ನಾಳೆ ಮೂರನೇ ಏಕದಿನ: ಸರಣಿ ಗೆಲುವಿನತ್ತ ಶುಭಮನ್ ಬಳಗದ ಚಿತ್ತ

ಹ್ಯಾಮಿಲ್ಟನ್: ಅಗ್ರ ಕ್ರಮಾಂಕದ ಬ್ಯಾಟರ್‌ಗಳಿಗೆ ವೇಗಿಗಳ ಸ್ನೇಹಿ ಪಿಚ್ ಎದುರಾಗಬಹುದಾದರೂ ಸೆಡ್ಡನ್ ಪಾರ್ಕ್‌ನಲ್ಲಿ ಮಂಗಳವಾರ ನಡೆಯಲಿರುವ ಮೂರನೇ ಏಕದಿನ ಪಂದ್ಯದಲ್ಲಿ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ನ್ಯೂಝಿಲ್ಯಾಂಡ್ ತಂಡದ ವಿರುದ್ಧ ಟೀಮ್ ಇಂಡಿಯಾವು ಸರಣಿಯನ್ನು ಗೆಲ್ಲುವ ಅದಮ್ಯ ವಿಶ್ವಾಸದಲ್ಲಿದೆ.
ಭಾರತ ತಂಡವು ಸದ್ಯ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ 2-0 ಮುನ್ನಡೆಯಲ್ಲಿದೆ. ಈಡನ್ ಪಾರ್ಕ್‌ನಲ್ಲಿ ವಿರಾಟ್ ಕೊಹ್ಲಿ ಅರ್ಧಶತಕ ಗಳಿಸಿದ್ದರೂ ನಾಯಕ ಶುಭಮನ್ ಗಿಲ್ ಹಾಗೂ ಅನುಭವಿ ಆಟಗಾರ ರೋಹಿತ್ ಶರ್ಮಾ ವೇಗದ ಬೌಲರ್‌ಗಳಿಗೆ ಒಪ್ಪುವ ಪಿಚ್‌ನಲ್ಲಿ ಮಿಂಚುವಲ್ಲಿ ವಿಫಲರಾಗಿದ್ದಾರೆ.
ನಾಯಕ ಗಿಲ್‌ಗೆ ಸರಣಿ ಗೆಲ್ಲುವುದು ಪ್ರಮುಖ ಆದ್ಯತೆಯಾಗಿದೆ. ಮೂರನೇ ಪಂದ್ಯದ ನಂತರ ಎರಡು ಪಂದ್ಯಗಳ ಟೆಸ್ಟ್ ಸರಣಿ ತಯಾರಿಯತ್ತ ತಮ್ಮ ಗಮನ ನೀಡಲು ಏಕದಿನ ತಂಡವನ್ನು ತ್ಯಜಿಸಲಿದ್ದಾರೆ. ಶ್ರೇಯಸ್ ಅಯ್ಯರ್ ಕೊನೆಯ ಎರಡು ಏಕದಿನ ಪಂದ್ಯದಲ್ಲಿ ನಾಯಕನಾಗಲಿದ್ದಾರೆ.
ಮೂರನೇ ಪಂದ್ಯ ಕೂಡ ಮಳೆಯಿಂದಾಗಿ ಮೊಟಕುಗೊಳ್ಳುವ ಸಾಧ್ಯತೆ ಇದೆ. ಶೀತ ಹಾಗೂ ಆರ್ದ್ರ ವಾತಾವರಣವು ಮತ್ತೊಮ್ಮೆ ಪಿಚ್ ಅನ್ನು ಸೀಮ್ ಹಾಗೂ ಹೆಚ್ಚುವರಿ ಬೌನ್ಸ್‌ನ ಸ್ವರ್ಗವನ್ನಾಗಿ ಪರಿವರ್ತಿಸಬಹುದು.
ರೋಹಿತ್ ಶರ್ಮಾ ಸರಣಿಯಲ್ಲಿ ಆಡಿರುವ ಮೊದಲೆರಡು ಪಂದ್ಯಗಳಲ್ಲಿ 0 ಹಾಗೂ 23 ರನ್ ಗಳಿಸಿದ್ದಾರೆ. ವೆಲ್ಲಿಂಗ್ಟನ್‌ನಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಕ್ರೀಸ್‌ನಲ್ಲಿ ಹೆಚ್ಚು ಹೊತ್ತು ನಿಲ್ಲದೇ ಇದ್ದರೂ ಕೊಹ್ಲಿ ಅವರು ಸದ್ಯ ಉತ್ತಮ ಟಚ್‌ನಲ್ಲಿದ್ದಂತೆ ಕಂಡುಬಂದಿದ್ದಾರೆ.
ಭಾರತವು ತನ್ನ ಗೆಲ್ಲುವ ಸಂಯೋಜನೆಯಲ್ಲಿ ಬದಲಾವಣೆ ಮಾಡುವ ಸಾಧ್ಯತೆ ಕಡಿಮೆ ಇದ್ದರೂ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರು ಅಕ್ಷರ್ ಪಟೇಲ್‌ರನ್ನು 5ನೇ ಕ್ರಮಾಂಕದಲ್ಲಿ ಕಳುಹಿಸುವ ತಮ್ಮ ತಂತ್ರವನ್ನು ಮರು ಪರಿಶೀಲಿಸಲು ಬಯಸಬಹುದು. ವಾಸ್ತವವಾಗಿ ಕೆ.ಎಲ್. ರಾಹುಲ್ ಹೆಚ್ಚು ಅನುಭವಿ ಹಾಗೂ ಪರಿಣಿತ ಬ್ಯಾಟರ್ ಆಗಿದ್ದು, ವೆಲ್ಲಿಂಗ್ಟನ್‌ನಲ್ಲಿ ಅವರು ಔಟಾಗದೆ 26 ರನ್ ಗಳಿಸಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದ್ದರು.
ಮೊದಲ ನಾಲ್ವರು ಬ್ಯಾಟರ್‌ಗಳು ಬಲಗೈ ಆಟಗಾರರಾಗಿದ್ದರಿಂದ ಮಧ್ಯಮ ಕ್ರಮಾಂಕದಲ್ಲಿ ಒಬ್ಬ ಎಡಗೈಬ್ಯಾಟರ್ ಇರಬೇಕೆಂಬ ಉದ್ದೇಶದಿಂದ ರಾಹುಲ್‌ಗಿಂತ ಮುಂಚಿತವಾಗಿ ಅಕ್ಷರ್ ಅವರನ್ನು ಕಳುಹಿಸುವ ನಿರ್ಧಾರ ತೆಗೆದುಕೊಳ್ಳಲಾಗಿತ್ತು.
ಅಕ್ಷರ್ ತಂಡದಲ್ಲಿರುವ ಏಕೈಕ ಸ್ಪೆಷಲಿಸ್ಟ್ ಸ್ಪಿನ್ನರ್ ಆಗಿರುವುದರಿಂದ ಅಗ್ರ ಕ್ರಮಾಂಕದ ಯಾವುದೇ ಬ್ಯಾಟರ್ ನಿಯಮಿತವಾಗಿ ಬೌಲಿಂಗ್ ಮಾಡುತ್ತಿಲ್ಲ. ಹೀಗಾಗಿ ಇಶಾನ್ ಕಿಶನ್‌ರಂತಹ ಪ್ರತಿಭಾನ್ವಿತ ಆಟಗಾರನನ್ನು ಆ ಸ್ಥಾನದಲ್ಲಿ ಆಡಿಸುವ ಆಯ್ಕೆ ಗಂಭೀರ್ ಅವರಿಗಿಲ್ಲ.
ಕಿಶನ್ ಕೊನೆಯ ಎರಡು ಪಂದ್ಯಗಳಲ್ಲಿ ಕರ್ನಾಟಕದ ಸ್ಟಾರ್ ಆಟಗಾರ ರಾಹುಲ್ ಅವರಿಂದ ವಿಕೆಟ್‌ಕೀಪಿಂಗ್ ಜವಾಬ್ದಾರಿಯನ್ನು ವಹಿಸಿಕೊಳ್ಳುವ ನಿರೀಕ್ಷೆ ಇದೆ. ರಾಹುಲ್ ಟೆಸ್ಟ್ ತಂಡದಲ್ಲಿರುವ ಕಾರಣ ಸರಣಿ ತಯಾರಿ ನಡೆಸಲು ತೆರಳಲಿದ್ದಾರೆ.
ಆಕಿಬ್ ನಬಿ, ಗುರ್ನೂರ್ ಬ್ರಾರ್, ಅನ್ಶುಲ್ ಕಾಂಬೋಜ್ ಹಾಗೂ ಅರ್ಷದೀಪ್ ಸಿಂಗ್ ವಿಕೆಟ್‌ಗಳನ್ನು ಉರುಳಿಸಿ ಮಿಂಚುತ್ತಿದ್ದಾರೆ. ಇನ್ನು 10 ದಿನಗಳಲ್ಲಿ ಟೆಸ್ಟ್ ಪಂದ್ಯ ನಡೆಯಲಿದೆ. ಹೀಗಾಗಿ ಈ ಪಂದ್ಯದಲ್ಲಿ ಮುಹಮ್ಮದ್ ಸಿರಾಜ್‌ರನ್ನು ಆಡಿಸುವ ಸಾಧ್ಯತೆ ಇಲ್ಲ.
ನ್ಯೂಝಿಲ್ಯಾಂಡ್ ತಂಡವು ತನ್ನದೇ ನೆಲದಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಕಿವೀಸ್ ನಾಯಕ ಮಿಚೆಲ್ ಸ್ಯಾಂಟ್ನರ್ ಎರಡೂ ಬಾರಿ ಟಾಸ್ ಸೋತಿದ್ದಾರೆ. ಮೊದಲೆರಡು ಪಂದ್ಯಗಳಲ್ಲಿ ನ್ಯೂಝಿಲ್ಯಾಂಡ್‌ನ ಅಗ್ರ ಸರದಿಯು ಪರದಾಟ ನಡೆಸಿರುವುದು ಚಿಂತೆಯ ವಿಚಾರವಾಗಿದೆ. ಇದು ತಂಡದ ಬೌಲಿಂಗ್ ದಾಳಿಯ ಮೇಲೆ ಗಮನಾರ್ಹ ಒತ್ತಡವುಂಟು ಮಾಡಿದೆ.
ಗಾಯದ ಸಮಸ್ಯೆಯಿಂದಾಗಿ ಡೆವೊನ್ ಕಾನ್ವೆ ಹಾಗೂ ರಚಿನ್ ರವೀಂದ್ರ ಅನುಪಸ್ಥಿತಿಯು ಆತಿಥೇಯ ತಂಡದ ಸಂಕಷ್ಟವನ್ನು ಹೆಚ್ಚಿಸಿದೆ. ಟಾಮ್ ಲ್ಯಾಥಮ್ ಕೂಡ ರನ್ ಬರ ಎದುರಿಸುತ್ತಿರುವುದು ಸಮಸ್ಯೆಯಾಗಿ ಕಾಡುತ್ತಿದೆ.
ನ್ಯೂಝಿಲ್ಯಾಂಡ್‌ನ ಅಗ್ರ ಮೂವರು ಆಟಗಾರರಾದ ಟಿಮ್‌ಸೀಫರ್ಟ್, ವಿಲ್ ಯಂಗ್ ಹಾಗೂ ಹೆನ್ರಿ ನಿಕೊಲ್ಸ್ ಮೊದಲೆರಡು ಟೆಸ್ಟ್ ಪಂದ್ಯಗಳಲ್ಲಿ ಮಿಂಚುವಲ್ಲಿ ವಿಫಲರಾಗಿದ್ದಾರೆ.
ವೇಗದ ಬೌಲರ್ ಬ್ಲೇರ್ ಟಿಕ್ನೆರ್ ಗಾಯಗೊಂಡಿದ್ದು, ಅವರ ಬದಲಿಗೆ ಭಾರತ ‘ಎ’ ವಿರುದ್ಧ ಅನಧಿಕೃತ ಟೆಸ್ಟ್ ಪಂದ್ಯವನ್ನಾಡುತ್ತಿದ್ದ ಕ್ರಿಸ್ಟಿಯನ್ ಕ್ಲಾರ್ಕ್‌ಗೆ ಕರೆ ನೀಡಲಾಗಿದೆ.
ಟೆಸ್ಟ್ ತಂಡವನ್ನು ಸೇರುವ ಮೊದಲು ಲ್ಯಾಥಮ್ ಹಾಗೂ ನಿಕೊಲ್ಸ್‌ಗೆ ರನ್ ಗಳಿಸಲು ಮೂರನೇ ಏಕದಿನ ಪಂದ್ಯವು ಕೊನೆಯ ಅವಕಾಶವಾಗಿದೆ.
ಈ ಇಬ್ಬರು ಸೀನಿಯರ್ ಬ್ಯಾಟರ್‌ಗಳು ಮೊದಲೆರಡು ಪಂದ್ಯಗಳಲ್ಲಿ ರನ್‌ಗಾಗಿ ಪರದಾಟ ನಡೆಸಿದ್ದು, ಟೆಸ್ಟ್ ಸರಣಿಗಿಂತ ಮೊದಲು ಆತ್ಮವಿಶ್ವಾಸ ಗಳಿಸುವ ಭರವಸೆಯಲ್ಲಿದ್ದಾರೆ.
ಪಿಚ್ ಹಾಗೂ ಪರಿಸ್ಥಿತಿ: ಹವಾಮಾನ ಮುನ್ಸೂಚನೆಯು ಆಶಾದಾಯಕವಾಗಿಲ್ಲ. ಪಂದ್ಯಕ್ಕೆ ಮಳೆರಾಯ ಗಮನಾರ್ಹ ಅಡಚಣೆ ಉಂಟು ಮಾಡಬಹುದು. ಪಿಚ್ ವೇಗಿಗಳ ಸ್ನೇಹಿಯಾಗಿದೆ. ಮಳೆ ಬಂದ ಕಾರಣ ಪಿಚ್ ತಯಾರಿ ನಡೆಸಲು ಅರ್ಧ ದಿನ ಲಭಿಸಿದೆ. ಮಳೆಯಿಂದಾಗಿ ಭಾರತವು ಒಳಾಂಗಣದಲ್ಲಿ ಅಭ್ಯಾಸ ನಡೆಸಿದೆ.
ತಂಡಗಳು
ಭಾರತ(ಸಂಭಾವ್ಯ): 1.ರೋಹಿತ್ ಶರ್ಮಾ, 2. ಶುಭಮನ್ ಗಿಲ್(ನಾಯಕ), 3. ವಿರಾಟ್ ಕೊಹ್ಲಿ, 4. ಶ್ರೇಯಸ್ ಅಯ್ಯರ್, 5. ಕೆ.ಎಲ್.ರಾಹುಲ್(ವಿಕೆಟ್‌ಕೀಪರ್),6. ನಮನ್ ಧೀರ್, 7. ಅಕ್ಷರ್ ಪಟೇಲ್, 8. ಅನ್ಶುಲ್ ಕಾಂಬೋಜ್, 9. ಆಕಿಬ್ ನಬಿ, 10. ಗುರ್ನೂರ್ ಬ್ರಾರ್, 11. ಅರ್ಷದೀಪ ಸಿಂಗ್.
ನ್ಯೂಝಿಲ್ಯಾಂಡ್(ಸಂಭಾವ್ಯ): 1. ವಿಲ್ ಯಂಗ್, 2. ಟಿಮ್ ಸೀಫರ್ಟ್, 3. ಹೆನ್ರಿ ನಿಕೊಲ್ಸ್, 4. ಡ್ಯಾರಿಲ್ ಮಿಚೆಲ್, 5. ಗ್ಲೆನ್ ಫಿಲಿಪ್ಸ್, 6. ಟಾಮ್ ಲ್ಯಾಥಮ್(ವಿಕೆಟ್‌ಕೀಪರ್), 7. ಮಿಚೆಲ್ ಸ್ಯಾಂಟ್ನರ್(ನಾಯಕ), 8. ನಾಥನ್ ಸ್ಮಿತ್, 9. ಕೈಲ್ ಜಮೀಸನ್, 10. ಮ್ಯಾಟ್ ಫಿಶರ್/ಕ್ರಿಸ್ಟಿಯನ್ ಕ್ಲಾರ್ಕ್, 11. ಜೇಕಬ್ ಡಫಿ.
ಅಂಕಿ-ಅಂಶಗಳು
► ನ್ಯೂಝಿಲ್ಯಾಂಡ್ ತಂಡ ಸ್ವದೇಶದಲ್ಲಿ ಹಿಂದಿನ 11 ಏಕದಿನ ದ್ವಿಪಕ್ಷೀಯ ಸರಣಿಗಳನ್ನು ಗೆದ್ದಿದೆ. ಈ ಹಿಂದೆ 2019ರಲ್ಲಿ ಭಾರತ ತಂಡದ ವಿರುದ್ಧವೇ ಸರಣಿ ಸೋತಿತ್ತು.
► ವೆಲ್ಲಿಂಗ್ಟನ್‌ನಲ್ಲಿ ನ್ಯೂಝಿಲ್ಯಾಂಡ್ ತಂಡ ಭಾರತದ ವಿರುದ್ಧ 134 ರನ್ ಗಳಿಸಿತ್ತು. ಇದು ಸ್ವದೇಶದಲ್ಲಿ ಕಿವೀಸ್‌ನ ಕನಿಷ್ಠ ಸ್ಕೋರಾಗಿದೆ.
► ಪಂದ್ಯ ಆರಂಭದ ಸಮಯ: ಬೆಳಗ್ಗೆ 7:30






