ದಕ್ಷಿಣ ಆಫ್ರಿಕಾ ವಿರುದ್ಧ ಎರಡನೇ ಟೆಸ್ಟ್: ಶುಭಮನ್ ಗಿಲ್ ಔಟ್

ಶುಭಮನ್ ಗಿಲ್ |Photo Credit : PTI
ಹೊಸದಿಲ್ಲಿ, ನ.20: ದಕ್ಷಿಣ ಆಫ್ರಿಕಾ ವಿರುದ್ಧ ಶನಿವಾರದಿಂದ ಗುವಾಹಟಿಯಲ್ಲಿ ಆರಂಭವಾಗಲಿರುವ ದ್ವಿತೀಯ ಟೆಸ್ಟ್ ಪಂದ್ಯದಿಂದ ನಾಯಕ ಶುಭಮನ್ ಗಿಲ್ ಹೊರಗುಳಿಯಲಿದ್ದು, ಈ ಬೆಳವಣಿಗೆಯು ಭಾರತೀಯ ಕ್ರಿಕೆಟ್ ತಂಡಕ್ಕೆ ತೀವ್ರ ಹಿನ್ನಡೆಯಾಗಿದೆ.
ಭಾರತ ಕ್ರಿಕೆಟ್ ತಂಡದ ನಾಯಕ ಗಿಲ್ ತಂಡದೊಂದಿಗೆ ಗುವಾಹಟಿಗೆ ಪ್ರಯಾಣಿಸಿದ್ದು, ಚೇತರಿಕೆಯ ಹಾದಿಯಲ್ಲಿದ್ದಾರೆ. ಆದರೆ ಗಿಲ್ ಇನ್ನೂ ಪಂದ್ಯ ಆಡುವಷ್ಟು ಫಿಟ್ನೆಸ್ ಪಡೆದಿಲ್ಲ. ಸರಣಿ ನಿರ್ಣಾಯಕ ಪಂದ್ಯದಲ್ಲಿ ಮೈದಾನಕ್ಕೆ ಇಳಿಯಲು ಅವರಿಗೆ ಅನುಮತಿ ಸಿಗಲಾರದು ಎಂದು ಬಿಸಿಸಿಐ ವೈದ್ಯಕೀಯ ತಂಡ ಅಭಿಪ್ರಾಯಪಟ್ಟಿದೆ.
ತನ್ನ ಫಿಟ್ನೆಸ್ ಟೆಸ್ಟ್ ಗಾಗಿ ಗಿಲ್ ಅವರು ಗುವಾಹಟಿಯಲ್ಲಿ ದೀರ್ಘಕಾಲ ನೆಟ್ ನಲ್ಲಿ ಬೆವರು ಹರಿಸುವ ವಿಶ್ವಾಸದಲ್ಲಿದ್ದಾರೆ. ಆದರೆ ಮ್ಯಾನೇಜ್ ಮೆಂಟ್ ರಿಸ್ಕ್ ತೆಗೆದುಕೊಳ್ಳಲು ಬಯಸದೆ, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸಲು ಬಯಸಿದೆ. ಈ ತಿಂಗಳಾಂತ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯ ವೇಳೆ ಗಿಲ್ ಚೇತರಿಸಿಕೊಳ್ಳಲಿದ್ದಾರೆಂಬ ವಿಶ್ವಾಸ ಇರಿಸಲಾಗಿದೆ. ಉತ್ತಮವಾಗಿ ಚೇತರಿಸಿಕೊಳ್ಳಲು ಗುವಾಹಟಿಯಿಂದ ಮನೆಗೆ ತೆರಳುವಂತೆ ಗಿಲ್ ಗೆ ಭಾರತೀಯ ಕ್ರಿಕೆಟ್ ಮಂಡಳಿಯು ಸೂಚಿಸುವ ಸಾಧ್ಯತೆಯಿದೆ.
ಉಪ ನಾಯಕ ರಿಷಭ್ ಪಂತ್ ಗಿಲ್ ಅನುಪಸ್ಥಿತಿಯಲ್ಲಿ ಭಾರತೀಯ ತಂಡವನ್ನು ನಾಯಕನಾಗಿ ಮುನ್ನಡೆಸಲಿದ್ದಾರೆ. ನಾಲ್ಕನೇ ಕ್ರಮಾಂಕದ ಖಾಯಂ ಆಟಗಾರನ ಅನುಪಸ್ಥಿತಿಯಲ್ಲಿ ತಂಡವು ಆಡುವ 11ರ ಬಳಗದ ಆಯ್ಕೆಗೆ ಸಂಬಂಧಿಸಿ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ. ಟೀಮ್ ಮ್ಯಾನೇಜ್ ಮೆಂಟ್ ಅಕ್ಷರ್ ಪಟೇಲ್ ರನ್ನು ಹೆಚ್ಚುವರಿ ಸ್ಪಿನ್ನರ್ ಆಗಿ ಆಡಿಸಲು ಬಯಸಿದ್ದರಿಂದ ಕೋಲ್ಕತಾ ಟೆಸ್ಟ್ನಿಂದ ಸಾಯಿ ಸುದರ್ಶನ್ ರನ್ನು ನಿರ್ಲಕ್ಷಿಸಲಾಗಿತ್ತು. ಅಲ್ ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಅವರನ್ನು ಟೆಸ್ಟ್ ತಂಡಕ್ಕೆ ಮತ್ತೆ ಸೇರಿಸಿಕೊಳ್ಳಲಾಗಿದೆ. ಅಕ್ಷರ್ ಗೆ ವಿಶ್ರಾಂತಿ ನೀಡಿ ಸುದರ್ಶನ್ ಹಾಗೂ ನಿತೀಶ್ ರನ್ನು ಆಡುವ 11ರ ಬಳಗಕ್ಕೆ ಸೇರಿಸಿಕೊಳ್ಳುವ ಹೆಚ್ಚಿನ ಸಾಧ್ಯತೆ ಇದೆ.
ಪಂದ್ಯದ ದಿನ ಪಿಚ್ನ ಪರಿಸ್ಥಿತಿಗೆ ತಕ್ಕಂತೆ ತಂಡವನ್ನು ಆಯ್ಕೆ ಮಾಡಲಾಗುತ್ತದೆ. ಗುವಾಹಟಿಯ ಕೆಂಪು ಮಣ್ಣಿನ ಪಿಚ್ ಬರ್ಸಪಾರ ಸ್ಟೇಡಿಯಂ ಟೆಸ್ಟ್ ಆಯೋಜಿಸುತ್ತಿರುವ ಭಾರತದ 28ನೇ ಮೈದಾನವಾಗಿದೆ. ಭಾರತೀಯ ತಂಡವು ಟರ್ನ್ ಹಾಗೂ ಬೌನ್ಸ್ ನಿರೀಕ್ಷಿಸುತ್ತಿದೆ.
ಸರಣಿಯಲ್ಲಿ 0-1ರಿಂದ ಹಿನ್ನಡೆಯಲ್ಲಿರುವ ಭಾರತ ತಂಡವು ಗೌತಮ್ ಗಂಭೀರ್ ಮಾರ್ಗದರ್ಶನದಲ್ಲಿ ಸ್ವದೇಶದಲ್ಲಿ ಸತತ ಎರಡನೇ ವೈಟ್ವಾಶ್ನಿಂದ ಪಾರಾಗಲು ಮುಂದಿನ ಪಂದ್ಯದಲ್ಲಿ ಸರಿಯಾದ ಕಾಂಬಿನೇಶನ್ ನೊಂದಿಗೆ ಆಡಲು ಬಯಸಿದೆ.







