ಐಸಿಸಿ ಟಿ20 ರ್ಯಾಂಕಿಂಗ್: ಮೂರನೇ ಸ್ಥಾನಕ್ಕೇರಿದ ಸ್ಮೃತಿ ಮಂಧಾನ

ಸ್ಮೃತಿ ಮಂಧಾನ | PC : BCCI
ದುಬೈ: ಭಾರತ ಕ್ರಿಕೆಟ್ ತಂಡದ ಉಪ ನಾಯಕಿ ಸ್ಮೃತಿ ಮಂಧಾನ ಮಂಗಳವಾರ ಐಸಿಸಿ ಬಿಡುಗಡೆ ಮಾಡಿರುವ ಮಹಿಳೆಯರ ಟಿ20 ಅಂತರ್ರಾಷ್ಟ್ರೀಯ ಪಂದ್ಯದ ಬ್ಯಾಟರ್ಗಳ ರ್ಯಾಂಕಿಂಗ್ ನಲ್ಲಿ ಮೂರನೇ ಸ್ಥಾನಕ್ಕೆ ಭಡ್ತಿ ಪಡೆದಿದ್ದಾರೆ.
ಏಕದಿನ ಕ್ರಿಕೆಟ್ ರ್ಯಾಂಕಿಂಗ್ ನಲ್ಲಿ ಈಗಾಗಲೇ ನಂ.1 ಸ್ಥಾನದಲ್ಲಿರುವ ಮಂಧಾನ ಅವರು ಇಂಗ್ಲೆಂಡ್ ತಂಡದ ವಿರುದ್ದ ಕಳೆದ ವಾರ ಐದು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ತನ್ನ ಚೊಚ್ಚಲ ಶತಕ ಗಳಿಸಿದ್ದ ಹಿನ್ನೆಲೆಯಲ್ಲಿ ಟಿ20 ಕ್ರಿಕೆಟ್ನಲ್ಲಿ ಭಡ್ತಿ ಪಡೆದಿದ್ದಾರೆ.
ಕೇವಲ 62 ಎಸೆತಗಳಲ್ಲಿ 15 ಬೌಂಡರಿ ಹಾಗೂ 3 ಸಿಕ್ಸರ್ಗಳನ್ನೊಳಗೊಂಡ 112 ರನ್ ಗಳಿಸಿದ್ದ ಮಂಧಾನ ಅವರು ನಾಟಿಂಗ್ಹ್ಯಾಮ್ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ತಂಡವು 97 ರನ್ ಅಂತರದಿಂದ ಭರ್ಜರಿ ಜಯ ಸಾಧಿಸುವಲ್ಲಿ ಮಹತ್ವದ ಪಾತ್ರವಹಿಸಿದ್ದರು. ಸೀಮಿತ ಓವರ್ ಕ್ರಿಕೆಟ್ ನಲ್ಲಿ ಭಾರತವು ಆತಿಥೇಯರ ವಿರುದ್ಧ ದೊಡ್ಡ ರನ್ ಅಂತರದಿಂದ ಜಯ ಸಾಧಿಸಿದೆ.
ಭಾರತದ ಎಡಗೈ ಆರಂಭಿಕ ಆಟಗಾರ್ತಿ ಮಂಧಾನ ಅವರು ಇದೀಗ ಜೀವನಶ್ರೇಷ್ಠ ರೇಟಿಂಗ್ ಪಾಯಿಂಟ್ಸ್ 771 ಪಡೆದಿದ್ದಾರೆ. ವೆಸ್ಟ್ಇಂಡೀಸ್ ನ ಹೇಲಿ ಮ್ಯಾಥ್ಯೂಸ್(774 ಪಾಯಿಂಟ್ಸ್)ಹಾಗೂ ಆಸ್ಟ್ರೇಲಿಯದ ಬೆಥ್ ಮೂನಿ(794 ಪಾಯಿಂಟ್ಸ್)ಕ್ರಮವಾಗಿ 2ನೇ ಹಾಗೂ 1ನೇ ಸ್ಥಾನದಲ್ಲಿದ್ದಾರೆ. ಸ್ಮೃತಿ ಮಂಧಾನ 3ನೇ ಸ್ಥಾನದಲ್ಲಿದ್ದಾರೆ.
ಭಾರತ ತಂಡದ ಬ್ಯಾಟರ್ಗಳ ಪೈಕಿ ಆರಂಭಿಕ ಆಟಗಾರ್ತಿ ಶೆಫಾಲಿ ವರ್ಮಾ ಹಾಗೂ ಹರ್ಲೀನ್ ಡೆವೋಲ್ ಕೂಡ ರ್ಯಾಂಕಿಂಗ್ ನಲ್ಲಿ ಪ್ರಗತಿ ಸಾಧಿಸಿದ್ದಾರೆ.
ಇಂಗ್ಲೆಂಡ್ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ 20 ರನ್ ಗಳಿಸಿದ್ದ ಭಾರತದ ಇನ್ನೋರ್ವ ಆರಂಭಿಕ ಆಟಗಾರ್ತಿ ಶೆಫಾಲಿ ವರ್ಮಾ ರ್ಯಾಂಕಿಂಗ್ ನಲ್ಲಿ ಒಂದು ಸ್ಥಾನ ಭಡ್ತಿ ಪಡೆದಿದ್ದಾರೆ. ಶೆಫಾಲಿ ಅವರ ಸಹ ಆಟಗಾರ್ತಿ ಹರ್ಲೀನ್ ಡೆವೊಲ್ ಕ್ಷಿಪ್ರವಾಗಿ 43 ರನ್ ಗಳಿಸಿದ ಪರಿಣಾಮ ಬ್ಯಾಟರ್ಗಳ ರ್ಯಾಂಕಿಂಗ್ ನಲ್ಲಿ 86ನೇ ಸ್ಥಾನ ಪಡೆದಿದ್ದಾರೆ ಎಂದು ಐಸಿಸಿ ಪ್ರಕಟನೆಯಲ್ಲಿ ತಿಳಿಸಿದೆ.
ಭಾರತ ತಂಡದ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ 3 ವಿಕೆಟ್ ಗೊಂಚಲು ಪಡೆದಿರುವ ಇಂಗ್ಲೆಂಡ್ ನ ವೇಗದ ಬೌಲರ್ ಲೌರೆನ್ ಬೆಲ್ ಬೌಲರ್ಗಳ ರ್ಯಾಂಕಿಂಗ್ ನಲ್ಲಿ ಎರಡು ಸ್ಥಾನ ಮೇಲಕ್ಕೇರಿ 4ನೇ ಸ್ಥಾನ ತಲುಪಿದ್ದಾರೆ. ಪಾಕಿಸ್ತಾನದ ಸ್ಪಿನ್ನರ್ ಸಾದಿಯಾ ಇಕ್ಬಾಲ್ ಟಿ20 ಬೌಲರ್ಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲೇ ಮುಂದುವರಿದಿದ್ದಾರೆ ಎಂದು ಐಸಿಸಿ ತಿಳಿಸಿದೆ.
ವೆಸ್ಟ್ಇಂಡೀಸ್ ವಿರುದ್ಧ ತನ್ನ ಚೊಚ್ಚಲ ಅರ್ಧಶತಕ ಗಳಿಸಿದ್ದ ದಕ್ಷಿಣ ಆಫ್ರಿಕಾದ ಮಿಯಾನ್ ಸ್ಮಿತ್ 76ನೇ ಸ್ಥಾನಕ್ಕೇರಿದರೆ, ಸ್ಮಿತ್ ಸಹ ಆಟಗಾರ್ತಿ ಸುನ್ ಲುಸ್ ಆಲ್ ರೌಂಡರ್ ಗಳ ಪಟ್ಟಿಯಲ್ಲಿ 9 ಸ್ಥಾನ ಮೇಲಕ್ಕೇರಿ 31ನೇ ಸ್ಥಾನ ತಲುಪಿದ್ದಾರೆ.







