ಮಹಿಳೆಯರ ಏಕದಿನ ಕ್ರಿಕೆಟ್ ನಲ್ಲಿ ಗರಿಷ್ಠ ಶತಕ: 3ನೇ ಸ್ಥಾನಕ್ಕೇರಿದ ಸ್ಮೃತಿ ಮಂಧಾನ

Photo : x/mandhana_smriti
ಕೊಲಂಬೊ: ಏಕದಿನ ಕ್ರಿಕೆಟ್ನಲ್ಲಿ ತನ್ನ ಶ್ರೇಷ್ಠ ಪ್ರದರ್ಶನ ಮುಂದುವರಿಸಿರುವ ಸ್ಮೃತಿ ಮಂಧಾನ ಶ್ರೀಲಂಕಾ ವಿರುದ್ಧ ರವಿವಾರ ನಡೆದ ತ್ರಿಕೋನ ಏಕದಿನ ಸರಣಿಯ ಫೈನಲ್ ಪಂದ್ಯದಲ್ಲಿ ತನ್ನ 11ನೇ ಶತಕವನ್ನು ಪೂರೈಸಿದರು.
101 ಎಸೆತಗಳಲಿ 116 ರನ್ ಗಳಿಸಿದ್ದ ಮಂಧಾನ ಭಾರತವು ಬೃಹತ್ ಮೊತ್ತ ಗಳಿಸುವಲ್ಲಿ ಭದ್ರಬುನಾದಿ ಹಾಕಿಕೊಟ್ಟರು. ಈ ಶತಕದ ಮೂಲಕ ಅವರು ಮಹಿಳೆಯರ ಏಕದಿನ ಕ್ರಿಕೆಟ್ನ ಸಾರ್ವಕಾಲಿಕ ಶ್ರೇಷ್ಠ ಶತಕಗಳ ಪಟ್ಟಿಯಲ್ಲಿ ಆಸ್ಟ್ರೇಲಿಯದ ಮೆಗ್ ಲ್ಯಾನಿಂಗ್(15) ಹಾಗೂ ನ್ಯೂಝಿಲ್ಯಾಂಡ್ನ ಸುಝಿ ಬೇಟ್ಸ್(13)ನಂತರ 3ನೇ ಸ್ಥಾನದಲ್ಲಿದ್ದಾರೆ.
ಎಡಗೈ ಆಟಗಾರ್ತಿ 114.85ರ ಸ್ಟ್ರೈಕ್ರೇಟ್ ಕಾಯ್ದುಕೊಂಡು 15 ಬೌಂಡರಿ, 2 ಸಿಕ್ಸರ್ಗಳನ್ನು ಗಳಿಸಿದರು. ಮಂಧಾನ ಅವರು ಈ ಮೈಲಿಗಲ್ಲು ಮೂಲಕ ಮಹಿಳಾ ಕ್ರಿಕೆಟ್ನ ಅತ್ಯುತ್ತಮ ಬ್ಯಾಟರ್ಗಳಲ್ಲಿ ಒಬ್ಬರೆಂದು ಸಾಬೀತುಪಡಿಸಿದ್ದಾರೆ.
ಪ್ರತಿಕಾ ರಾವತ್ ಜೊತೆ ಇನಿಂಗ್ಸ್ ಆರಂಭಿಸಿರುವ ಮಂಧಾನ ಮೊದಲ ವಿಕೆಟ್ಗೆ 70 ರನ್ ಗಳಿಸಿ ಭಾರತವನ್ನು ಆಧರಿಸಿದರು. ರಾವಲ್ 49 ಎಸೆತಗಳಲ್ಲಿ 30 ರನ್ ಗಳಿಸುವಲ್ಲಿ ಶಕ್ತರಾದರು.
ನಾಲ್ಕು ಪಂದ್ಯಗಳನ್ನು ಜಯಿಸಿದ್ದ ಭಾರತವು ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆಯುವುದರೊಂದಿಗೆ ಫೈನಲ್ಗೆ ಪ್ರವೇಶಿಸಿತ್ತು. ಹರ್ಮನ್ಪ್ರೀತ್ ಕೌರ್ ನೇತೃತ್ವದ ಭಾರತವು ಒಂದು ಬದಲಾವಣೆ ಮಾಡಿದ್ದು, ಮಧ್ಯಮ ವೇಗದ ಬೌಲರ್ ಕ್ರಾಂತಿ ಗೌಡ್ಗೆ ಅವಕಾಶ ನೀಡಿದರು. ಶುಚಿ ಉಪಾಧ್ಯಾಯಗೆ ವಿಶ್ರಾಂತಿ ನೀಡಿದರು.
ಇದೇ ವೇಳೆ ಶ್ರೀಲಂಕಾ ತಂಡವು ಪ್ರಮುಖ ಆಲ್ರೌಂಡರ್ ಕವಿಶಾ ದಿಲ್ಹರಿ ಅವರ ಸೇವೆಯಿಂದ ವಂಚಿತವಾಯಿತು.
► ಮಹಿಳೆಯರ ಕ್ರಿಕೆಟ್ನಲ್ಲಿ ಗರಿಷ್ಠ ಶತಕಗಳು
ಮೆಗ್ ಲ್ಯಾನಿಂಗ್(ಆಸ್ಟ್ರೇಲಿಯ): 15
ಸುಝಿ ಬೇಟ್ಸ್(ನ್ಯೂಝಿಲ್ಯಾಂಡ್): 13
ಸ್ಮೃತಿ ಮಂಧಾನ(ಭಾರತ): 11
ಟಮ್ಮಿ ಬೀಮೌಂಟ್(ಇಂಗ್ಲೆಂಡ್): 10
ಹೇಲಿ ಮ್ಯಾಥ್ಯೂಸ್(ವೆಸ್ಟ್ಇಂಡೀಸ್): 9







