ಐಸಿಸಿ ಮಹಿಳೆಯರ ಏಕದಿನ ಬ್ಯಾಟಿಂಗ್ ರ್ಯಾಂಕಿಂಗ್ಸ್; ಎರಡನೇ ಸ್ಥಾನಕ್ಕೆ ಏರಿದ ಸ್ಮತಿ ಮಂಧಾನ

ಸ್ಮತಿ ಮಂಧಾನ | PC : NDTV
ದುಬೈ: ಐಸಿಸಿ ಮಹಿಳೆಯರ ಏಕದಿನ ಬ್ಯಾಟಿಂಗ್ ರ್ಯಾಂಕಿಂಗ್ಸ್ ನಲ್ಲಿ, ಭಾರತದ ಆರಂಭಿಕ ಬ್ಯಾಟರ್ ಸ್ಮತಿ ಮಂಧಾನ ಒಂದು ಸ್ಥಾನ ಮೇಲಕ್ಕೇರಿ ಎರಡನೇ ಸ್ಥಾನ ಸಂಪಾದಿಸಿದ್ದಾರೆ. ಇತ್ತೀಚೆಗೆ ಶ್ರೀಲಂಕಾದಲ್ಲಿ ನಡೆದ ತ್ರಿಕೋನ ಸರಣಿಯಲ್ಲಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿರುವ ಹಿನ್ನೆಲೆಯಲ್ಲಿ ಅವರ ರ್ಯಾಂಕಿಂಗ್ ನಲ್ಲಿ ಏರಿಕೆಯಾಗಿದೆ.
ಸ್ಮತಿ 2019ರಲ್ಲಿ ಏಕದಿನ ಬ್ಯಾಟರ್ ಗಳ ರ್ಯಾಂಕಿಂಗ್ಸ್ನಲ್ಲಿ ಅಗ್ರ ಸ್ಥಾನದಲ್ಲಿದ್ದರು. ಈಗ ಮತ್ತೆ ಅವರು ಅಗ್ರ ಸ್ಥಾನಕ್ಕೆ ಹೋಗುವ ದಾರಿಯಲ್ಲಿದ್ದಾರೆ. ಶ್ರೀಲಂಕಾ ಮತ್ತು ದಕ್ಷಿಣ ಆಫ್ರಿಕ ವಿರುದ್ಧದ ಇತ್ತೀಚಿನ ಪಂದ್ಯಗಳಲ್ಲಿ ಅವರು ಅತ್ಯುತ್ತಮ ಫಾರ್ಮ್ ನಲ್ಲಿದ್ದರು. ಆ ತ್ರಿಕೋನ ಸರಣಿಯಲ್ಲಿ ಅವರು ಐದು ಇನಿಂಗ್ಸ್ಗಳಿಂದ 264 ರನ್ಗಳನ್ನು ಗಳಿಸಿದ್ದಾರೆ. ಆ ಮೂಲಕ ಪಂದ್ಯಾವಳಿಯ ಎರಡನೇ ಗರಿಷ್ಠ ರನ್ ಗಳಿಕೆದಾರರಾದರು.
ಅವರು ಶ್ರೀಲಂಕಾ ವಿರುದ್ಧ ನಡೆದ ಫೈನಲ್ನಲ್ಲಿ 101 ಎಸೆತಗಳಿಂದ 116 ರನ್ಗಳನ್ನು ಗಳಿಸಿದ್ದರು. ಅವರು ಈಗ ರ್ಯಾಂಕಿಂಗ್ಸ್ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕದ ನಾಯಕಿ ಲಾರಾ ವೊಲ್ವಾರ್ಟ್ರಿಂದ ಕೇವಲ 11 ರೇಟಿಂಗ್ ಅಂಕಗಳಿಂದ ಹಿಂದಿದ್ದಾರೆ.
ಶ್ರೀಲಂಕಾ ತಂಡದ ನಾಯಕಿ ಚಾಮರಿ ಅತಪಟ್ಟು ಎರಡು ಸ್ಥಾನ ಮೇಲಕ್ಕೇರಿ ಏಳನೇ ಸ್ಥಾನ ಪಡೆದರೆ, ಭಾರತದ ಜೆಮಿಮಾ ರೋಡ್ರಿಗಸ್ ಐದು ಸ್ಥಾನ ಮೇಲಕ್ಕೆ ಜಿಗಿದು 15ನೇ ಸ್ಥಾನದಲ್ಲಿ ನೆಲೆಸಿದ್ದಾರೆ. ದಕ್ಷಿಣ ಆಫ್ರಿಕದ ಕ್ಲೋ ಟ್ರೈಯಾನ್ ಒಂಭತ್ತು ಸ್ಥಾನಗಳನ್ನು ಮೇಲಕ್ಕೆ ಹಾರಿ 18ನೇ ಸ್ಥಾನ ಗಳಿಸಿದ್ದಾರೆ.
ಬೌಲರ್ ಗಳ ರ್ಯಾಂಕಿಂಗ್ ಪಟ್ಟಿಯಲ್ಲಿ ಇಂಗ್ಲೆಂಡ್ ನ ಸೋಫೀ ಎಕ್ಸಲ್ಸ್ಟೋನ್ ತನ್ನ ಅಗ್ರ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ.







