ಸ್ಮೃತಿ ಮಂಧಾನ ಚೊಚ್ಚಲ ಟಿ20 ಶತಕ; ಇಂಗ್ಲೆಂಡ್ ಮಹಿಳೆಯರಿಗೆ 97 ರನ್ ಸೋಲುಣಿಸಿದ ಭಾರತ
ಬ್ಯಾಟಿಂಗ್ ಕುಸಿತ ಕಂಡ ಆತಿಥೇಯರು

Photo : PTI
ಟ್ರೆಂಟ್ಬ್ರಿಜ್ (ನಾಟಿಂಗ್ಹ್ಯಾಮ್): ಉಸ್ತುವಾರಿ ನಾಯಕಿ ಸ್ಮತಿ ಮಂಧಾನರ ಚೊಚ್ಚಲ ಅಂತರ್ರಾಷ್ಟ್ರೀಯ ಟಿ20 ಶತಕದ ನೆರವಿನಿಂದ ಭಾರತೀಯ ಮಹಿಳಾ ಕ್ರಿಕೆಟ್ ತಂಡವು ಶನಿವಾರ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಭರ್ಜರಿ 97 ರನ್ ಗಳಿಂದ ಸೋಲಿಸಿದೆ.
ಇದರೊಂದಿಗೆ ಪ್ರವಾಸಿ ಭಾರತವು ಐದು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಂಪಾದಿಸಿದೆ.
ನಾಟಿಂಗ್ಹ್ಯಾಮ್ನ ಟ್ರೆಂಟ್ಬ್ರಿಜ್ನಲ್ಲಿ ನಡೆದ ಪಂದ್ಯದಿಂದ ಭಾರತದ ನಿಯಮಿತ ನಾಯಕಿ ಹರ್ಮನ್ಪ್ರೀತ್ ಕೌರ್ ಗಾಯಾಳುವಾಗಿ ಹೊರಗುಳಿದಿದ್ದರು. ಬುಧವಾರ ನಡೆದ ಇಸಿಬಿ ಡೆವೆಲಪ್ಮೆಂಟ್ ಇಲೆವೆನ್ ವಿರುದ್ಧದ ಅಭ್ಯಾಸ ಪಂದ್ಯದ ವೇಳೆ ಅವರ ತಲೆಗೆ ಹೊಡೆತ ಬಿದ್ದಿತ್ತು. ಶನಿವಾರ ಅವರ ಸ್ಥಾನದಲ್ಲಿ ನಿಂತು ಸ್ಮತಿ ಮಂಧಾನ ತಂಡವನ್ನು ಮುನ್ನಡೆಸಿದರು.
ಮಂಧಾನ ಮೂರು ಸಿಕ್ಸರ್ಗಳು ಮತ್ತು 15 ಬೌಂಡರಿಗಳ ನೆರವಿನಿಂದ 62 ಎಸೆತಗಳಲ್ಲಿ 112 ರನ್ ಗಳನ್ನ ಸಿಡಿಸಿದರು. ಅವರನ್ನು ಪಂದ್ಯಶ್ರೇಷ್ಠ ಪ್ರಶಸ್ತಿಯಿಂದ ಪುರಸ್ಕರಿಸಲಾಯಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತವು 20 ಓವರ್ಗಳಲ್ಲಿ 5 ವಿಕೆಟ್ ಗಳ ನಷ್ಟಕ್ಕೆ 210 ರನ್ ಗಳ ಬೃಹತ್ ಮೊತ್ತವನ್ನು ಕಲೆಹಾಕಿತು.
ಇನ್ನೋರ್ವ ಆರಂಭಿಕ ಬ್ಯಾಟರ್ ಶೆಫಾಲಿ ವರ್ಮಾ 20 ರನ್ ಗಳ ದೇಣಿಗೆ ನೀಡಿದರು. ಹರ್ಲೀನ್ ದೇವಲ್ 23 ಎಸೆತಗಳಲ್ಲಿ 43 ರನ್ ಗಳನ್ನು ಸಿಡಿಸಿ ತಂಡದ ಬೃಹತ್ ಮೊತ್ತಕ್ಕೆ ದೇಣಿಗೆ ನೀಡಿದರು.
ಇಂಗ್ಲೆಂಡ್ ನ ಲಾರೆನ್ ಬೆಲ್ 27 ರನ್ ಗಳನ್ನು ನೀಡಿ 3 ವಿಕೆಟ್ ಗಳನ್ನು ಉರುಳಿಸಿದರು.
ಗೆಲ್ಲಲು 211 ರನ್ ಗಳ ಗುರಿಯನ್ನು ಪಡೆದ ಇಂಗ್ಲೆಂಡ್ ಮಹಿಳೆಯರು ಭಾರತೀಯ ಬೌಲರ್ ಶ್ರೀ ಚರಣಿಯ ದಾಳಿಗೆ ತತ್ತರಿಸಿದರು. ಬ್ಯಾಟಿಂಗ್ ಕುಸಿತ ಕಂಡ ಇಂಗ್ಲೆಂಡ್ 14.5 ಓವರ್ಗಳಲ್ಲಿ 113 ರನ್ ಗಳಿಗೆ ಆಲೌಟಾಯಿತು.
ನಟಾಲಿ ಸೈವರ್ ಬ್ರಂಟ್ ಮಾತ್ರ ಭಾರತೀಯ ಬೌಲರ್ ಗಳನ್ನು ದಿಟ್ಟವಾಗಿ ಎದುರಿಸಿ 42 ಎಸೆತಗಳಲ್ಲಿ 66 ರನ್ ಗಳನ್ನು ಗಳಿಸಿದರು.
ಎಡಗೈ ಸ್ಪಿನ್ನರ್ ಶ್ರೀ ಚರಣಿ 3.5 ಓವರ್ ಗಳಲ್ಲಿ ಕೇವಲ 12 ರನ್ ಗಳನ್ನು ನೀಡಿ 4 ವಿಕೆಟ್ ಗಳನ್ನು ಉರುಳಿಸಿದರು. ದೀಪ್ತಿ ಶರ್ಮಾ ಮತ್ತು ರಾಧಾ ಯಾದವ್ ತಲಾ ಎರಡು ವಿಕೆಟ್ ಗಳನ್ನು ಪಡೆದರು.







