7ನೇ ಏಕದಿನ ಶತಕ ಬಾರಿಸಿದ ಶುಭಮನ್ ಗಿಲ್ | ದಾಖಲೆಗಳ ಸುರಿಮಳೆ

ಶುಭಮನ್ ಗಿಲ್ | PC : PTI
ಅಹಮದಾಬಾದ್ : ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಮೂರನೇ ಹಾಗೂ ಕೊನೆಯ ಪಂದ್ಯದಲ್ಲಿ ಬುಧವಾರ ಭಾರತದ ಶುಭಮನ್ ಗಿಲ್ ಭವ್ಯ ಶತಕ ಬಾರಿಸಿದ್ದಾರೆ. ಅವರು 102 ಎಸೆತಗಳಲ್ಲಿ 112 ರನ್ಗಳನ್ನು ಬಾರಿಸಿದ್ದಾರೆ.
ಈ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಅವರು ಕ್ರಮವಾಗಿ 87 ಮತ್ತು 60 ರನ್ಗಳನ್ನು ಗಳಿಸಿದ್ದು, ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಮುನ್ನ ಉತ್ತಮ ಲಹರಿಯನ್ನು ಮುಂದುವರಿಸಿದ್ದಾರೆ.
25 ವರ್ಷದ ಶುಭಮನ್ ಎಚ್ಚರಿಕೆ ಮತ್ತು ಆಕ್ರಮಣ- ಎರಡೂ ಧೋರಣೆಗಳನ್ನು ಅಳವಡಿಸಿಕೊಂಡು ಎದುರಾಳಿ ಬೌಲರ್ಗಳನ್ನು ಸಮರ್ಥವಾಗಿ ಎದುರಿಸಿದರು. ಅವರು ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ಜೊತೆಗೆ ಮಹತ್ವದ ಭಾಗೀದಾರಿಕೆಗಳನ್ನು ನಿಭಾಯಿಸಿದರು.
ಅವರು ಕೇವಲ 95 ಎಸೆತಗಳಲ್ಲಿ ಶತಕ ಬಾರಿಸಿದರು. ಇದರೊಂದಿಗೆ, ತನ್ನ 50ನೇ ಏಕದಿನ ಪಂದ್ಯದಲ್ಲಿ ಶತಕ ಬಾರಿಸಿದ ಮೊದಲ ಭಾರತೀಯ ಆಟಗಾರನಾದರು. ಅದೂ ಅಲ್ಲದೆ, ಅವರು ಅತಿ ಕಡಿಮೆ ಇನಿಂಗ್ಸ್ಗಳಲ್ಲಿ (50) ಏಳು ಏಕದಿನ ಶತಕಗಳನ್ನು ಬಾರಿಸಿದ್ದಾರೆ. ಜೊತೆಗೆ, ಮೈದಾನವೊಂದರಲ್ಲಿ ಎಲ್ಲಾ ಮೂರು ಮಾದರಿಗಳ ಕ್ರಿಕೆಟ್ನಲ್ಲಿ ಶತಕಗಳನ್ನು ಬಾರಿಸಿದ ಐದನೇ ಕ್ರಿಕೆಟಿಗ ಹಾಗೂ ಮೊದಲ ಭಾರತೀಯ ಕ್ರಿಕೆಟಿಗನಾದರು.
ಮೈದಾನವೊಂದರಲ್ಲಿ ಎಲ್ಲಾ ಮಾದರಿಗಳ ಕ್ರಿಕೆಟ್ನಲ್ಲಿ ಶತಕ ಬಾರಿಸಿದವರು
*ಫಫ್ ಡು ಪ್ಲೆಸಿಸ್- ವಾಂಡರರ್ಸ್, ಜೊಹಾನ್ಸ್ಬರ್ಗ್
ಡೇವಿಡ್ ವಾರ್ನರ್- ಅಡಿಲೇಡ್ ಓವಲ್
ಬಾಬರ್ ಅಝಮ್- ನ್ಯಾಶನಲ್ ಸ್ಟೇಡಿಯಮ್, ಕರಾಚಿ
ಕ್ವಿಂಟನ್ ಡಿ ಕಾಕ್- ಸೂಪರ್ಸ್ಪೋರ್ಟ್ ಪಾರ್ಕ್, ಸೆಂಚೂರಿಯನ್
ಶುಭಮನ್ ಗಿಲ್- ಮೊಟೇರಾ, ಅಹ್ಮದಾಬಾದ್







