ಸುನೀಲ್ ಗವಾಸ್ಕರ್ ದಾಖಲೆ ಮುರಿದ ಶುಭಮನ್ ಗಿಲ್

ಶುಭಮನ್ ಗಿಲ್ | PTI
ಲಂಡನ್, ಆ. 2: ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತೀಯ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ಶುಭಮನ್ ಗಿಲ್ ಶನಿವಾರ ಟೆಸ್ಟ್ ಸರಣಿಯೊಂದರಲ್ಲಿ 2ನೇ ಅತಿ ಹೆಚ್ಚು ರನ್ ಗಳನ್ನು ಗಳಿಸಿದ ಭಾರತೀಯ ಬ್ಯಾಟರ್ ಆಗಿ ಹೊರಹೊಮ್ಮಿದ್ದಾರೆ. ಲಂಡನ್ ನ ಓವಲ್ ನಲ್ಲಿ ನಡೆಯುತ್ತಿರುವ ಆತಿಥೇಯ ಇಂಗ್ಲೆಂಡ್ ವಿರುದ್ಧದ 5ನೇ ಹಾಗೂ ಕೊನೆಯ ಟೆಸ್ಟ್ನ 3ನೇ ದಿನದಂದು ಅವರು ಈ ಸಾಧನೆ ಮಾಡಿದ್ದಾರೆ.
ಭೋಜನದ ಬಳಿಕದ ಅವಧಿಯ ಆಟದ ಮೊದಲ ಎಸೆತದಲ್ಲೇ ಗಿಲ್ ಔಟಾದರು. 11 ರನ್ ಗಳಿಸಿದ್ದ ಅವರು ಗಸ್ ಆ್ಯಟ್ಕಿನ್ಸನ್ ಎಸೆತವನ್ನು ಎದುರಿಸಲು ಹೋಗಿ ಎಲ್ ಬಿ ಡಬ್ಲ್ಯು ಬಲೆಗೆ ಬಿದ್ದರು. ಆದರೆ, ಅದಾಗಲೇ ಅವರು ದಾಖಲೆಯನ್ನು ನಿರ್ಮಿಸಿದ್ದರು. ಅವರು ಪೆವಿಲಿಯನ್ ಗೆ ಹಿಂದಿರುಗುವಾಗ ಪ್ರೇಕ್ಷಕರು ಎದ್ದು ನಿಂತು ಚಪ್ಪಾಳೆ ತಟ್ಟಿದರು.
ಶುಭಮನ್ ಗಿಲ್ ಹಾಲಿ ಸರಣಿಯ 10 ಇನಿಂಗ್ಸ್ ಗಳಿಂದ 75.40 ಸರಾಸರಿಯಲ್ಲಿ 754 ರನ್ ಗಳಿಸಿದ್ದಾರೆ. ಇದರಲ್ಲಿ 4 ಶತಕಗಳಿವೆ ಮತ್ತು ಒಂದು ಇನಿಂಗ್ಸ್ ನಲ್ಲಿ 269 ರನ್ ಗಳಿಸಿದ್ದಾರೆ.
ಟೆಸ್ಟ್ ಸರಣಿಯೊಂದರಲ್ಲಿ ಗರಿಷ್ಠ ರನ್ ಗಳಿಸಿದ ಭಾರತೀಯ ಬ್ಯಾಟರ್ಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಸುನೀಲ್ ಗವಾಸ್ಕರ್ ಇದ್ದಾರೆ. ಅವರು 1971ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ 774 ರನ್ಗಳನ್ನು ಗಳಿಸಿದ್ದರು.
ಇಂಗ್ಲೆಂಡ್ ನಲ್ಲಿ ಟೆಸ್ಟ್ ಸರಣಿಯೊಂದರಲ್ಲಿ 700ಕ್ಕಿಂತ ಅಧಿಕ ರನ್ಗಳನ್ನು ಗಳಿಸಿದ ಮೊದಲ ಭಾರತೀಯನಾಗಿಯೂ ಶುಭಮನ್ ಗಿಲ್ ಹೊರಹೊಮ್ಮಿದ್ದಾರೆ. ಜೊತೆಗೆ, ನಾಯಕನಾಗಿ ಚೊಚ್ಚಲ ಟೆಸ್ಟ್ ಸರಣಿಯಲ್ಲಿ 750ಕ್ಕಿಂತಲೂ ಅಧಿಕ ರನ್ ಗಳನ್ನು ಗಳಿಸಿದ 2ನೇ ಆಟಗಾರನೂ ಅವರಾಗಿದ್ದಾರೆ. ಮೊದಲ ಸ್ಥಾನದಲ್ಲಿ ಡಾನ್ ಬ್ರಾಡ್ಮನ್ ಇದ್ದಾರೆ.
ಟೆಸ್ಟ್ ಸರಣಿಯೊಂದರಲ್ಲಿ ಗರಿಷ್ಠ ರನ್ಗಳನ್ನು ಗಳಿಸಿದ ಭಾರತೀಯ ನಾಯಕನೂ ಗಿಲ್ ಆಗಿದ್ದಾರೆ. ಅವರು ಸುನೀಲ್ ಗವಾಸ್ಕರ್ ದಾಖಲೆಯನ್ನು ಮುರಿದಿದ್ದಾರೆ.
6,000 ಅಂತರರಾಷ್ಟ್ರೀಯ ರನ್ಗಳನ್ನು ಗಳಿಸಿದ ಗಿಲ್
ಭಾರತೀಯ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ಶುಭಮನ್ ಗಿಲ್ ಅಂತರ್ರಾಷ್ಟ್ರೀಯ ಕ್ರಿಕೆಟ್ ನಲ್ಲಿ 6,000 ರನ್ಗಳ ಮೈಲಿಗಲ್ಲನ್ನು ದಾಟಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ 5ನೇ ಹಾಗೂ ಕೊನೆಯ ಪಂದ್ಯದ 3ನೇ ದಿನವಾದ ಶನಿವಾರ ಅವರು ಈ ಸಾಧನೆ ಮಾಡಿದ್ದಾರೆ.
ಈ ಸರಣಿಯಲ್ಲಿ ಅವರು 754 ರನ್ ಗಳಿಸಿದ್ದಾರೆ. ಅವರು 10 ಇನಿಂಗ್ಸ್ಗಳಲ್ಲಿ 4 ಶತಕಗಳನ್ನು ಬಾರಿಸಿದ್ದಾರೆ. ಇದಕ್ಕೂ ಮೊದಲು, ಟೆಸ್ಟ್ ಸರಣಿಯೊಂದರಲ್ಲಿ ತಂಡದ ನಾಯಕನಾಗಿ ಈ ಸಾಧನೆಯನ್ನು ಮಾಡಿದವರೆಂದರೆ ಡಾನ್ ಬ್ರಾಡ್ಮನ್ ಮತ್ತು ಸುನೀಲ್ ಗವಾಸ್ಕರ್.
ನಾಯಕನಾಗಿ ತನ್ನ ಮೊದಲ ಟೆಸ್ಟ್ ಸರಣಿಯಲ್ಲಿ 4 ಟೆಸ್ಟ್ ಶತಕಗಳನ್ನು ಬಾರಿಸಿರುವ ಮೊದಲ ಆಟಗಾರ ಗಿಲ್ ಆಗಿದ್ದಾರೆ.
ಅಂತರರಾಷ್ಟ್ರೀಯ ಕ್ರಿಕೆಟ್ ನಲ್ಲಿ ಎಲ್ಲಾ 3 ಮಾದರಿಗಳಲ್ಲಿ ಗಿಲ್ 113 ಪಂದ್ಯಗಳಲ್ಲಿ 6,000 ರನ್ ಗಳಿಸಿದ್ದಾರೆ. ಅದರಲ್ಲಿ 18 ಶತಕಗಳು ಮತ್ತು 25 ಅರ್ಧ ಶತಕಗಳಿವೆ. 269 ಅವರ ಗರಿಷ್ಠ ಮೊತ್ತವಾಗಿದೆ.
ಈ ಸರಣಿಯ ಅವರ ಶ್ರೇಷ್ಠ ಇನಿಂಗ್ಸ್ ಓಲ್ಡ್ ಟ್ರಾಫರ್ಡ್ನಲ್ಲಿ ನಡೆದ 4ನೇ ಇನಿಂಗ್ಸ್ನಲ್ಲಿ ದಾಖಲಾಗಿದೆ. ಅವರು ಅಲ್ಲಿ 103 ರನ್ ಗಳಿಸಿದ್ದಾರೆ. 1990ರಲ್ಲಿ ಸಚಿನ್ ತೆಂಡುಲ್ಕರ್ ಅಲ್ಲಿ 119 ರನ್ಗಳನ್ನು ಬಾರಿಸಿದ್ದರು. ಆ ಬಳಿಕ ಆ ಮೈದಾನದಲ್ಲಿ ಭಾರತೀಯ ಕ್ರಿಕೆಟಿಗರೊಬ್ಬರ ಮೊದಲ ಶತಕ ಇದಾಗಿದೆ.







