ಡೋಪಿಂಗ್ ನಿಷೇಧದಿಂದ ಪಾರಾದ ಸಿನ್ನರ್: ಇದು ದ್ವಿಮುಖ ನೀತಿ ಎಂದು ಟೀಕಿಸಿದ ವೃತ್ತಿಪರ ಟೆನಿಸ್ಪಟುಗಳು

ಜನ್ನಿಕ್ ಸಿನ್ನರ್ | PC : PTI
ಲಂಡನ್: ಈ ವರ್ಷದ ಆರಂಭದಲ್ಲಿ ಎರಡು ಬಾರಿ ಉದ್ದೀಪನ ಮದ್ದು ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದ ವಿಶ್ವದ ನಂ.1 ಆಟಗಾರ ಜನ್ನಿಕ್ ಸಿನ್ನರ್ ಗೆ ಅಂತರ್ರಾಷ್ಟ್ರೀಯ ಟೆನಿಸ್ ಸಮಗ್ರತೆ ಏಜೆನ್ಸಿ(ಐಟಿಐಎ)ಕ್ಲೀನ್ಚಿಟ್ ನೀಡಿರುವುದನ್ನು ದ್ವಿಮುಖ ನೀತಿ ಎಂದು ಡೆನಿಸ್ ಶಪೋವಾಲೋವಾ ಸಹಿತ ಹಲವಾರು ವೃತ್ತಿಪರ ಟೆನಿಸ್ ಪಟುಗಳು ಟೀಕಿಸಿದ್ದಾರೆ.
ಸಿನ್ನರ್ ಅವರು ಪಂದ್ಯಾವಳಿಗಳಲ್ಲಿ ಭಾಗವಹಿಸುವುದನ್ನು ಮುಂದುವರಿಸಲು ಮುಕ್ತರಾಗಿದ್ದಾರೆ ಎಂದು ಸ್ವತಂತ್ರ ಟ್ರಿಬ್ಯೂನಲ್ ಅಭಿಪ್ರಾಯಿಸಿದೆ ಎಂದು ಮಂಗಳವಾರ ಐಟಿಐಎ ಪ್ರಕಟಿಸಿದೆ.
ಟೆನಿಸ್ ಜಗತ್ತಿನಲ್ಲಿ ಇಟಲಿ ಆಟಗಾರ ಸಿನ್ನರ್ ಸ್ಥಾನಮಾನವನ್ನು ನೋಡಿ ಅವರ ಪರವಾದ ತೀರ್ಪು ನೀಡಲಾಗಿದೆ ಎಂದು ಮಾಜಿ ಟಾಪ್-10 ಆಟಗಾರ್ತಿ ಶಪೋವಾಲೋವಾ ಹೇಳಿದ್ದಾರೆ.
ಡೋಪಿಂಗ್ ಪರೀಕ್ಷೆಯಲ್ಲಿ ಸಿಕ್ಕಿಬಿದ್ದು ನಿಷೇಧಕ್ಕೊಳಗಾಗಿರುವ ಇತರ ಆಟಗಾರರು ಈಗ ಏನನ್ನು ಅನುಭವಿಸುತ್ತಿದ್ದಾರೆ ಎಂದು ಊಹಿಸಲು ಸಾಧ್ಯವಿಲ್ಲ. ಒಂದೊಂದು ಆಟಗಾರರಿಗೆ ಒಂದೊಂದು ನಿಯಮಗಳು ಎಂದು ಕೆನಡಾ ಆಟಗಾರ್ತಿ ಸಾಮಾಜಿಕ ಮಾಧ್ಯಮದಲ್ಲಿ ಬರೆದಿದ್ದಾರೆ.
ಮಾರ್ಚ್ನಲ್ಲಿ ಇಂಡಿಯನ್ ವೆಲ್ಸ್ ಪಂದ್ಯಾವಳಿಯ ವೇಳೆ ಡೋಪಿಂಗ್ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದ ಸಿನ್ನರ್ ಕಠಿಣ ಪರಿಸ್ಥಿತಿಯನ್ನು ಎದುರಿಸಿದ್ದರು. ನಿಷೇಧಿತ ದ್ರವ್ಯವು ಅವರ ದೇಹದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಪತ್ತೆಯಾಗಿತ್ತು. ಸ್ವಲ್ಪ ದಿನಗಳ ನಂತರ ನಡೆದಿರುವ ಪರೀಕ್ಷೆಯಲ್ಲೂ ನಿಷೇಧಿತ ದ್ರವ್ಯ ಪತ್ತೆಯಾಗಿತ್ತು. ಇದರ ಹೊರತಾಗಿಯೂ 23ರ ಹರೆಯದ ಸಿನ್ನರ್ ಸ್ವಯಂ ಆಗಿ ಅನ್ವಯವಾಗುವ ತಾತ್ಕಾಲಿಕ ಅಮಾನತನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದರು.
ಇದೀಗ ತನ್ನ ಮೇಲ್ಮನವಿಗೆ ಸಕಾರಾತ್ಮಕ ಫಲಿತಾಂಶ ಪಡೆದಿರುವ ಸಿನ್ನರ್ ಮುಂಬರುವ ಆಗಸ್ಟ್ 26ರಿಂದ ಸೆಪ್ಟಂಬರ್ 8ರ ತನಕ ನಡೆಯಲಿರುವ ಅಮೆರಿಕನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಆಡಲು ಅರ್ಹರಾಗಿದ್ದಾರೆ.
ಸಿನ್ನರ್ ಅವರು ಇಂಡಿಯನ್ ವೆಲ್ಸ್ ಟೂರ್ನಿಯಲ್ಲಿ ಸೆಮಿ ಫೈನಲ್ ಹಂತದಲ್ಲಿ ಸೋತಿದ್ದರು.
ಹಲವಾರು ಆಟಗಾರರು ಡೋಪಿಂಗ್ ಪರೀಕ್ಷೆಯಲ್ಲಿ ವಿಫಲರಾದ ನಂತರ ತಾವು ಮುಗ್ದರೆಂದು ಸಾಬೀತುಪಡಿಸಲು ತಿಂಗಳುಗಳು ಹಾಗೂ ವರ್ಷಗಳೇ ಕಾಯಬೇಕಾಗುತ್ತದೆ. ಹೀಗಾಗಿ ಸಿನ್ನರ್ ವಿಚಾರದಲ್ಲಿ ಈ ರೀತಿಯಾಗಿದ್ದು ಸರಿಯಲ್ಲ ಎಂದು ಇಂಗ್ಲೆಂಡ್ ಆಟಗಾರ ಲಿಯಾಮ್ ಬ್ರಾಡಿ ಸಾಮಾಜಿಕ ಮಾಧ್ಯಮ ಪೋಸ್ಟ್ನಲ್ಲಿ ಬರೆದಿದ್ದಾರೆ.
2021ರಲ್ಲಿ ಟೆನಿಸ್ ಆಡಳಿತ ಮಂಡಳಿಗಳು ಸ್ಥಾಪಿಸಿದ್ದ ಅಂತರ್ರಾಷ್ಟ್ರೀಯ ಟೆನಿಸ್ ಸಮಗ್ರತೆ ಏಜೆನ್ಸಿ(ಐಟಿಟಿಎ) ತಾತ್ಕಾಲಿಕ ಅಮಾನತು ತೆಗೆದುಹಾಕುವಂತೆ ಸಿನ್ನರ್ ಸಲ್ಲಿಸಿದ್ದ ಮನವಿಯನ್ನು ಸ್ವೀಕರಿಸಿತ್ತು.
ಐಟಿಟಿಎ ನಿರ್ಧಾರಕ್ಕೆ ಅಸಮ್ಮತಿ ವ್ಯಕ್ತಪಡಿಸಿದ ನಿಕ್ ಕಿರ್ಗಿಯೊಸ್, ಇದೊಂದು ಹಾಸ್ಯಾಸ್ಪದ, ಆಕಸ್ಮಿಕ ಅಥವಾ ಯೋಜಿತವಾಗಿದೆ. ಎರಡು ಬಾರಿಯ ಪರೀಕ್ಷೆಯಲ್ಲಿ ನಿಷೇಧಿತ ದ್ರವ್ಯಪತ್ತೆಯಾಗಿರುವ ಕಾರಣ ಸಿನ್ನರ್ ಎರಡು ವರ್ಷಗಳ ಕಾಲ ನಿಷೇಧಕ್ಕೆ ಒಳಗಾಗಬೇಕಾಗಿತ್ತು ಎಂದು ಎಕ್ಸ್ನಲ್ಲಿ ಬರೆದಿದ್ದಾರೆ.
ಸಿನ್ನರ್ಗೆ ಹೋಲಿಸಿದರೆ ತನ್ನ ಪ್ರಕರಣವನ್ನು ವಿಭಿನ್ನವಾಗಿ ನಿಭಾಯಿಸಲಾಗಿದೆ ಎನ್ನುವುದನ್ನು ಬೆಟ್ಟು ಮಾಡಿರುವ ಬ್ರಿಟನ್ನ ಮಾಜಿ ಡಬಲ್ಸ್ ಆಟಗಾರ್ತಿ ತಾರಾ ಮೂರ್, ಕೇವಲ ಅಗ್ರ ಆಟಗಾರರ ಘನತೆಯು ಮುಖ್ಯ ವಿಷಯವಾಗುತ್ತದೆ. ಅಗ್ರ ಆಟಗಾರರ ಕುರಿತು ಸ್ವತಂತ್ರ ಟ್ರಿಬ್ಯೂನಲ್ನ ಅಭಿಪ್ರಾಯ ಸದ್ದು ಮಾಡುತ್ತದೆ. ನನ್ನ ಪ್ರಕರಣದಲ್ಲಿ ಅವರನ್ನು ಪ್ರಶ್ನಿಸಬೇಕಾಗಿದೆ ಎಂದರು.
ಮೂರ್ ಡ್ರಗ್ ಟೆಸ್ಟ್ನಲ್ಲಿ ವಿಫಲರಾಗಿದ್ದಕ್ಕೆ ತಾರಾ ಮೂರ್ 19 ತಿಂಗಳು ಅಮಾನತುಗೊಂಡಿದ್ದರು.







