7,000 ರನ್ ಗಳಿಸಿದ ಎರಡನೇ ಆಟಗಾರ್ತಿ ಸ್ಮತಿ ಮಂಧಾನ
ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ ಭರ್ಜರಿ ಜಯ

ಸ್ಮತಿ ಮಂಧಾನ | PC : PTI
ಬೆಂಗಳೂರು: ಭಾರತದ ಆರಂಭಿಕ ಆಟಗಾರ್ತಿ ಸ್ಮತಿ ಮಂಧಾನ (117 ರನ್, 127 ಎಸೆತ) ದಕ್ಷಿಣ ಆಫ್ರಿಕಾ ವಿರುದ್ದ ಚಿನ್ನಸ್ವಾಮಿ ಸ್ಟೇಡಿಯಮ್ನಲ್ಲಿ ರವಿವಾರ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಅಂತರ್ರಾಷ್ಟ್ರೀಯ ಕ್ರಿಕೆಟ್ನಲ್ಲಿ 7,000 ರನ್ ಮೈಲಿಗಲ್ಲು ತಲುಪಿದರು. ಇದೇ ವೇಳೆ ಭಾರತವು ದಕ್ಷಿಣ ಆಫ್ರಿಕಾ ತಂಡವನ್ನು 143 ರನ್ ಅಂತರದಿಂದ ಮಣಿಸಿದೆ.
ಮೊದಲು ಬ್ಯಾಟ್ ಮಾಡಿದ ಭಾರತ 8 ವಿಕೆಟ್ ನಷ್ಟಕ್ಕೆ 265 ರನ್ ಗಳಿಸಿತು. ಇದಕ್ಕೆ ಪ್ರತಿಯಾಗಿ ದಕ್ಷಿಣ ಆಫ್ರಿಕಾ ತಂಡ 37.4 ಓವರ್ಗಳಲ್ಲಿ 122 ರನ್ ಗಳಿಸಿ ಆಲೌಟಾಯಿತು. ಆಶಾ ಸೋಭ(4-21), ದೀಪ್ತಿ ಶರ್ಮಾ(2-10) ಹಾಗೂ ರಾಧಾ ಯಾದವ್(1-32) 24.4 ಓವರ್ಗಳಲ್ಲಿ ಕೇವಲ 63 ರನ್ ನೀಡಿ 7 ವಿಕೆಟ್ಗಳನ್ನು ಪಡೆದರು. ರೇಣುಕಾ ಸಿಂಗ್(1-30) ಹಾಗೂ ಪೂಜಾ (1-11)ತಲಾ ಒಂದು ವಿಕೆಟ್ ಪಡೆದರು.
ಮಂಧಾನ 7.000 ರನ್ ಮೈಲಿಗಲ್ಲು ತಲುಪಿದ ಭಾರತದ ಎರಡನೇ ಆಟಗಾರ್ತಿ ಎನಿಸಿಕೊಂಡರು. ಮಾಜಿ ನಾಯಕಿ ಮಿಥಾಲಿ ರಾಜ್ ತನ್ನ ಯಶಸ್ವಿ ವೃತ್ತಿಜೀವನದಲ್ಲಿ 10,868 ರನ್ ಗಳಿಸಿದ್ದಾರೆ. ಹಾಲಿ ನಾಯಕಿ ಹರ್ಮನ್ಪ್ರೀತ್ ಕೌರ್ 6,870 ರನ್ ಗಳಿಸಿ ಮಂಧಾನಗೆ ಸ್ಪರ್ಧೆ ನೀಡುತ್ತಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧ ಪಂದ್ಯದಲ್ಲಿ ಮಂಧಾನ 127 ಎಸೆತಗಳಲ್ಲಿ 12 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 117 ರನ್ ಗಳಿಸಿದ್ದಾರೆ. ಮಂಧಾನ ತವರು ನೆಲದಲ್ಲಿ ಮೊದಲ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ 2ನೇ ಶತಕ ಗಳಿಸಿದರು.
ಏಕದಿನ ಕ್ರಿಕೆಟ್ನಲ್ಲಿ 6ನೇ ಶತಕ ಗಳಿಸಿದ ಮಂಧಾನ, ದೀಪ್ತಿ ಶರ್ಮಾ(37 ರನ್, 48 ಎಸೆತ) ಹಾಗೂ ಪೂಜಾ ವಸ್ತ್ರಕರ್(ಔಟಾಗದೆ 31 ರನ್, 42 ಎಸೆತ) ಅವರೊಂದಿಗೆ ಪ್ರಮುಖ ಜೊತೆಯಾಟ ನಡೆಸಿ ಭಾರತದ ಮೊತ್ತವನ್ನು 200ರ ಗಡಿ ದಾಟಿಸಿದರು.







