ಶುಭಮನ್ ಗಿಲ್, ಇಶಾನ್ ಕಿಶನ್ ಭರ್ಜರಿ ಶತಕ : ಅಫ್ಘಾನಿಸ್ತಾನ ವಿರುದ್ಧ ಭಾರತಕ್ಕೆ ಭರ್ಜರಿ ಜಯ

ಇಶಾನ್ ಕಿಶನ್ , ಶುಭಮನ್ ಗಿಲ್ | Photo Credit : PTI
ಲಕ್ನೊ, ಜೂ.17: ನಾಯಕ ಶುಭಮನ್ ಗಿಲ್(154 ರನ್, 110 ಎಸೆತ, 22 ಬೌಂಡರಿ, 2 ಸಿಕ್ಸರ್)ಹಾಗೂ ವಿಕೆಟ್ಕೀಪರ್ ಇಶಾನ್ ಕಿಶನ್(125 ರನ್, 79 ಎಸೆತ, 14 ಬೌಂಡರಿ, 7 ಸಿಕ್ಸರ್)ಭರ್ಜರಿ ಶತಕ, ಅರ್ಷದೀಪ್ ಸಿಂಗ್(3-45)ಹಾಗೂ ಗುರ್ನೂರ್ ಬ್ರಾರ್(3-60) ಅಮೋಘ ಬೌಲಿಂಗ್ ನೆರವಿನಿಂದ ಟೀಮ್ ಇಂಡಿಯಾ ಎರಡನೇ ಏಕದಿನ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡವನ್ನು 170 ರನ್ಗಳ ಅಂತರದಿಂದ ಮಣಿಸಿದೆ.
ಎಬಿ ವಾಜಪೇಯಿ ಸ್ಟೇಡಿಯಂನಲ್ಲಿ ಬುಧವಾರ ಟಾಸ್ ಜಯಿಸಿದ ಅಫ್ಘಾನ್ ತಂಡವು ಭಾರತ ತಂಡವನ್ನು ಬ್ಯಾಟಿಂಗ್ಗೆ ಇಳಿಸಿತು. ಭಾರತ ತಂಡವು 402 ರನ್ ಗಳಿಸಿತು. ಗೆಲ್ಲಲು ಕಠಿಣ ಗುರಿ ಬೆನ್ನಟ್ಟಿದ ಅಫ್ಘಾನ್ ತಂಡವು 44.3 ಓವರ್ಗಳಲ್ಲಿ 232 ರನ್ ಗಳಿಸಿ ಆಲೌಟಾಯಿತು.
ಅಫ್ಘಾನ್ ಪರ ರಹಮತ್ ಶಾ(79 ರನ್, 89 ಎಸೆತ, 8 ಬೌಂಡರಿ)ಸರ್ವಾಧಿಕ ಸ್ಕೋರ್ ಗಳಿಸಿದರು. ರಹಮಾನುಲ್ಲಾ ಗುರ್ಬಾಝ್(41 ರನ್), ಸೆದಿಕುಲ್ಲಾ ಅಟಲ್(42 ರನ್)ಎರಡಂಕೆಯ ಸ್ಕೋರ್ ಗಳಿಸಿದರು. ಅರ್ಷದೀಪ್ ಹಾಗೂ ಬ್ರಾರ್ ತಲಾ ಮೂರು ವಿಕೆಟ್ ಪಡೆದರೆ, ಪ್ರಿನ್ಸ್ ಯಾದವ್(2-56)ಎರಡು ವಿಕೆಟ್ ಪಡೆದರು.
ಯಶಸ್ವಿ ಜೈಸ್ವಾಲ್ರನ್ನು ಅಲ್ಪ ಮೊತ್ತಕ್ಕೆ(4)ಕಳೆದುಕೊಂಡು ಕಳಪೆ ಆರಂಭ ಪಡೆದ ಭಾರತ ತಂಡಕ್ಕೆ ರೋಹಿತ್ ಶರ್ಮಾ(48 ರನ್, 39 ಎಸೆತ)ಹಾಗೂ ಗಿಲ್ ಆಸರೆಯಾದರು. ಈ ಜೋಡಿ ಎರಡನೇ ವಿಕೆಟ್ಗೆ 87 ರನ್ ಜೊತೆಯಾಟ ನಡೆಸಿತು.
ರೋಹಿತ್ ಔಟಾದ ನಂತರ ಗಿಲ್ ಜೊತೆ ಕೈಜೋಡಿಸಿದ ಕಿಶನ್ ಮೂರನೇ ವಿಕೆಟ್ಗೆ 224 ರನ್ ಸೇರಿಸಿ ತಂಡವನ್ನು ಬೃಹತ್ ಮೊತ್ತದತ್ತ ಮುನ್ನಡೆಸಿದರು. ಈ ಇಬ್ಬರು ಔಟಾದ ನಂತರ ಕುಸಿತದ ಹಾದಿ ಹಿಡಿದ ಭಾರತ ತಂಡವು 49.5 ಓವರ್ಗಳಲ್ಲಿ 402 ರನ್ ಗಳಿಸಿ ಆಲೌಟಾಯಿತು.
ಅಫ್ಘಾನ್ ಪರ ಎನ್.ಖರೋಟೆ(4-76)ಹಾಗೂ ರಶೀದ್ ಖಾನ್(3-48)ಏಳು ವಿಕೆಟ್ಗಳನ್ನು ಹಂಚಿಕೊಂಡರು.






