ಭಾರತದ ಏಕದಿನ ಕ್ರಿಕೆಟ್ ನಾಯಕನಾಗಿ ಶುಭಮನ್ ಗಿಲ್ : ರೋಹಿತ್ ಶರ್ಮಾರ 13 ವರ್ಷಗಳ ಹಳೆಯ ಟ್ವೀಟ್ ವೈರಲ್

Pohto Credit: BCCI
ಹೊಸದಿಲ್ಲಿ, ಅ.5: ಆಸ್ಟ್ರೇಲಿಯ ತಂಡದ ವಿರುದ್ಧ ಅ.19ರಿಂದ ಆರಂಭವಾಗಲಿರುವ 3 ಪಂದ್ಯಗಳ ಏಕದಿನ ಸರಣಿಗೆ ರೋಹಿತ್ ಶರ್ಮಾ ಬದಲಿಗೆ ಶುಭಮನ್ ಗಿಲ್ ಅವರು ಭಾರತದ ನೂತನ ಏಕದಿನ ಕ್ರಿಕೆಟ್ ನಾಯಕನಾಗಿ ಶನಿವಾರ ನೇಮಕಗೊಂಡಿದ್ದಾರೆ.
26ರ ವಯಸ್ಸಿನ ಗಿಲ್ ಈ ವರ್ಷಾರಂಭದಲ್ಲಿ ಭಾರತದ ಟೆಸ್ಟ್ ನಾಯಕನಾಗಿ ಆಯ್ಕೆಯಾಗಿದ್ದು, ಇದೀಗ ಟೆಸ್ಟ್ ಹಾಗೂ ಏಕದಿನ ತಂಡದ ನಾಯಕನಾಗಿದ್ದಾರೆ. ಸೂರ್ಯಕುಮಾರ್ ನಾಯಕತ್ವದ ಟಿ-20 ಕ್ರಿಕೆಟ್ನಲ್ಲಿ ಗಿಲ್ ಉಪ ನಾಯಕನಾಗಿದ್ದಾರೆ. 3 ಪ್ರಕಾರದ ಕ್ರಿಕೆಟ್ನಲ್ಲಿ ವಿವಿಧ ನಾಯಕರನ್ನು ಮುಂದುವರಿಸುವುದು ಪ್ರಾಯೋಗಿಕವಾಗಿ ಅಸಾಧ್ಯ ಎಂದು ಬಿಸಿಸಿಐ ಆಯ್ಕೆ ಸಮಿತಿಯ ಮುಖ್ಯಸ್ಥ ಅಜಿತ್ ಅಗರ್ಕರ್ ಹೇಳಿದ್ದಾರೆ.
ಗಿಲ್ ಏಕದಿನ ತಂಡದ ನಾಯಕನಾಗಿ ಭಡ್ತಿ ಪಡೆದ ಬೆನ್ನಿಗೇ ರೋಹಿತ್ ಶರ್ಮಾರ ಹಳೆಯ ಸಾಮಾಜಿಕ ಮಾಧ್ಯಮ ಪೋಸ್ಟ್ವೊಂದು ಎಲ್ಲರ ಗಮನ ಸೆಳೆದಿದೆ. ಮಾಜಿ ನಾಯಕ ರೋಹಿತ್ 13 ವರ್ಷಗಳ ಹಿಂದೆ ಟ್ವೀಟ್ವೊಂದರಲ್ಲಿ ‘‘ಒಂದು ಯುಗದ ಅಂತ್ಯ(45) ಹಾಗೂ ಹೊಸ ಯುಗದ ಆರಂಭ(77)’’ ಎಂದು ಬರೆದಿದ್ದರು. ಈ ಸಂಖ್ಯೆಗಳು ಜೆರ್ಸಿಯ ಸಂಖ್ಯೆಯನ್ನು ಉಲ್ಲೇಖಿಸುತ್ತಿದೆ. ರೋಹಿತ್ 45 ಸಂಖ್ಯೆಯ ಜೆರ್ಸಿ ಧರಿಸಿದರೆ, ಗಿಲ್ 77 ಸಂಖ್ಯೆ ಜೆರ್ಸಿ ಧರಿಸುತ್ತಾರೆ.
ಗಿಲ್ ಏಕದಿನ ತಂಡದ ನಾಯಕನಾಗಿ ನೇಮಕಗೊಂಡಿದ್ದರೆ, ಶ್ರೇಯಸ್ ಅಯ್ಯರ್ ಉಪ ನಾಯಕನಾಗಿದ್ದಾರೆ. ವಿಕೆಟ್ಕೀಪಿಂಗ್ ಕೆಲಸ ಕೆ.ಎಲ್.ರಾಹುಲ್ ಹಾಗೂ ಧ್ರುವ ಜುರೆಲ್ಗೆ ಹಂಚಲಾಗಿದೆ. ರಿಷಭ್ಪಂತ್ ಹಾಗೂ ಸಂಜು ಸ್ಯಾಮ್ಸನ್ ಏಕದಿನ ತಂಡದಲ್ಲಿ ಸ್ಥಾನ ಪಡೆದಿಲ್ಲ.
ಮಾರ್ಚ್ನಲ್ಲಿ ನಡೆದಿದ್ದ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಪ್ರಶಸ್ತಿ ಜಯಿಸುವಲ್ಲಿ ರೋಹಿತ್ ನಾಯಕತ್ವ ವಹಿಸಿದ್ದರು. 38ರ ವಯಸ್ಸಿನ ರೋಹಿತ್ ಆಸ್ಟ್ರೇಲಿಯ ಪ್ರವಾಸಕ್ಕೆ ಪ್ರಕಟಿಸಲಾದ ಏಕದಿನ ತಂಡದಲ್ಲಿ ವಿರಾಟ್ ಕೊಹ್ಲಿ ಜೊತೆಗೆ ಸ್ಪೆಷಲಿಸ್ಟ್ ಬ್ಯಾಟರ್ ಆಗಿ ಉಳಿದುಕೊಂಡಿದ್ದಾರೆ.
ರೋಹಿತ್ ಅವರು ಹೊಸ ನಾಯಕ ಗಿಲ್ ಜೊತೆ ಇನಿಂಗ್ಸ್ ಆರಂಭಿಸಲಿದ್ದು, ಯಶಸ್ವಿ ಜೈಸ್ವಾಲ್ ಹೆಚ್ಚುವರಿ ಆರಂಭಿಕ ಆಟಗಾರನಾಗಿದ್ದಾರೆ. ಆಯ್ಕೆ ಸಮಿತಿಯು ಬೌಲಿಂಗ್ ವಿಭಾಗದಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡಿದೆ.
ಆಸ್ಟ್ರೇಲಿಯ ವಿರುದ್ಧ ಏಕದಿನ ಸರಣಿಯು ನಾಯಕನಾಗಿ ಗಿಲ್ ಅವರ ಮೊದಲ ಸವಾಲಾಗಿದೆ. ಗಿಲ್ ಅವರು ಅನುಭವಿ ಆಟಗಾರರು ಹಾಗೂ ಹೊಸ ಪ್ರತಿಭೆಗಳ ಮಿಶ್ರಣವಿರುವ ತಂಡವನ್ನು ನಾಯಕನಾಗಿ ಮುನ್ನಡೆಸಲಿದ್ದಾರೆ.







