ಒಂದೇ ವಿಶ್ವಕಪ್ ನಲ್ಲಿ ಗರಿಷ್ಠ ರನ್ ಗಳಿಸಿದ ಭಾರತದ ಬ್ಯಾಟರ್ ಸ್ಮೃತಿ ಮಂಧಾನ!

ಸ್ಮೃತಿ ಮಂಧಾನ | Photo Credit : PTI
ನವಿ ಮುಂಬೈ, ನ.2: ಭಾರತದ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ತನ್ನ ಸಾಧನೆಗಳ ಪಟ್ಟಿಗೆ ಮತ್ತೊಂದು ಅಧ್ಯಾಯ ಸೇರ್ಪಡೆಗೊಳಿಸಿದ್ದು, ರವಿವಾರ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಫೈನಲ್ ಪಂದ್ಯದ ವೇಳೆ ಒಂದೇ ಆವೃತ್ತಿಯ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಗರಿಷ್ಠ ರನ್ ಗಳಿಸಿದ ಆಟಗಾರ್ತಿಯಾಗಿ ಹೊರಹೊಮ್ಮಿದರು.
ಮಂಧಾನ 58 ಎಸೆತಗಳಲ್ಲಿ 45 ರನ್ ಗಳಿಸಿ ಔಟಾದರು. ಈ ಮೂಲಕ 2017ರ ವಿಶ್ವಕಪ್ ನಲ್ಲಿ 409 ರನ್ ಗಳಿಸಿದ್ದ ಮಾಜಿ ನಾಯಕಿ ಮಿಥಾಲಿ ರಾಜ್ ಅವರ ದಾಖಲೆಯನ್ನು ಮುರಿದರು.
ಪಂದ್ಯಾವಳಿಯುದ್ದಕ್ಕೂ ಅಗ್ರ ಸರದಿಯಲ್ಲಿ ಸ್ಥಿರ ಪ್ರದರ್ಶನ ನೀಡಿರುವ ಮಂಧಾನ 9 ಇನಿಂಗ್ಸ್ಗಳಲ್ಲಿ 54.25ರ ಸರಾಸರಿಯಲ್ಲಿ, 99.08ರ ಸ್ಟ್ರೈಕ್ ರೇಟ್ ನಲ್ಲಿ ಒಟ್ಟು 434 ರನ್ ಗಳಿಸಿದ್ದು, 109 ಗರಿಷ್ಠ ಸ್ಕೋರಾಗಿದೆ.
ಎಡಗೈ ಆಟಗಾರ್ತಿ ಮಂಧಾನ, ಮಹಿಳೆಯರ ವಿಶ್ವಕಪ್ ನಲ್ಲಿ 1,000 ರನ್ ಪೂರೈಸಿದ ಭಾರತದ 3ನೇ ಬ್ಯಾಟರ್ ಎನಿಸಿಕೊಳ್ಳುವುದರಿಂದ ಸ್ವಲ್ಪದರಲ್ಲೆ ವಂಚಿತರಾದರು. ಸದ್ಯ ನಾಯಕಿ ಹರ್ಮನ್ಪ್ರೀತ್ ಕೌರ್ ಹಾಗೂ ಮಿಥಾಲಿ ರಾಜ್ ಈ ಪಟ್ಟಿಯಲ್ಲಿದ್ದಾರೆ.





