ಸಿರಾಜ್ ಗೆ 2027ರ ವಿಶ್ವಕಪ್ ನಲ್ಲೂ ಸ್ಥಾನ ಸಿಗದಿರಬಹುದು; ಇದು ಕೇವಲ ಟ್ರೈಲರ್ ಅಷ್ಟೇ: ಆರ್. ಅಶ್ವಿನ್
ತಂಡದಿಂದ ಕೈಬಿಡುವ ವಾತಾವರಣವನ್ನು ಒಂದು ತಿಂಗಳಿಂದಲೇ ಸೃಷ್ಟಿಸಲಾಗಿತ್ತು; ಗಂಭೀರ್, ಗಿಲ್ ವಿರುದ್ಧ ಅಸಮಾಧಾನ

ಮುಹಮ್ಮದ್ ಸಿರಾಜ್ , ಆರ್. ಅಶ್ವಿನ್ | Photo Credit : PTI
ವೆಲ್ಲಿಂಗ್ಟನ್: ಮುಹಮ್ಮದ್ ಸಿರಾಜ್ ಅವರನ್ನು ತಂಡದಿಂದ ಕೈಬಿಡುವ ಸೂಚನೆಗಳು ಕಳೆದ ಒಂದು ತಿಂಗಳಿಂದಲೇ ಕಾಣಿಸುತ್ತಿದ್ದವು. ಈಗ ನ್ಯೂಝಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಿಂದ ಹೊರಗಿಟ್ಟಿರುವುದು ಅದರ ಆರಂಭವಷ್ಟೇ. ಮುಂದಿನ ದಿನಗಳಲ್ಲಿ 2027ರ ಏಕದಿನ ವಿಶ್ವಕಪ್ ತಂಡದಿಂದಲೂ ಸಿರಾಜ್ ಹೊರಗುಳಿಯಬಹುದು ಎಂದು ಮಾಜಿ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ ಹೇಳಿದ್ದಾರೆ.
ವೆಲ್ಲಿಂಗ್ಟನ್ ನ ಬೇಸಿನ್ ರಿಸರ್ವ್ ನಲ್ಲಿ ಗುರುವಾರ ಆರಂಭವಾದ ನ್ಯೂಝಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ನಲ್ಲಿ ಸಿರಾಜ್ ಮತ್ತು ರವೀಂದ್ರ ಜಡೇಜಾ ಅವರನ್ನು ಆಡುವ ಹನ್ನೊಂದರ ಬಳಗದಿಂದ ಕೈಬಿಟ್ಟ ಭಾರತದ ನಿರ್ಧಾರಕ್ಕೆ ಅಶ್ವಿನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆಟಗಾರರನ್ನು ನಡೆಸಿಕೊಳ್ಳುವ ರೀತಿಯಲ್ಲಿ ಅನ್ಯಾಯದ ಪ್ರವೃತ್ತಿ ಹೆಚ್ಚಾಗುತ್ತಿದೆ ಎಂದು ಟೀಕಿಸಿರುವ ಅವರು, ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ನಾಯಕ ಶುಭಮನ್ ಗಿಲ್ ವಿರುದ್ಧವೂ ವಾಗ್ದಾಳಿ ನಡೆಸಿದ್ದಾರೆ.
ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಮಾತನಾಡಿದ ಅಶ್ವಿನ್, ಸಿರಾಜ್ ಅವರನ್ನು ತಂಡದಿಂದ ಕೈಬಿಡುವ ವಾತಾವರಣವನ್ನು ಒಂದು ತಿಂಗಳಿಂದಲೇ ಸೃಷ್ಟಿಸಲಾಗಿತ್ತು ಎಂದು ಆರೋಪಿಸಿದ್ದಾರೆ.
"ಸಿರಾಜ್ ರನ್ನು ತಂಡದಿಂದ ಕೈಬಿಡಲು ಒಂದು ವಾರದಿಂದ ವಾತಾವರಣ ಸೃಷ್ಟಿಸಿದ್ದೇಕೆ? ಒಂದು ವಾರವಷ್ಟೇ ಅಲ್ಲ, ಕಳೆದ ಒಂದು ತಿಂಗಳಿಂದಲೇ ಇದಕ್ಕಾಗಿ ಸಿದ್ಧತೆ ನಡೆಸಲಾಗಿತ್ತು. ಮೊದಲು ಅವರನ್ನು ಏಕದಿನ ಪಂದ್ಯಗಳಲ್ಲಿ (ODI) ಆಡಿಸಲಿಲ್ಲ. ಮುಂದೆ ಏಕದಿನ ವಿಶ್ವಕಪ್ ಬರಲಿದೆ. ಆಗ ನಿಮಗೆ ಸಿರಾಜ್ ಅಗತ್ಯವಿಲ್ಲವೇ? 2023ರ ವಿಶ್ವಕಪ್ ನಲ್ಲಿ ಅವರು ಎಷ್ಟು ಪ್ರಬಲವಾಗಿದ್ದರು ಎಂಬುದನ್ನು ಮರೆಯಬಾರದು. ಆಶ್ಚರ್ಯಪಡಬೇಡಿ, ಇದು ಕೇವಲ ಟ್ರೈಲರ್ ಅಷ್ಟೇ. ಮುಂದೆ ಅವರನ್ನು ತಂಡದಿಂದ ಕೈಬಿಡುವುದೂ ನಡೆಯಬಹುದು," ಎಂದು ಅಶ್ವಿನ್ ಹೇಳಿದ್ದಾರೆ.
ಬುಮ್ರಾ ಜತೆ ಸಿರಾಜ್ ಕೂಡ ಸ್ಥಾನ ಪಡೆಯಬೇಕು:
ಜಸ್ಪ್ರೀತ್ ಬುಮ್ರಾ ಅವರಂತೆ ಸಿರಾಜ್ ಕೂಡ ತಂಡದಲ್ಲಿ ಸ್ಥಾನ ಪಡೆಯಬೇಕು. ಇವರಿಬ್ಬರ ಹೆಸರನ್ನು ಮೊದಲು ಆಯ್ಕೆ ಮಾಡಿ, ಉಳಿದ ಇಬ್ಬರು ವೇಗದ ಬೌಲರ್ ಗಳನ್ನು ಹುಡುಕಬೇಕು ಎಂದು ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ.
"ಮೊದಲು ಮುಹಮ್ಮದ್ ಸಿರಾಜ್ ಮತ್ತು ಜಸ್ಪ್ರೀತ್ ಬುಮ್ರಾ ಅವರ ಹೆಸರುಗಳನ್ನು ಬರೆದಿಟ್ಟುಕೊಳ್ಳಿ. ನಂತರ ಉಳಿದ ಇಬ್ಬರು ವೇಗದ ಬೌಲರ್ಗಳನ್ನು ಆಯ್ಕೆ ಮಾಡಿ. ಇಲ್ಲಿ ಸ್ಪರ್ಧೆ ಎಲ್ಲಿದೆ? ನನಗೆ ಅರ್ಥವಾಗುತ್ತಿಲ್ಲ," ಎಂದು ಅವರು ಪ್ರಶ್ನಿಸಿದ್ದಾರೆ.
ಕೆಂಪು ಚೆಂಡಿನ ಮೇಲಿನ ತೇವಾಂಶ ಕಡಿಮೆಯಾಗಿ, ಅದರ ಹೊಲಿಗೆ ಮೃದುವಾದ ಬಳಿಕ ಮಧ್ಯಮ ಓವರ್ ಗಳಲ್ಲಿ ಸಿರಾಜ್ ಅವರಂತಹ ಬೌಲರ್ ನ ಅಗತ್ಯವಿತ್ತು ಎಂದು ಅಶ್ವಿನ್ ಹೇಳಿದ್ದಾರೆ. ರನ್ ಗಳನ್ನು ಬಿಟ್ಟುಕೊಟ್ಟರೂ ನಿರಂತರವಾಗಿ ಬೌಲಿಂಗ್ ಮಾಡುವ ಉತ್ಸಾಹ ಮತ್ತು ಪಂದ್ಯದ ಗತಿಯನ್ನೇ ಬದಲಿಸುವ ಸಾಮರ್ಥ್ಯ ಸಿರಾಜ್ ಗೆ ಇದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ತಂಡದ ಆಯ್ಕೆಯಲ್ಲಿ ನಾಯಕ ಶುಭಮನ್ ಗಿಲ್ ಕೂಡ ಜವಾಬ್ದಾರಿ ಹೊರಬೇಕು. ಹೊಸ ಆಟಗಾರರಿಗೆ ಅವಕಾಶ ನೀಡುವಾಗ ಅನುಭವಿಗಳ ಕೊಡುಗೆಯನ್ನೂ ಪರಿಗಣಿಸಬೇಕು ಎಂದು ಅಶ್ವಿನ್ ಪ್ರತಿಪಾದಿಸಿದ್ದಾರೆ.
"ತಂಡದ ಆಡಳಿತ ಮಂಡಳಿಯ ಬಗ್ಗೆ ನಾವು ಎಷ್ಟೇ ಮಾತನಾಡಿದರೂ, ನಾಯಕ ಕೂಡ ಜವಾಬ್ದಾರಿ ಹೊರಬೇಕಾಗುತ್ತದೆ. ಅಂತಿಮವಾಗಿ ಮೈದಾನದಲ್ಲಿ ಏನಾಗಬೇಕು ಎಂಬುದನ್ನು ನಾಯಕ ನಿರ್ಧರಿಸುತ್ತಾನೆ. ತಂಡದ ಆಯ್ಕೆಯಲ್ಲಿ ಸಮತೋಲನ ಇರಬೇಕು. ಹೊಸ ಆಟಗಾರರು ಬರಬೇಕು ಎಂಬುದು ನನಗೆ ಅರ್ಥವಾಗುತ್ತದೆ. ಆದರೆ ಟೆಸ್ಟ್ ಕ್ರಿಕೆಟ್ ನಲ್ಲಿ ಅನುಭವಕ್ಕೆ ಹೆಚ್ಚಿನ ಮೌಲ್ಯವಿದೆ. ಈ ಹಿಂದೆ ಇಂತಹ ಸನ್ನಿವೇಶಗಳನ್ನು ಎದುರಿಸಿ ಯಶಸ್ವಿಯಾಗಿ ನಿಭಾಯಿಸಿದ ಅನುಭವ ಮುಖ್ಯ. ನಿರಂತರವಾಗಿ ಒಂದೇ ಲೆಂತ್ ನಲ್ಲಿ ಬೌಲಿಂಗ್ ಮಾಡುವ ಸಾಮರ್ಥ್ಯ ಅನುಭವಿ ಬೌಲರ್ ಗೆ ಮಾತ್ರ ಬರುತ್ತದೆ. ಬುಮ್ರಾ ಅವರಿಗೆ ಈ ಪಂದ್ಯದಲ್ಲಿ ಸೂಕ್ತ ಬೆಂಬಲ ಸಿಗಲಿಲ್ಲ," ಎಂದು ಅವರು ಹೇಳಿದ್ದಾರೆ.
ಸಿರಾಜ್ ಮತ್ತು ಜಡೇಜಾ ಇಬ್ಬರೂ ಭಾರತೀಯ ಕ್ರಿಕೆಟ್ ಗೆ ಅಪಾರ ಕೊಡುಗೆ ನೀಡಿದ್ದಾರೆ. ಅವರ ಪ್ರದರ್ಶನ ಕಳಪೆಯಾಗಿದ್ದಾಗ ಮಾತ್ರ ತಂಡದಿಂದ ಕೈಬಿಡಬೇಕಿತ್ತು ಎಂದು ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ. ಸಂಜು ಸ್ಯಾಮ್ಸನ್, ಕುಲದೀಪ್ ಯಾದವ್ ಮತ್ತು ಯಶಸ್ವಿ ಜೈಸ್ವಾಲ್ ಅವರಂತಹ ಆಟಗಾರರಿಗೂ ನ್ಯಾಯಯುತ ಅವಕಾಶಗಳು ಸಿಗುತ್ತಿಲ್ಲ ಎಂದು ಅವರು ಹೇಳಿದ್ದಾರೆ.
"ನಾವು ನಮ್ಮ ಚಾನೆಲ್ನಲ್ಲಿ ಸಂಜು ಸ್ಯಾಮ್ಸನ್, ಕುಲದೀಪ್ ಯಾದವ್ ಮತ್ತು ಯಶಸ್ವಿ ಜೈಸ್ವಾಲ್ ಅವರ ಬಗ್ಗೆ ಆಗಾಗ್ಗೆ ಮಾತನಾಡುತ್ತೇವೆ. ಇಂತಹ ತಪ್ಪುಗಳು ನಡೆದಾಗ ನಾವು ಧ್ವನಿ ಎತ್ತಲೇಬೇಕು. ಇದು ಯಾರ ಹಿನ್ನೆಲೆ ಅಥವಾ ಮೂಲದ ಬಗ್ಗೆ ಅಲ್ಲ. ಇಂದು ನಡೆದ ಘಟನೆ ಸಂಪೂರ್ಣವಾಗಿ ಅಸಮಂಜಸವಾಗಿದೆ," ಎಂದು ಅಶ್ವಿನ್ ಹೇಳಿದ್ದಾರೆ.
ಹಿಂದಿನ ವಿದೇಶಿ ಸರಣಿಯಲ್ಲಿ ರವೀಂದ್ರ ಜಡೇಜಾ 500 ರನ್ ಗಳಿಸಿದ್ದರೂ ಈಗ ತಂಡದಿಂದ ಹೊರಗುಳಿದಿದ್ದಾರೆ. ಬುಮ್ರಾ ಅನುಪಸ್ಥಿತಿಯಲ್ಲಿ ಸಿರಾಜ್ ಇಂಗ್ಲೆಂಡ್ ವಿರುದ್ಧದ ಸರಣಿಯನ್ನು 2-2ರಿಂದ ಸಮಬಲಗೊಳಿಸಲು ನೆರವಾಗಿದ್ದರು. ಪ್ರಸಿದ್ಧ ಕೃಷ್ಣ ಗಾಯದಿಂದ ಚೇತರಿಸಿಕೊಂಡು ಮರಳುತ್ತಿದ್ದರೆ, ಇಂಗ್ಲೆಂಡ್ ನಲ್ಲಿ ಕೇವಲ ಒಂದು ಟೆಸ್ಟ್ ಪಂದ್ಯವನ್ನಾಡಿದ್ದ ಅಂಶುಲ್ ಕಂಬೋಜ್ ಈ ಪಂದ್ಯದಲ್ಲಿ ಆಡುತ್ತಿದ್ದಾರೆ. ಈ ಆಯ್ಕೆಯ ಬಗ್ಗೆ ಅಶ್ವಿನ್ ಪ್ರಶ್ನೆ ಎತ್ತಿದ್ದಾರೆ.
"ಏನೋ ಒಂದು ಪ್ರಮುಖ ವಿಷಯ ನನ್ನ ಗಮನ ತಪ್ಪಿರಬೇಕು. ಬಹುಶಃ ಸಿರಾಜ್ ಅವರ ಬೌಲಿಂಗ್ ವೇಗ ಕಡಿಮೆಯಾಗಿರಬಹುದು ಮತ್ತು ಜಡೇಜಾ ಅವರ ಬಗ್ಗೆ ನಿಮ್ಮದೇ ಅಭಿಪ್ರಾಯಗಳಿರಬಹುದು. ಆದರೆ ಇವರಿಬ್ಬರೂ ಭಾರತೀಯ ಕ್ರಿಕೆಟ್ಗೆ ಅತ್ಯಮೂಲ್ಯ ಕೊಡುಗೆ ನೀಡಿದ್ದಾರೆ. ಅವರಿಗೆ ಟೆಸ್ಟ್ ಪಂದ್ಯವನ್ನಾಡಲು ಅವಕಾಶ ನೀಡಬೇಕು. ಅವರು ವಿಫಲರಾದರೆ ಮಾತ್ರ ತಂಡದಿಂದ ಕೈಬಿಡಬೇಕು. ಅವರಿಗೆ ಆಡಲು ಅವಕಾಶ ನೀಡಿ, ತಮ್ಮದೇ ರೀತಿಯಲ್ಲಿ ಪ್ರದರ್ಶನ ನೀಡಲಿ. ವಿಫಲರಾದರೆ ಅದು ಬೇರೆ ಮಾತು," ಎಂದು ಅವರು ಹೇಳಿದ್ದಾರೆ.
ಆಟಗಾರರನ್ನು ಆಯ್ಕೆ ಮಾಡುವಾಗ ವೈಯಕ್ತಿಕ ಇಷ್ಟ-ಕಷ್ಟಗಳಿಗೆ ಅವಕಾಶ ಇರಬಾರದು. ಅವರ ಆತ್ಮವಿಶ್ವಾಸದೊಂದಿಗೆ ಚೆಲ್ಲಾಟವಾಡುವುದು ವೃತ್ತಿಜೀವನಕ್ಕೆ ಅಪಾಯ ತಂದೊಡ್ಡಬಹುದು ಎಂದು ಅಶ್ವಿನ್ ಎಚ್ಚರಿಸಿದ್ದಾರೆ.
"ಅವರು ಪರಿಣಿತ ಕ್ರಿಕೆಟಿಗರು ಮತ್ತು ವೃತ್ತಿಪರರು. ಆದರೆ ಅವರೂ ಭಾವನೆಗಳನ್ನು ಹೊಂದಿರುವ ಮನುಷ್ಯರೇ. ಅವರ ಆತ್ಮವಿಶ್ವಾಸದೊಂದಿಗೆ ಚೆಲ್ಲಾಟವಾಡಬೇಡಿ. ಆತ್ಮವಿಶ್ವಾಸ ಕುಂದಿದರೆ ಅವರ ವೃತ್ತಿಜೀವನವೇ ಅಪಾಯಕ್ಕೆ ಸಿಲುಕಬಹುದು. ತಂಡದ ಆಡಳಿತ ಮಂಡಳಿ ಮತ್ತು ಆಯ್ಕೆಗಾರರು ಈ ಕ್ರೀಡೆಯ ರಕ್ಷಕರು. ನಮಗೆ ಇವನು ಇಷ್ಟ, ಅವನು ಇಷ್ಟವಿಲ್ಲ ಎಂಬ ಧೋರಣೆಯಿಂದ ಕೆಲಸ ಮಾಡಲು ಸಾಧ್ಯವಿಲ್ಲ. ಆಟಗಾರರನ್ನು ಸಮಾನವಾಗಿ ಪರಿಗಣಿಸಿ ಜವಾಬ್ದಾರಿ ನಿರ್ವಹಿಸಬೇಕು," ಎಂದು ಅಶ್ವಿನ್ ಹೇಳಿದ್ದಾರೆ.
ತಮ್ಮ 25 ವರ್ಷಗಳ ವೃತ್ತಿಜೀವನದಲ್ಲೂ ಇಂತಹ ಅನುಭವ ಎದುರಿಸಿದ್ದಾಗಿ ಅವರು ಹೇಳಿದ್ದಾರೆ. ಅಂಡರ್-19 ಹಂತದಿಂದ ಪ್ರಥಮ ದರ್ಜೆ ಕ್ರಿಕೆಟ್ ವರೆಗೆ ಪ್ರತಿಯೊಬ್ಬ ಕೋಚ್ ಅಥವಾ ಆಯ್ಕೆಗಾರರಿಗೂ ಆಟಗಾರ ಇಷ್ಟವಾಗಬೇಕೆಂದಿಲ್ಲ. ಆದರೆ ಆಟಗಾರನ ಪ್ರದರ್ಶನ ಮತ್ತು ಸಾಮರ್ಥ್ಯದ ಆಧಾರದ ಮೇಲೆ ಎಲ್ಲರನ್ನೂ ನ್ಯಾಯಯುತವಾಗಿ ಕಾಣುವುದು ಅತ್ಯಗತ್ಯ ಎಂದು ಅವರು ಹೇಳಿದ್ದಾರೆ.
"ನನ್ನ 25 ವರ್ಷಗಳ ವೃತ್ತಿಜೀವನದಲ್ಲಿ ನಾನೂ ಇದನ್ನು ಅನುಭವಿಸಿದ್ದೇನೆ. ಅನೇಕರಿಗೆ ನಾನು ಇಷ್ಟವಾಗಿದ್ದೆ, ಮತ್ತೆ ಕೆಲವರಿಗೆ ಇಷ್ಟವಿರಲಿಲ್ಲ. ಅಂಡರ್-19 ಹಂತದಿಂದ ಹಿಡಿದು ಪ್ರಥಮ ದರ್ಜೆ ಕ್ರಿಕೆಟ್ವರೆಗೆ ಪ್ರತಿಯೊಬ್ಬ ಕೋಚ್ ಅಥವಾ ಆಯ್ಕೆಗಾರರಿಗೂ ನೀವು ಇಷ್ಟವಾಗಬೇಕೆಂದಿಲ್ಲ. ಆದರೂ ಆಟಗಾರನ ಪ್ರದರ್ಶನ ಮತ್ತು ಸಾಮರ್ಥ್ಯದ ಆಧಾರದ ಮೇಲೆ ಎಲ್ಲರನ್ನೂ ಸಮಾನವಾಗಿ ಹಾಗೂ ನ್ಯಾಯಯುತವಾಗಿ ಕಾಣುವುದು ಅತ್ಯಗತ್ಯ," ಎಂದು ಅಶ್ವಿನ್ ಮಾತು ಮುಕ್ತಾಯಗೊಳಿಸಿದ್ದಾರೆ.






