ರೋಹಿತ್ ಶರ್ಮಾ ಉತ್ತರಾಧಿಕಾರಿಯಾಗಿ ಶುಭಮನ್ ಗಿಲ್?

ರೋಹಿತ್ ಶರ್ಮಾ , ಶುಭಮನ್ ಗಿಲ್ | PC : PTI
ಮುಂಬೈ: ಭಾರತ ಕ್ರಿಕೆಟ್ ತಂಡದ ನೂತನ ಟೆಸ್ಟ್ ನಾಯಕನ ಸ್ಪರ್ಧೆಯಲ್ಲಿ ಶುಭಮನ್ ಗಿಲ್ ಮುಂಚೂಣಿಯಲ್ಲಿದ್ದು, ರೋಹಿತ್ ಶರ್ಮಾರ ಉತ್ತರಾಧಿಕಾರಿಯಾಗಿ ಆಯ್ಕೆಯಾಗುವ ಸಾಧ್ಯತೆಯಿದೆ.
ಪಂಜಾಬ್ನ 25ರ ವಯಸ್ಸಿನ ಬ್ಯಾಟರ್ ಗಿಲ್ ಐಪಿಎಲ್ ಟೂರ್ನಿಯಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ನಾಯಕನಾಗಿ ಮುನ್ನಡೆಸುತ್ತಿದ್ದಾರೆ. ಮುಂಬರುವ ಇಂಗ್ಲೆಂಡ್ ವಿರುದ್ಧದ ಅದರದೆ ನೆಲದಲ್ಲಿ ನಡೆಯುವ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ರಾಷ್ಟ್ರೀಯ ಆಯ್ಕೆದಾರರು ಟೀಮ್ ಇಂಡಿಯಾವನ್ನು ಪ್ರಕಟಿಸುವಾಗ ಗಿಲ್ರನ್ನು ನಾಯಕರನ್ನಾಗಿ ನೇಮಿಸುವ ಸಾಧ್ಯತೆ ಅಧಿಕವಿದೆ ಎಂದು ಆಂಗ್ಲಪತ್ರಿಕೆ ವರದಿ ಮಾಡಿದೆ.
ಮೇ 7ರಂದು ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್ನಿಂದ ದಿಢೀರನೆ ನಿವೃತ್ತಿಯಾದ ನಂತರ ಚಾಂಪಿಯನ್ಸ್ ಟ್ರೋಫಿ ಗೆಲುವಿನ ಅಭಿಯಾನದಲ್ಲಿ ಉಪ ನಾಯಕನಾಗಿದ್ದ ಗಿಲ್ ಅವರ ಹೆಸರು ಟೆಸ್ಟ್ ನಾಯಕನ ಸ್ಥಾನ ಮುಂಚೂಣಿಯಲ್ಲಿತ್ತು.
ಇತ್ತೀಚೆಗಿನ ಕೆಲವು ಬೆಳವಣಿಗೆಗಳು ಭಾರತೀಯ ಕ್ರಿಕೆಟ್ನಲ್ಲಿ ಗಿಲ್ ನಾಯಕತ್ವದ ಯುಗ ಆರಂಭವಾಗುವ ಬಲವಾದ ಸೂಚನೆ ಲಭಿಸಿವೆೆ. ಈ ವರ್ಷದ ಐಪಿಎಲ್ನಲ್ಲಿ ಗುಜರಾತ್ ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಪಂದ್ಯವನ್ನಾಡಲು ಹೊಸದಿಲ್ಲಿಗೆ ತೆರಳಿದ್ದಾಗ ಗಿಲ್ ಅವರು ಊಟದ ನೆಪದಲ್ಲಿ ಭಾರತದ ಮುಖ್ಯ ಕೋಚ್ ಗೌತಮ್ ಗಂಭೀರ್ರನ್ನು ಅವರ ಮನೆಯಲ್ಲಿ ಭೇಟಿಯಾಗಿದ್ದರು. ಈ ಇಬ್ಬರೂ 4ರಿಂದ 5 ಗಂಟೆ ಮಾತುಕತೆ ನಡೆಸಿದ್ದಾರೆಂದು ವರದಿಯಾಗಿದೆ.
ಮೇ 6ರಂದು ಮುಂಬೈನ ವಾಂಖೆಡೆ ಸ್ಟೇಡಿಯಮ್ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧದ ಗುಜರಾತ್ ಪಂದ್ಯದ ನಂತರ ಗಿಲ್ ಅವರು ಭಾರತದ ಆಯ್ಕೆ ಸಮಿತಿಯ ಅಧ್ಯಕ್ಷ ಅಜಿತ್ ಅಗರ್ಕರ್ರನ್ನು ಭೇಟಿಯಾಗಿ ಚರ್ಚಿಸಿದ್ದರು.
ಆಯ್ಕೆ ಸಮಿತಿಯು ದೀರ್ಘಾವಧಿಗೆ ನಾಯಕನನ್ನು ನೇಮಿಸಲು ಯೋಜಿಸುತ್ತಿದ್ದು, ಗಿಲ್ ಅವರನ್ನು ಸೂಕ್ತ ಅಭ್ಯರ್ಥಿಯಾಗಿ ನೋಡಲಾಗುತ್ತಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಈ ವರ್ಷದ ಐಪಿಎಲ್ನಲ್ಲಿ ಗುಜರಾತ್ ತಂಡವನ್ನು ದಕ್ಷವಾಗಿ ಮುನ್ನೆಡೆಸಿರುವ ಗಿಲ್ ತನ್ನ ನಾಯಕತ್ವದ ಗುಣವನ್ನು ಪ್ರದರ್ಶಿಸಿದ್ದರು. ಸದ್ಯ ಅಂಕಪಟ್ಟಿಯಲ್ಲಿ ಗುಜರಾತ್ ತಂಡ ಮೊದಲ ಸ್ಥಾನದಲ್ಲಿದೆ. ನೂತನ ಟೆಸ್ಟ್ ಚಾಂಪಿಯನ್ಶಿಪ್ ವೃತ್ತ(2025-27)ದಲ್ಲಿ ಆಯ್ಕೆದಾರರು ಯುವ ತಂಡವನ್ನು ಕಟ್ಟಲು ಬಯಸಿದ್ದಾರೆ.
ಈ ಕಾರಣದಿಂದಲೇ 2025ರ ಚಾಂಪಿಯನ್ಸ್ ಟ್ರೋಫಿಗೆ ಗಿಲ್ರನ್ನು ಉಪ ನಾಯಕರನ್ನಾಗಿ ನೇಮಿಸಲಾಗಿತ್ತು. ಗಿಲ್ ಟೆಸ್ಟ್ ಕ್ರಿಕೆಟ್ನಲ್ಲಿ ಆರಂಭಿಕ ಹಾಗೂ 3ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುತ್ತಿದ್ದಾರೆ.
32 ಟೆಸ್ಟ್ ಪಂದ್ಯಗಳಲ್ಲಿ 35.05ರ ಸರಾಸರಿಯಲ್ಲಿ 5 ಶತಕ ಹಾಗೂ 7 ಅರ್ಧಶತಕಗಳ ಸಹಿತ 1,893 ರನ್ ಗಳಿಸಿದ್ದಾರೆ.
ಈ ಹಿಂದೆ ಟೆಸ್ಟ್ ಕ್ರಿಕೆಟ್ನಲ್ಲಿ ಭಾರತದ ನಾಯಕತ್ವವಹಿಸಿದ್ದ ಜಸ್ಪ್ರಿತ್ ಬುಮ್ರಾ ಕೆಲಸದ ಒತ್ತಡದ ಕಾರಣಕ್ಕೆ ನಾಯಕನ ಸ್ಥಾನ ನೀಡುವ ಸಾಧ್ಯತೆ ಇಲ್ಲ ಎನ್ನಲಾಗಿದೆ.







