ಕತ್ತು ನೋವು : ಸ್ಟ್ರೆಚರ್ ಮೂಲಕ ಆ್ಯಂಬುಲೆನ್ಸ್ ನಲ್ಲಿ ತೆರಳಿದ ಗಿಲ್

PC | ndt
ಕೊಲ್ಕತ್ತಾ: ಶನಿವಾರ ಸಂಜೆ ಮೈದಾನದಲ್ಲಿ ತೀವ್ರ ಕುತ್ತಿಗೆ ನೋವಿನಿಂದ ಬಳಲಿದ ಶುಭಮನ್ ಗಿಲ್ ಅವರನ್ನು ಸ್ಟ್ರೆಚರ್ ಮೂಲಕ ಆ್ಯಂಬುಲೆನ್ಸ್ ನಲ್ಲಿ ಕರೆದೊಯ್ದ ಹಿನ್ನೆಲೆಯಲ್ಲಿ ಈಡನ್ ಗಾರ್ಡನ್ಸ್ ನಲ್ಲಿ ನಡೆಯುತ್ತಿರುವ ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದ ಉಳಿಕೆ ಅವಧಿಯಲ್ಲಿ ಭಾರತ ತಂಡದ ನಾಯಕ ಆಡುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.
ಇದಕ್ಕೂ ಮುನ್ನ ಗಿಲ್ ನಾಲ್ಕು ಮಂದಿಯ ಸಹಾಯದಿಂದ ಮೈದಾನದಿಂದ ಹೊರ ನಡೆದಿದ್ದರು. ಸೈಮನ್ ಹರ್ಮರ್ ಅವರ ಎಸೆತವನ್ನು ಬೌಂಡರಿಗೆ ಅಟ್ಟುವ ಸಂದರ್ಭದಲ್ಲಿ ಗಿಲ್ ಅವರಿಗೆ ತೀವ್ರ ಕತ್ತಿನ ನೋವು ಕಾಣಿಸಿಕೊಂಡಿತ್ತು. ತಕ್ಷಣವೇ ತಂಡದ ವೈದ್ಯರು ಧಾವಿಸಿದರು. ಕೇವಲ ಮೂರು ಎಸೆತಗಳಲ್ಲಿ ನಾಲ್ಕು ರನ್ಗಳಾಗಿದ್ದಾಗ ಗಾಯಗೊಂಡು ನಿವೃತ್ತಿಯಾದರು. ಭಾರತ ತಂಡದ ನಾಯಕನನ್ನು ವುಡ್ಲ್ಯಾಂಡ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಶನಿವಾರ ರಾತ್ರಿ ವೈದ್ಯರು ನಿಗಾ ವಹಿಸಿದ್ದಾರೆ.
ಗಿಲ್ ಅವರನ್ನು ಕೊರಳುಪಟ್ಟಿ ಹಾಕಿ ಆಸ್ಪತ್ರೆಗೆ ಕರೆದೊಯ್ದಿರುವುದನ್ನು ನೋಡಿದರೆ, ಅವರ ಗಾಯದ ತೀವ್ರತೆ ಬಗ್ಗೆ ಮತ್ತಷ್ಟು ಆತಂಕ ವ್ಯಕ್ತವಾಗಿದೆ. ದಕ್ಷಿಣ ಆಫ್ರಿಕಾದ ಸಹಾಯಕ ಕೋಚ್ ಮೋರ್ನ್ ಮೊರ್ಕೇಲ್ ಅವರು ರಾತ್ರಿಯ ನಿದ್ದೆ ಸರಿಯಾಗದೇ ಇರುವುದು ಇದಕ್ಕೆ ಕಾರಣ ಎಂದು ಹೇಳಿದ್ದಾರೆ.
"ಅವರಿಗೆ ಹೇಗೆ ಕುತ್ತಿಗೆಯ ಸೆಳೆತ ಕಾಣಿಸಿಕೊಂಡಿತು ಎಂದು ಮೊದಲು ನಿರ್ಧರಿಸಬೇಕಾಗಿದೆ. ರಾತ್ರಿ ಸರಿಯಾಗಿ ನಿದ್ದೆಯಾಗದಿರುವುದು ಬಹುಶಃ ಕಾರಣವಿರಬಹುದು. ಕಾರ್ಯಭಾರದ ಒತ್ತಡದಿಂದ ಎಂದು ನನಗೆ ಅನಿಸುವುದಿಲ್ಲ" ಎಂದು ಅಭಿಪ್ರಾಯಪಟ್ಟಿದ್ದಾರೆ.







