ನ್ಯೂಝಿಲೆಂಡ್ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯದಿಂದ ಸಿರಾಜ್ ರನ್ನು ಕೈಬಿಟ್ಟ ಕುರಿತು ಮೌನ ಮುರಿದ ನಾಯಕ ಶುಭಮನ್ ಗಿಲ್

ಮುಹಮ್ಮದ್ ಸಿರಾಜ್ । ಶುಭಮನ್ ಗಿಲ್ (Photo: PTI)
ವೆಲ್ಲಿಂಗ್ಟನ್: ಆತಿಥೇಯ ನ್ಯೂಝಿಲೆಂಡ್ ತಂಡದ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯದಿಂದ ವೇಗಿ ಮುಹಮ್ಮದ್ ಸಿರಾಜ್ ರನ್ನು ಕೈಬಿಟ್ಟ ನಿರ್ಧಾರದ ಕುರಿತು ಕೊನೆಗೂ ಮೌನ ಮುರಿದ ಭಾರತ ತಂಡದ ನಾಯಕ ಶುಭಮನ್ ಗಿಲ್, “ಮುಹಮ್ಮದ್ ಸಿರಾಜ್ ಅದ್ಭುತ ಆಟಗಾರ ಮತ್ತು ಬೌಲರ್. ಅವರು ಭಾರತ ತಂಡದ ಪರವಾಗಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಇದೆಲ್ಲವನ್ನೂ ಮೀರಿ, ಅವರು ನನ್ನ ಅತ್ಯುತ್ತಮ ಸ್ನೇಹಿತ. ಅವರನ್ನು ತಂಡದಿಂದ ಕೈಬಿಡುವ ನಿರ್ಧಾರ ನನ್ನ ಪಾಲಿಗೂ ಕಠಿಣವಾಗಿತ್ತು. ಆದರೆ, ಯಾವ ಬೌಲರ್ ಫಾರ್ಮ್ ನಲ್ಲಿದ್ದಾರೆ ಎಂದು ನಾವು ನೋಡಬೇಕಾಗುತ್ತದೆ” ಎಂದು ಸಮರ್ಥಿಸಿಕೊಂಡರು.
ಇಲ್ಲಿನ ರಿವರ್ಸ್ ಬೇಸಿನ್ ಕ್ರೀಡಾಂಗಣದಲ್ಲಿ ಆತಿಥೇಯ ನ್ಯೂಝಿಲೆಂಡ್ ಹಾಗೂ ಭಾರತ ತಂಡಗಳ ನಡುವೆ ನಡೆದ ಪ್ರಥಮ ಟೆಸ್ಟ್ ಪಂದ್ಯ ನೀರಸ ಡ್ರಾನಲ್ಲಿ ಅಂತ್ಯಗೊಂಡಿತು. ಭಾರತ ತಂಡ ತನ್ನ ಪ್ರಥಮ ಇನಿಂಗ್ಸ್ ನಲ್ಲಿ ಒಂಬತ್ತು ವಿಕೆಟ್ ನಷ್ಟಕ್ಕೆ 720 ರನ್ ಗಳಿಸಿ, 352 ರನ್ ಗಳ ಬೃಹತ್ ಮುನ್ನಡೆ ಸಾಧಿಸಿದರೂ, ನ್ಯೂಝಿಲೆಂಡ್ ತಂಡದ ಸಾಂಘಿಕ ಪ್ರತಿರೋಧದಿಂದ ಪಂದ್ಯವನ್ನು ಜಯಿಸುವಲ್ಲಿ ವಿಫಲವಾಯಿತು. ಇದರ ಬೆನ್ನಿಗೇ, ಭಾರತ ತಂಡದ ಪ್ರಮುಖ ವೇಗಿ ಮುಹಮ್ಮದ್ ಸಿರಾಜ್ ರನ್ನು ಪಂದ್ಯದಿಂದ ಕೈಬಿಟ್ಟ ಕುರಿತ ಚರ್ಚೆ ಮತ್ತೆ ಕಾವು ಪಡೆದುಕೊಂಡಿದೆ.
ಈ ಕುರಿತು ಪ್ರತಿಕ್ರಿಯಿಸಿದ ಶುಭಮನ್ ಗಿಲ್, “ತಂಡದಲ್ಲಿ ಮುಹಮ್ಮದ್ ಸಿರಾಜ್ ಇದ್ದಿದ್ದರೂ ಫಲಿತಾಂಶದಲ್ಲಿ ಯಾವುದೇ ಬದಲಾವಣೆಯಾಗುತ್ತಿರಲಿಲ್ಲ” ಎಂದು ತಂಡದ ಆಡಳಿತ ಮಂಡಳಿ ಕೈಗೊಂಡ ನಿರ್ಧಾರವನ್ನು ಸಮರ್ಥಿಸಿಕೊಂಡರು.
ತಂಡದಲ್ಲಿ ಮುಹಮ್ಮದ್ ಸಿರಾಜ್ ಹಾಗೂ ರವೀಂದ್ರ ಜಡೇಜಾ ಇದ್ದಿದ್ದರೆ, ಫಲಿತಾಂಶ ಭಿನ್ನವಾಗಿರುತ್ತಿತ್ತೇ ಎಂಬ ಪ್ರಶ್ನೆಗೆ ಉತ್ತರಿಸಿದ ಶುಭಮನ್ ಗಿಲ್, “ನನಗೆ ಹಾಗನ್ನಿಸುತ್ತಿಲ್ಲ” ಎಂದು ತಿಳಿಸಿದರು.
“ಪಂದ್ಯಕ್ಕೂ ಮುನ್ನ ಸಿರಾಜ್ ರನ್ನು ಪಂದ್ಯದಿಂದ ಕೈಬಿಡುವ ಕುರಿತು ಅವರೊಂದಿಗೆ ಮಾತುಕತೆ ನಡೆಸಿದೆ. ಅವರಿಗೆ ಈ ನಿರ್ಧಾರ ಹಾಗೂ ತಮ್ಮ ಬದಲಿಗೆ ಬೇರೊಬ್ಬರನ್ನು ಆಯ್ಕೆ ಮಾಡುವುದರ ಹಿಂದಿನ ತರ್ಕ ಅರ್ಥವಾಯಿತು” ಎಂದು ಅವರು ತಿಳಿಸಿದರು.
SENA (South Africa, England, New Zealand and Australia) ಪಿಚ್ ಗಳಲ್ಲಿ ಮುಹಮ್ಮದ್ ಸಿರಾಜ್ ಹೊಂದಿರುವ ದಾಖಲೆಯ ಹಿನ್ನೆಲೆಯಲ್ಲಿ ಅವರನ್ನು ಪ್ರಥಮ ಟೆಸ್ಟ್ ನಿಂದ ಕೈಬಿಟ್ಟ ನಿರ್ಧಾರ ಟೀಕೆಗೆ ಗುರಿಯಾಗಿದೆ. ಕಳೆದ ವರ್ಷ ಇಂಗ್ಲೆಂಡ್ ವಿರುದ್ಧ ನಡೆದಿದ್ದ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಭಾರತ ತಂಡ 2-2 ಅಂತರದಲ್ಲಿ ಸರಣಿಯನ್ನು ಸಮ ಮಾಡಿಕೊಳ್ಳುವಲ್ಲಿ ಹೈದರಾಬಾದ್ ವೇಗಿ ಮುಹಮ್ಮದ್ ಸಿರಾಜ್ ಪ್ರಮುಖ ಪಾತ್ರ ವಹಿಸಿದ್ದರು. ಈ ಸರಣಿಯಲ್ಲಿ ಅವರು ಒಟ್ಟು 23 ವಿಕೆಟ್ ಕಿತ್ತಿದ್ದರು. ದೀರ್ಘಕಾಲ ಬೌಲಿಂಗ್ ಮಾಡಬಲ್ಲ ಹಾಗೂ ವಿದೇಶಗಳಲ್ಲಿನ ವಾತಾವರಣದಲ್ಲಿ ಪರಿಸ್ಥಿತಿಯನ್ನು ನಿಭಾಯಿಸಬಲ್ಲ ತಮ್ಮ ಸಾಮರ್ಥ್ಯದಿಂದ ಅವರು ಭಾರತ ಟೆಸ್ಟ್ ತಂಡದ ಪ್ರಮುಖ ಬೌಲರ್ ಆಗಿ ಹೊರ ಹೊಮ್ಮಿದ್ದಾರೆ.
ವಿದೇಶಿ ವಾತಾವರಣಕ್ಕೆ ಹೋಲಿಸಿದರೆ, ಉಪಖಂಡದ ವಾತಾವರಣದಲ್ಲಿ ಅವರು ನಿರೀಕ್ಷಿತ ಬೌಲಿಂಗ್ ಪ್ರದರ್ಶನ ನೀಡಿಲ್ಲ. ಕಳೆದ 12 ಪಂದ್ಯಗಳಲ್ಲಿ ಅವರು ಒಟ್ಟು 14 ವಿಕೆಟ್ ಗಳನ್ನಷ್ಟೇ ಪಡೆದಿದ್ದಾರೆ. ಹೀಗಾಗಿ, ತಂಡದ ಆಡಳಿತ ಮಂಡಳಿ ಬೇರೆ ಆಯ್ಕೆಯನ್ನು ಪರಿಗಣಿಸಿದೆ ಎಂದು ಹೇಳಲಾಗುತ್ತಿದೆ. ಆದರೆ, ವಿದೇಶಿ ವಾತಾವರಣದಲ್ಲಿ ಉತ್ತಮ ದಾಖಲೆ ಹೊಂದಿರುವ ಮುಹಮ್ಮದ್ ಸಿರಾಜ್ ರನ್ನು ತಂಡದಿಂದ ಕೈಬಿಡಲು ಈ ಅಂಕಿ-ಅಂಶವಷ್ಟೇ ಸಮರ್ಥನೀಯವಾಗಬಲ್ಲದೆ ಎಂದು ಹಲವರು ಪ್ರಶ್ನೆ ಎತ್ತಿದ್ದಾರೆ. ವೇಗದ ಬೌಲಿಂಗ್ ಗೆ ಸಹಕಾರಿಯಾಗಿರುವ ನ್ಯೂಝಿಲೆಂಡ್ ವಾತಾವರಣದಲ್ಲಿ ಆಡಲು ಮುಹಮ್ಮದ್ ಸಿರಾಜ್ ಗೆ ಅವಕಾಶ ನೀಡದಿರುವ ಕುರಿತು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮಾಜಿ ಕ್ರಿಕೆಟಿಗ ಹಾಗೂ ವೀಕ್ಷಕ ವಿವರಣೆಗಾರ ಸುನೀಲ್ ಗಾವಸ್ಕರ್, ಭಾರತ ತಂಡದ ಮಾಜಿ ಮುಖ್ಯ ಕೋಚ್ ರವಿ ಶಾಸ್ತ್ರಿ, ಭಾರತ ತಂಡದ ಮಾಜಿ ಸ್ಪಿನ್ನರ್ ಆರ್.ಅಶ್ವಿನ್, ವೀಕ್ಷಕ ವಿವರಣೆಗಾರ ಹರ್ಷ ಭೋಗ್ಲೆ, ಭಾರತ ತಂಡದ ಮಾಜಿ ಬ್ಯಾಟರ್ ಅಜಿಂಕ್ಯಾ ರಹಾನೆ ಸೇರಿದಂತೆ ಹಲವು ಪ್ರಮುಖರು ಮುಹಮ್ಮದ್ ಸಿರಾಜ್ ರನ್ನು ಪಂದ್ಯದಿಂದ ಕೈಬಿಟ್ಟ ನಿರ್ಧಾರವನ್ನು ಕಟುವಾಗಿ ಟೀಕಿಸಿದ್ದಾರೆ. ಇದರಿಂದ ಮುಹಮ್ಮದ್ ಸಿರಾಜ್ ರ ಆತ್ಮಸ್ಥೈರ್ಯಕ್ಕೆ ಧಕ್ಕೆಯಾಗಲಿದೆ ಎಂದು ಸುನೀಲ್ ಗಾವಸ್ಕರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.






