2ನೇ ಟೆಸ್ಟ್ಗೆ ಶುಭಮನ್ ಗಿಲ್ ಲಭ್ಯತೆ ಅನಿಶ್ಚಿತ

ಶುಭಮನ್ ಗಿಲ್ | Photo Credit : PTI
ಕೋಲ್ಕತಾ, ನ. 18: ಗುವಾಹಟಿಯಲ್ಲಿ ಶನಿವಾರ ಆರಂಭವಾಗಲಿರುವ ಪ್ರವಾಸಿ ದಕ್ಷಿಣ ಆಫ್ರಿಕ ವಿರುದ್ಧದ ಎರಡನೇ ಹಾಗೂ ಕೊನೆಯ ಟೆಸ್ಟ್ಗೆ ಭಾರತ ತಂಡದ ನಾಯಕ ಶುಭಮನ್ ಗಿಲ್ ಲಭ್ಯರಾಗುವ ಬಗ್ಗೆ ಅನಿಶ್ಚಿತತೆ ತಲೆದೋರಿದೆ. ಭಾರತೀಯ ತಂಡವು ಮಂಗಳವಾರ ಕೋಲ್ಕತಾದಲ್ಲಿ ಅಭ್ಯಾಸ ನಡೆಸುತ್ತಿದ್ದಾಗ ಗಿಲ್ ಅಲ್ಲೆಲ್ಲಿಯೂ ಕಾಣಿಸಲಿಲ್ಲ. ಅದು ಅವರ ದೈಹಿಕ ಕ್ಷಮತೆ ಮತ್ತು ಅವರು ಮಹತ್ವದ ಎರಡನೇ ಟೆಸ್ಟ್ಗೆ ಲಭಿಸುವ ಕುರಿತ ಊಹಾಪೋಹಗಳಿಗೆ ಕಾರಣವಾಗಿದೆ.
ಕೋಲ್ಕತದಲ್ಲಿ ನಡೆದ ದಕ್ಷಿಣ ಆಫ್ರಿಕ ವಿರುದ್ಧದ ಮೊದಲ ಟೆಸ್ಟ್ ನ ಮೊದಲ ಇನಿಂಗ್ಸ್ ನಲ್ಲಿ ಕತ್ತು ನೋವಿಗೆ ಒಳಗಾದ ಬಳಿಕ, ಭಾರತೀಯ ನಾಯಕ ಬಹುತೇಕ ಇಡೀ ಪಂದ್ಯದಿಂದ ಹೊರಗಿದ್ದರು. ಎರಡನೇ ಇನಿಂಗ್ಸ್ನಲ್ಲಿ ನಾಯಕನ ಹೊಣೆಯನ್ನು ಉಪನಾಯಕ ರಿಶಭ್ ಪಂತ್ ವಹಿಸಿದ್ದರು.
ಎರಡನೇ ಟೆಸ್ಟ್ ನಡೆಯುವ ಗುವಾಹಟಿಗೆ ಶುಭಮನ್ ಗಿಲ್ ಪ್ರಯಾಣಿಸುವ ಸಾಧ್ಯತೆಯಿಲ್ಲ ಎಂಬುದಾಗಿ ತಂಡದ ಮೂಲಗಳು ತಿಳಿಸಿವೆ. ಹಾಗಾಗಿ, ಈ ಪಂದ್ಯದಲ್ಲಿ ವಿಕೆಟ್ ಕೀಪರ್-ಬ್ಯಾಟರ್ ರಿಶಭ್ ಪಂತ್ ಮತ್ತೊಮ್ಮೆ ನಾಯಕನ ಜವಾಬ್ದಾರಿಯನ್ನು ನಿಭಾಯಿಸುವ ಸಾಧ್ಯತೆ ಇದೆ.
ಈ ಮಹತ್ವದ ಪಂದ್ಯಕ್ಕೆ ಗಿಲ್ ಲಭಿಸದಿದ್ದರೆ ಭಾರತಕ್ಕೆ ದೊಡ್ಡ ಹಿನ್ನಡೆಯಾಗಲಿದೆ. ಅದು ರಿಶಭ್ ಪಂತ್ ಮೇಲೆ ಹೊರೆಯಾಗಬಹುದು. ಯಾಕೆಂದರೆ ಅವರು ಬ್ಯಾಟಿಂಗ್ ಮೇಲೆ ಗಮನ ಹರಿಸುವುದರ ಜೊತೆಗೆ ನಾಯಕನ ಜವಾಬ್ದಾರಿಯನ್ನೂ ನಿಭಾಯಿಸಬೇಕಾಗುತ್ತದೆ.







