ಎರಡನೇ ಟೆಸ್ಟ್: ಶುಭಮನ್ ಗಿಲ್ ಆಡುವುದು ಅನುಮಾನ

ಶುಭಮನ್ ಗಿಲ್ | Photo Credit : PTI
ಹೊಸದಿಲ್ಲಿ, ಡಿ.17: ಕೋಲ್ಕತಾದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯದ ವೇಳೆ ಕುತ್ತಿಗೆ ನೋವಿಗೆ ಒಳಗಾಗಿದ್ದ ಭಾರತದ ಪುರುಷರ ಟೆಸ್ಟ್ ತಂಡದ ನಾಯಕ ಶುಭಮನ್ ಗಿಲ್ ಗುವಾಹಟಿಯಲ್ಲಿ ನ.22ರಿಂದ ಆರಂಭವಾಗಲಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಆಡುವ ಕುರಿತು ಅನಿಶ್ಚಿತತೆ ಏರ್ಪಟ್ಟಿದೆ.
ಗಿಲ್ ಅವರು ತಂಡದೊಂದಿಗೆ ಗುವಾಹಟಿಗೆ ಪ್ರಯಾಣಿಸುವ ಸಾಧ್ಯತೆಯಿದೆ. ಆದರೆ ಅವರು ಎರಡನೇ ಪಂದ್ಯಕ್ಕೆ ಲಭ್ಯವಿರುವ ಕುರಿತು ಖಚಿತತೆ ಇಲ್ಲವಾಗಿದೆ.
‘‘ಟೆಸ್ಟ್ ಸರಣಿಯ ಎರಡನೇ ಪಂದ್ಯದ ವೇಳೆಗೆ ಗಿಲ್ ಫಿಟ್ ಇರಲಿದ್ದಾರೆಂಬ ವಿಶ್ವಾಸವಿದೆ. ಒಂದೊಮ್ಮೆ ಅವರು ಫಿಟ್ ಆಗಿರದೇ ಇದ್ದರೆ, ಸಾಯಿ ಸುದರ್ಶನ್ ಅವರು ಆಡುವ 11ರ ಬಳಗಕ್ಕೆ ಮರಳಬಹುದು. ಒಂದು ವೇಳೆ ಭಾರತವು ಇಬ್ಬರು ವೇಗಿಗಳು ಹಾಗೂ ನಾಲ್ವರು ಸ್ಪಿನ್ನರ್ ಗಳ ಸಹಿತ ಆರು ಬೌಲರ್ ಗಳನ್ನು ಆಡಿಸಿದರೆ ಉಳಿದ ತಂಡದಲ್ಲಿ ಬದಲಾವಣೆ ಇರದು. ಕೇವಲ ಒಂದು ಬದಲಾವಣೆ ಇರಬಹುದು’’ ಎಂದು ಭಾರತದ ಮಾಜಿ ಸ್ಪಿನ್ನರ್ ಅನಿಲ್ ಕುಂಬ್ಳೆ ಹೇಳಿದ್ದಾರೆ.
ಇತ್ತೀಚೆಗೆ ಆಸ್ಟ್ರೇಲಿಯ ‘ಎ’ ತಂಡದ ವಿರುದ್ಧ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ 150 ರನ್ ಗಳಿಸಿದ್ದ ದೇವದತ್ತ ಪಡಿಕ್ಕಲ್ ಅವರು ಗಿಲ್ ಬದಲಿಗೆ ಆಡುವ ವಿಶ್ವಾಸದಲ್ಲಿದ್ದಾರೆ.
ಸಾಯಿ ಸುದರ್ಶನ್ ಹೊಸದಿಲ್ಲಿಯಲ್ಲಿ ವೆಸ್ಟ್ಇಂಡೀಸ್ ವಿರುದ್ಧ 87 ಹಾಗೂ 39 ರನ್ ಗಳಿಸಿದ್ದರು. ಆದರೆ ಈ ತಿಂಗಳಾರಂಭದಲ್ಲಿ ದಕ್ಷಿಣ ಆಫ್ರಿಕಾ ‘ಎ’ ವಿರುದ್ಧ ಭಾರತ ‘ಎ’ ತಂಡದ ಪರ ನಾಲ್ಕು ಇನಿಂಗ್ಸ್ಗಳಲ್ಲಿ 32 ರನ್ ಗಳಿಸಲಷ್ಟೇ ಶಕ್ತರಾಗಿದ್ದರು.
ಪಡಿಕ್ಕಲ್ ಅವರು ಬಾರ್ಡರ್-ಗವಾಸ್ಕರ್ ಟ್ರೋಫಿ ಟೂರ್ನಿ ಹಾಗೂ ಸ್ವದೇಶದಲ್ಲಿ ನಡೆದಿದ್ದ ಇಂಗ್ಲೆಂಡ್ ವಿರುದ್ಧ ಸರಣಿಯಲ್ಲಿ ತಲಾ ಒಂದು ಟೆಸ್ಟ್ ಪಂದ್ಯ ಆಡಿದ್ದರು.
ಗಿಲ್ ಬದಲಿಗೆ ಭಾರತವು ಸುದರ್ಶನ್ ಇಲ್ಲವೆ ಪಡಿಕ್ಕಲ್ಗೆ ಅವಕಾಶ ನೀಡಿ ಒಂದು ಬದಲಾವಣೆ ಮಾಡಿದರೆ ಏಳು ಎಡಗೈ ಬ್ಯಾಟರ್ ಗಳನ್ನು ಕಣಕ್ಕಿಳಿಸಿದಂತಾಗುತ್ತದೆ. ಕೋಲ್ಕತಾದಲ್ಲಿ ಭಾರತವು ಇದೇ ಮೊದಲ ಬಾರಿ ಆಡುವ 11ರ ಬಳಗದಲ್ಲಿ ಆರು ಎಡಗೈ ಬ್ಯಾಟರ್ ಗಳನ್ನು ಆಯ್ಕೆ ಮಾಡಿತ್ತು. ದಕ್ಷಿಣ ಆಫ್ರಿಕಾದ ಸ್ಪಿನ್ನರ್ ಸೈಮನ್ ಹಾರ್ಮರ್ ಆರು ಎಡಗೈ ಬ್ಯಾಟರ್ ಗಳನ್ನು ಪೆವಿಲಿಯನ್ ಗೆ ಕಳುಹಿಸಿದ್ದರು.







