ಈ ಆಟಗಾರರನ್ನು ತಂಡಕ್ಕೆ ಸೇರಿಸಿಕೊಂಡಿದ್ದೇಕೆ?: ಗಂಭೀರ್, ಗಿಲ್ಗೆ ಮಾಜಿ ಕ್ರಿಕೆಟಿಗ ತರಾಟೆ

ಗೌತಮ್ ಗಂಭೀರ್ ಮತ್ತು ಶುಭ್ಮನ್ ಗಿಲ್ (PTI)
ಮುಂಬೈ: ಇಂಗ್ಲೆಂಡ್ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಆಲ್ರೌಂಡರ್ ಶಾರ್ದೂಲ್ ಠಾಕೂರ್ ಅವರನ್ನು ತಂಡಕ್ಕೆ ಸೇರಿಸಿಕೊಂಡ ಬಗ್ಗೆ ಮತ್ತು ಅವರನ್ನು ಬಳಸಿಕೊಂಡ ರೀತಿಯ ಬಗ್ಗೆ ಮಾಜಿ ಕ್ರಿಕೆಟಿಗರು ಕೋಚ್ ಗೌತಮ್ ಗಂಭೀರ್ ಮತ್ತು ನಾಯಕ ಶುಭ್ಮನ್ ಗಿಲ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
"ಆಲ್ರೌಂಡರ್ ನೆಲೆಯಲ್ಲಿ ಸ್ಥಾನ ಪಡೆದುಕೊಂಡ ಠಾಕೂರ್ ಬ್ಯಾಟಿಂಗ್ನಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಬೌಲಿಂಗ್ನಲ್ಲಿ ಕೂಡ 6 ಓವರ್ ಗಳಲ್ಲಿ 38 ರನ್ ನೀಡಿ ಯಾವುದೇ ವಿಕೆಟ್ ಗಳಿಸಿಲ್ಲ. ಅವರ ಬೌಲಿಂಗ್ನಲ್ಲಿ ವಿಶ್ವಾಸವಿಲ್ಲ ಎಂದಾದಲ್ಲಿ ತಂಡದ ವ್ಯವಸ್ಥಾಪಕರು ಅವರನ್ನು ಸೇರಿಸಿಕೊಳ್ಳುವುದರಲ್ಲಿ ಯಾವುದೇ ಅರ್ಥವಿಲ್ಲ" ಎಂದು ಮಾಜಿ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಹೇಳಿದ್ದಾರೆ.
"ನಿಜಕ್ಕೂ ಇದು ಗಂಭೀರ ವಿಚಾರ; ಒಬ್ಬ ಬೌಲರ್ ಮೇಲೆ ನಿಮಗೆ ವಿಶ್ವಾಸವಿಲ್ಲ ಎಂದ ಮೇಲೆ ಆತನನ್ನು ಆಡಿಸುವುದರಲ್ಲಿ ಏನು ಅರ್ಥವಿದೆ? ನಾಲ್ಕು ಮಂದಿ ಬೌಲರ್ಗಳೊಂದಿಗೆ ಕಣಕ್ಕೆ ಇಳಿದಾಗ, ಎಲ್ಲರಿಗೂ ಸಮಾನ ಅವಕಾಶ ನೀಡಬೇಕು" ಎಂದು cricbuzz.com ಜತೆ ಮಾತನಾಡಿದ ಅವರು ಅಭಿಪ್ರಾಯಪಟ್ಟಿದ್ದಾರೆ.
ಭಾರತ ತಂಡದ ಮಾಜಿ ಬ್ಯಾಟ್ಸ್ ಮನ್ ಆಕಾಶ್ ಚೋಪ್ರಾ ಕೂಡಾ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶಾರ್ದೂಲ್ ಅವರನ್ನು ತಂಡಕ್ಕೆ ಸೇರಿಸಿಕೊಂಡರೂ ಅವರ ಮೇಲೆ ತಂಡಕ್ಕೆ ವಿಶ್ವಾಸವಿಲ್ಲ ಎಂದು ಯೂಟ್ಯೂಬ್ನಲ್ಲಿ ವಿಶ್ಲೇಷಿಸಿದ್ದಾರೆ.
ಹೆಡಿಂಗ್ಲೆ ಟೆಸ್ಟ್ ನ ಮೊದಲ ಇನಿಂಗ್ಸ್ ನಲ್ಲಿ ಠಾಕೂರ್ ಒಂದು ಹಾಗೂ ಎರಡನೇ ಇನಿಂಗ್ಸ್ ನಲ್ಲಿ ನಾಲ್ಕು ರನ್ ಗಳಿಸಿದ್ದರು.







