2025ರಲ್ಲಿ ಚಾಂಪಿಯನ್ಸ್ ಟ್ರೋಫಿ ಗೆಲುವಿನ ಕೆಲವೇ ತಿಂಗಳುಗಳ ಬಳಿಕ ರೋಹಿತ್ ಶರ್ಮಾ ಅವರನ್ನು ಏಕದಿನ ತಂಡದ ನಾಯಕತ್ವದಿಂದ ಬದಲಿಸಲಾಗಿತ್ತು. ಆದರೆ ಅವರು ತಂಡದ ಭಾಗವಾಗಿ ಮುಂದುವರಿದಿದ್ದರೆ, ಸೂರ್ಯಕುಮಾರ್ ಅವರನ್ನು T20 ತಂಡದಿಂದಲೇ ಕೈಬಿಡಲಾಗಿದೆ ಎಂದು ವರದಿಗಳು ತಿಳಿಸಿವೆ ಎಂದು India Today ವರದಿ ಮಾಡಿದೆ.
ಭಾರತ ತಂಡವು ಜೂನ್ 26 ಮತ್ತು 28ರಂದು ಬೆಲ್ ಫಾಸ್ಟ್ ನಲ್ಲಿ ನಡೆಯಲಿರುವ ಎರಡು T20 ಪಂದ್ಯಗಳಿಗಾಗಿ ಐರ್ಲೆಂಡ್ ಪ್ರವಾಸ ಕೈಗೊಳ್ಳಲಿದೆ. ಬಳಿಕ ಜುಲೈ 1ರಿಂದ 11ರವರೆಗೆ ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ T20 ಸರಣಿಯಲ್ಲಿ ಪಾಲ್ಗೊಳ್ಳಲಿದೆ.
ಈ ಪ್ರವಾಸವು ಮುಂಬರುವ ಏಷ್ಯನ್ ಕ್ರೀಡಾಕೂಟಕ್ಕೆ ಸಿದ್ಧತೆಯ ಭಾಗವಾಗಿಯೂ ಪರಿಗಣಿಸಲಾಗಿದೆ. 2022ರಲ್ಲಿ ಗೆದ್ದ ಚಿನ್ನದ ಪದಕವನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಭಾರತ ತನ್ನ ಮೊದಲ ಆಯ್ಕೆಯ ತಂಡವನ್ನೇ ಏಷ್ಯನ್ ಕ್ರೀಡಾಕೂಟಕ್ಕೆ ಕಳುಹಿಸಲಿದೆ ಎಂದು BCCI ಸ್ಪಷ್ಟಪಡಿಸಿದೆ.
ಇದೇ ವೇಳೆ, 15 ವರ್ಷದ ವೈಭವ್ ಸೂರ್ಯವಂಶಿ ಅವರನ್ನು ಹಿರಿಯ ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡುವ ಮೂಲಕ ಭಾರತ ಕ್ರಿಕೆಟ್ ಇತಿಹಾಸದಲ್ಲಿ ಹೊಸ ದಾಖಲೆ ನಿರ್ಮಿಸಲು ಸಜ್ಜಾಗಿದೆ. 2026ರ ಐಪಿಎಲ್ನಲ್ಲಿ 237.30ರ ಸ್ಟ್ರೈಕ್ ರೇಟ್ ನಲ್ಲಿ 776 ರನ್ಗಳನ್ನು ಗಳಿಸಿದ್ದ ವೈಭವ್, 1980ರ ದಶಕದ ಉತ್ತರಾರ್ಧದಲ್ಲಿ ಹಿರಿಯ ತಂಡಕ್ಕೆ ಆಯ್ಕೆಯಾಗಿದ್ದ ಸಚಿನ್ ತೆಂಡೂಲ್ಕರ್ ನಂತರ ಭಾರತ ಪುರುಷರ ಹಿರಿಯ ತಂಡಕ್ಕೆ ಆಯ್ಕೆಯಾಗುವ ಅತ್ಯಂತ ಕಿರಿಯ ಆಟಗಾರ ಎನಿಸಿಕೊಳ್ಳಲಿದ್ದಾರೆ.
ಹಿರಿಯ ತಂಡವನ್ನು ಸೇರುವ ಮುನ್ನ ವೈಭವ್ ಸೂರ್ಯವಂಶಿ ಜೂನ್ 9ರಿಂದ 21ರವರೆಗೆ ಶ್ರೀಲಂಕಾದಲ್ಲಿ ನಡೆಯಲಿರುವ ತ್ರಿಕೋನ ಸರಣಿಯಲ್ಲಿ ಭಾರತ ‘ಎ’ ತಂಡವನ್ನು ಪ್ರತಿನಿಧಿಸಲಿದ್ದಾರೆ. ಈ ಸರಣಿಯಲ್ಲಿ ಅಫ್ಘಾನಿಸ್ತಾನ ತಂಡವೂ ಪಾಲ್ಗೊಳ್ಳಲಿದೆ.
►ಅಯ್ಯರ್ ಆಯ್ಕೆಗೆ ಕಾರಣವೇನು?
ಶ್ರೇಯಸ್ ಅಯ್ಯರ್ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡುವಲ್ಲಿ ಅವರ ನಿರಂತರ ಬ್ಯಾಟಿಂಗ್ ಪ್ರದರ್ಶನ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ತೋರಿದ ನಾಯಕತ್ವ ಕೌಶಲ್ಯ ಪ್ರಮುಖ ಕಾರಣಗಳಾಗಿವೆ. ಅವರು 2024ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು IPL ಪ್ರಶಸ್ತಿಯತ್ತ ಮುನ್ನಡೆಸಿದ್ದರು. ಅಲ್ಲದೆ, 2020ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ 2025ರಲ್ಲಿ ಪಂಜಾಬ್ ಕಿಂಗ್ಸ್ ತಂಡಗಳನ್ನು ಫೈನಲ್ ಗೆ ಕೊಂಡೊಯ್ದಿದ್ದರು.
ಡಿಸೆಂಬರ್ 2023ರಿಂದ ಭಾರತ T20 ತಂಡದಲ್ಲಿ ಅವಕಾಶ ಸಿಗದಿದ್ದರೂ, ವೈಟ್ಬಾಲ್ ಕ್ರಿಕೆಟ್ನಲ್ಲಿ ಅವರ ಪ್ರದರ್ಶನ ಆಯ್ಕೆದಾರರ ಗಮನ ಸೆಳೆದಿತ್ತು. IPL 2025ರಲ್ಲಿ ಅವರು 175.07ರ ಸ್ಟ್ರೈಕ್ರೇಟ್ ನಲ್ಲಿ 604 ರನ್ಗಳನ್ನು ಗಳಿಸಿದ್ದರು.
ತಿಲಕ್ ವರ್ಮಾ ಮತ್ತು ಇಶಾನ್ ಕಿಶನ್ ನಾಯಕತ್ವದ ಸ್ಪರ್ಧೆಯಲ್ಲಿ ಇದ್ದರೂ, ಅಯ್ಯರ್ ಅವರ ನಾಯಕತ್ವದ ಅನುಭವ ಅವರಿಗೆ ಮೇಲುಗೈ ತಂದುಕೊಟ್ಟಿದೆ. ತಿಲಕ್ ವರ್ಮಾ ಅಥವಾ ಇಶಾನ್ ಕಿಶನ್ ಅವರಲ್ಲಿ ಒಬ್ಬರನ್ನು ಉಪನಾಯಕನನ್ನಾಗಿ ನೇಮಿಸುವ ಸಾಧ್ಯತೆ ಇದೆ ಎಂದು ವರದಿಗಳು ಹೇಳಿವೆ.
►ಸೂರ್ಯಕುಮಾರ್ ಅವರನ್ನು ಕೈಬಿಡಲು ಕಾರಣವೇನು?
ಸೂರ್ಯಕುಮಾರ್ ಯಾದವ್ ಅವರನ್ನು ನಾಯಕತ್ವದಿಂದ ಮಾತ್ರವಲ್ಲದೆ T20 ತಂಡದಿಂದಲೇ ಹೊರಗಿಡಲಾಗಿರುವುದು ಆಯ್ಕೆದಾರರ ದೀರ್ಘಾವಧಿಯ ಯೋಜನೆಯ ಭಾಗವಾಗಿದೆ ಎಂದು ತಿಳಿದುಬಂದಿದೆ. ಭಾರತವನ್ನು T20 ವಿಶ್ವಕಪ್ ಪ್ರಶಸ್ತಿಯತ್ತ ಮುನ್ನಡೆಸಿದ್ದರೂ, 35 ವರ್ಷದ ಸೂರ್ಯಕುಮಾರ್ ಅವರ ಭವಿಷ್ಯದ ಸಾಮರ್ಥ್ಯದ ಕುರಿತು ಆಯ್ಕೆ ಸಮಿತಿಗೆ ಅನುಮಾನ ಮೂಡಿದೆ ಎನ್ನಲಾಗಿದೆ.
2026ರ T20 ವಿಶ್ವಕಪ್ ನಲ್ಲಿ ಅವರು ಒಂಭತ್ತು ಇನ್ನಿಂಗ್ಸ್ ಗಳಲ್ಲಿ 242 ರನ್ ಗಳಿಸಿದ್ದು, ಅವರ ಸ್ಟ್ರೈಕ್ ರೇಟ್ 136.72 ಆಗಿತ್ತು. IPL 2026ರಲ್ಲಿ 13 ಇನ್ನಿಂಗ್ಸ್ಗಳಲ್ಲಿ ಕೇವಲ 270 ರನ್ ಗಳಿಸಿದ್ದು, ಸರಾಸರಿ 20.76 ಹಾಗೂ ಸ್ಟ್ರೈಕ್ ರೇಟ್ 147.54 ಆಗಿತ್ತು.
2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ ವರೆಗಿನ ಅವಧಿಯನ್ನು ಗಮನದಲ್ಲಿಟ್ಟುಕೊಂಡು ಯುವ ನಾಯಕತ್ವಕ್ಕೆ ಅವಕಾಶ ನೀಡುವ ಉದ್ದೇಶದಿಂದ BCCI ಉನ್ನತ ಆಡಳಿತ ಮಂಡಳಿ ಈ ಬದಲಾವಣೆಗೆ ಒಪ್ಪಿಗೆ ನೀಡಿದೆ ಎಂದು ವರದಿಗಳು ತಿಳಿಸಿವೆ.






