ಐಸಿಸಿ ತಿಂಗಳ ಆಟಗಾರ ಪ್ರಶಸ್ತಿಗೆ ಶುಭಮನ್ ಗಿಲ್ ಆಯ್ಕೆ

ಶುಭಮನ್ ಗಿಲ್ | PC : X\ ICC
ಹೊಸದಿಲ್ಲಿ: ಭಾರತದ ಸ್ಟಾರ್ ಬ್ಯಾಟರ್ ಶುಭಮನ್ ಗಿಲ್ 2025ರ ಫೆಬ್ರವರಿ ತಿಂಗಳ ಐಸಿಸಿ ಪುರುಷ ಕ್ರಿಕೆಟಿಗನಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಗಿಲ್ ಸಾಧನೆಗಳ ಪಟ್ಟಿಗೆ ಮತ್ತೊಂದು ಪುರಸ್ಕಾರ ಸೇರ್ಪಡೆಯಾಗಿದೆ.
ಈ ತಿಂಗಳು ಪೂರ್ತಿ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಗಿಲ್ ಅವರು ಆಸ್ಟ್ರೇಲಿಯದ ಸ್ಟೀವ್ ಸ್ಮಿತ್ ಹಾಗೂ ನ್ಯೂಝಿಲ್ಯಾಂಡ್ನ ಗ್ಲೆನ್ ಫಿಲಿಪ್ಸ್ ರನ್ನು ಹಿಂದಿಕ್ಕಿ ಪ್ರತಿಷ್ಠಿತ ಗೌರವಕ್ಕೆ ಪಾತ್ರರಾಗಿದ್ದಾರೆ.
ಅಗ್ರ ಸರದಿಯ ಬ್ಯಾಟರ್ ಗಿಲ್ 94.19ರ ಸ್ಟ್ರೈಕ್ರೇಟ್ನಲ್ಲಿ 101.50ರ ಸರಾಸರಿಯಲ್ಲಿ ಕೇವಲ 5 ಏಕದಿನ ಪಂದ್ಯಗಳಲ್ಲಿ ಒಟ್ಟು 406 ರನ್ ಗಳಿಸಿದ್ದಾರೆ. ಕ್ರೀಸ್ನಲ್ಲಿ ಗಿಲ್ ಅವರ ಸ್ಥಿರ ಪ್ರದರ್ಶನದಿಂದಾಗಿ ಭಾರತ ತಂಡವು ಇಂಗ್ಲೆಂಡ್ ವಿರುದ್ಧ ಸರಣಿಯನ್ನು 3-0 ಅಂತರದಿಂದ ಗೆದ್ದುಕೊಂಡಿತು. ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಗಿಲ್ ಅವರು ಸತತ ಮೂರು ಅರ್ಧಶತಕಗಳನ್ನು ಗಳಿಸಿದ್ದರು.
ನಾಗ್ಪುರದಲ್ಲಿ 87 ರನ್ ಗಳಿಸಿದ್ದ ಗಿಲ್, ಕಟಕ್ನಲ್ಲಿ 60 ರನ್ ಕಲೆ ಹಾಕಿದ್ದರು. ಅಹ್ಮದಾಬಾದ್ನಲ್ಲಿ 102 ಎಸೆತಗಳಲ್ಲಿ 14 ಬೌಂಡರಿ ಹಾಗೂ 3 ಸಿಕ್ಸರ್ಗಳ ಸಹಿತ 112 ರನ್ ಗಳಿಸಿದ್ದರು. ಈ ಶತಕದಿಂದ ಸುಲಭ ಗೆಲುವು ಲಭಿಸಿದ್ದಲ್ಲದೆ ‘ಪಂದ್ಯಶ್ರೇಷ್ಠ’ ಹಾಗೂ ‘ಸರಣಿ ಶ್ರೇಷ್ಠ’ ಪ್ರಶಸ್ತಿಗಳು ಒಲಿದಿದ್ದವು.
‘‘ತಂಡದ ಯಶಸ್ಸಿಗೆ ಕೊಡುಗೆ ನೀಡುವುದು, ಅದಕ್ಕಾಗಿ ಗುರುತಿಸಲ್ಪಡುವುದು ಯಾವಾಗಲೂ ವಿಶೇಷವಾಗಿರುತ್ತದೆ. ನನ್ನ ಗಮನ ಯಾವಾಗಲೂ ಸಕಾರಾತ್ಮಕವಾಗಿ ಆಡುವುದು ಹಾಗೂ ಪ್ರತಿಯೊಂದು ಅವಕಾಶವನ್ನು ಪರಿಗಣಿಸುವುದರ ಮೇಲೆ ಇರುತ್ತದೆ’’ಎಂದು ಗಿಲ್ ಹೇಳಿದ್ದಾರೆ.
ಗಿಲ್ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲೂ ಉತ್ತಮ ಪ್ರದರ್ಶನ ಮುಂದುವರಿಸಿದ್ದರು. ದುಬೈನಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತ ಆಡಿದ್ದ ಟೂರ್ನಿಯ ಮೊದಲ ಪಂದ್ಯದಲ್ಲಿ ಔಟಾಗದೆ 101 ರನ್, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ದ 46 ರನ್ ಗಳಿಸಿದ್ದರು. ಈ ಟೂರ್ನಿಯಲ್ಲಿ ಗಿಲ್ ಅವರ ಸ್ಥಿರ ಪ್ರದರ್ಶನವು ಭಾರತವು ಪ್ರಶಸ್ತಿ ಗೆಲ್ಲಲು ನೆರವಾಯಿತು. 2024ರಿಂದ ವಿಶ್ವದ ಅಗ್ರಮಾನ್ಯ ಏಕದಿನ ಬ್ಯಾಟರ್ ಸ್ಥಾನಮಾನ ಉಳಿಸಿಕೊಂಡಿದ್ದಾರೆ.
ಗಿಲ್ 3ನೇ ಬಾರಿ ಐಸಿಸಿ ತಿಂಗಳ ಕ್ರಿಕೆಟಿಗ ಪ್ರಶಸ್ತಿಗೆ ಭಾಜನರಾಗಿದ್ದಾರೆ. 2023ರಲ್ಲಿ ಜನವರಿ ಹಾಗೂ ಸೆಪ್ಟಂಬರ್ನಲ್ಲಿ 2 ಬಾರಿ ಈ ಗೌರವ ಪಡೆದಿದ್ದರು.