South Africa ವಿರುದ್ಧ T20 ಸರಣಿಗೆ ಶುಭಮನ್ ಗಿಲ್ ಲಭ್ಯ

ಶುಭಮನ್ ಗಿಲ್ | Photo Credit : PTI
ಹೊಸದಿಲ್ಲಿ, ಡಿ.6: ಭಾರತದ T20 ಕ್ರಿಕೆಟ್ ತಂಡದ ಉಪ ನಾಯಕ ಶುಭಮನ್ ಗಿಲ್ ದಕ್ಷಿಣ ಆಫ್ರಿಕಾ ವಿರುದ್ಧ T20 ಸರಣಿಯ ಮೊದಲ ಪಂದ್ಯದಲ್ಲಿ ಆಡಲು ಫಿಟ್ ಆಗಿದ್ದಾರೆಂದು ಘೋಷಿಸಲಾಗಿದೆ. ಗಿಲ್ ಅವರು BCCIನ ಸೆಂಟರ್ ಆಫ್ ಎಕ್ಸಲೆನ್ಸ್ನ ಸ್ಪೋರ್ಟ್ಸ್ ಸೈನ್ಸ್ ಟೀಮ್ ನಿಂದ ಆಡಲು ಅನುಮತಿ ಪಡೆದಿದ್ದಾರೆ.
ಕೋಲ್ಕತಾ ಟೆಸ್ಟ್ ಪಂದ್ಯದ ವೇಳೆ ಕಾಣಿಸಿಕೊಂಡ ಕುತ್ತಿಗೆ ನೋವಿನ ನಂತರ ಗಿಲ್ ಅವರು ಪುನಶ್ಚೇತನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಗಿಲ್ ಅವರನ್ನು T20 ತಂಡಕ್ಕೆ ಆಯ್ಕೆ ಮಾಡಲಾಗಿತ್ತು. ಅವರ ಲಭ್ಯತೆಯು ಫಿಟ್ನೆಸ್ನ್ನು ಅವಲಂಬಿಸಿದೆ ಎಂದು ಹೇಳಲಾಗಿತ್ತು.
ಶುಭಮನ್ ಗಿಲ್ ಅವರು ಸಿಒಇನಲ್ಲಿ ಪುನಶ್ಚೇತನ ಶಿಬಿರವನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ಎಲ್ಲ ಮಾದರಿಯ ಕ್ರಿಕೆಟ್ಗೆ ಫಿಟ್ ಎಂದು ಘೋಷಿಸಲು ಅಗತ್ಯವಿರುವ ಮಾನದಂಡವನ್ನು ಪೂರೈಸಿದ್ದಾರೆ ಎಂದು ಫಿಸಿಯೊ ಕಮಲೇಶ್ ಜೈನ್, ಕಂಡೀಶನಿಂಗ್ ಕೋಚ್ ಅಡ್ರಿಯಾನ್ ಲಿ ರೋಕ್ಸ್ ಹಾಗೂ ಸ್ಪೋರ್ಟ್ಸ್ ಡಾಕ್ಟರ್ ಡಾ. ಚಾರ್ಲ್ಸ್ ಅವರನ್ನೊಳಗೊಂಡ ಸ್ಪೋಟ್ಸ್ ಸೈನ್ಸ್ ಹಾಗೂ ಮೆಡಿಶಿನ್ ತಂಡ ಪ್ರಕಟನೆಯೊಂದರಲ್ಲಿ ತಿಳಿಸಿದೆ.
ಕೋಲ್ಕತಾ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ಗಿಲ್ ಗಾಯಗೊಂಡಿದ್ದರು. ಅವರು ಕೆಲವು ದಿನಗಳ ಕಾಲ ಆಸ್ಪತ್ರೆಯಲ್ಲಿದ್ದರು.
ಈಗ ನಡೆಯುತ್ತಿರುವ ಏಕದಿನ ಸರಣಿಯಿಂದ ಗಿಲ್ ವಂಚಿತರಾಗಿದ್ದರು. ಕೇವಲ T20 ತಂಡದಲ್ಲಿರುವ ಆಟಗಾರರು ಶನಿವಾರ ಕಟಕ್ ನಲ್ಲಿ ಒಟ್ಟು ಸೇರಲಿದ್ದು, ರವಿವಾರ ಮೊದಲ ತರಬೇತಿಯನ್ನು ನಿಗದಿಪಡಿಸಲಾಗಿದೆ.







