ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಇತಿಹಾಸ ಸೃಷ್ಟಿಸಿದ ಸ್ಮೃತಿ ಮಂದಾನ

Photo: x.com/Kohlistic
ಎಡ್ಜ್ಬಾಸ್ಟನ್ : ಪಾಕಿಸ್ತಾನ ವಿರುದ್ಧ ಎಡ್ಜ್ಬಾಸ್ಟನ್ನಲ್ಲಿ ಭಾನುವಾರ ನಡೆದ ಮಹಿಳಾ ಟಿ20 ವಿಶ್ವಕಪ್ ಪಂದ್ಯದಲ್ಲಿ ಅರ್ಧಶತಕ ಗಳಿಸುವ ಮೂಲಕ ಸ್ಮೃತಿ ಮಂದಾನ ವಿಶ್ವಕಪ್ನಲ್ಲಿ ಗರಿಷ್ಠ ಅರ್ಧಶತಕ ದಾಖಲಿಸಿದ ದಾಖಲೆಯನ್ನು ಸರಿಗಟ್ಟಿದರು. ಇದೀಗ ಸ್ಮೃತಿ ಮಂದಾನ ಅವರು ಮಿಥಾಲಿ ರಾಜ್ ಹಾಗೂ ಹರ್ಮನ್ಪ್ರೀತ್ ಕೌರ್ ಜತೆಗೆ ಗರಿಷ್ಠ ಅರ್ಧಶತಕದ ದಾಖಲೆಯನ್ನು ಹಂಚಿಕೊಂಡಿದ್ದಾರೆ.
ಆರಂಭದಲ್ಲೇ 2 ವಿಕೆಟ್ಗೆ 18 ರನ್ ಗಳಿಸಿ ಅಪಾಯದಲ್ಲಿದ್ದ ಭಾರತದ ಇನಿಂಗ್ಸ್ ಆಧರಿಸಿದ ಮಂದಾನ 44 ಎಸೆತಗಳಲ್ಲಿ 68 ರನ್ ಸಿಡಿಸಿದ್ದಲ್ಲದೇ ನಾಯಕಿ ಹರ್ಮನ್ಪ್ರೀತ್ ಕೌರ್ (35 ಎಸೆತಗಳಲ್ಲಿ 36) ಅವರ ಜತೆ 91 ರನ್ಗಳ ಜತೆಯಾಟದಲ್ಲಿ ಭಾಗಿಯಾದರು. ಇನಿಂಗ್ಸ್ ಕೊನೆಯಲ್ಲಿ ರಿಚಾ ಘೋಷ್ 17 ಎಸೆತಗಳಲ್ಲಿ 34 ರನ್ ಸಿಡಿಸಿ 6 ವಿಕೆಟ್ ನಷ್ಟಕ್ಕೆ 170 ರನ್ಗಳ ಮೊತ್ತ ಕಲೆಹಾಕಲು ನೆರವಾದರು.
ಮಹಿಳಾ ಟಿ20 ಕ್ರಿಕೆಟ್ನಲ್ಲಿ ಇದೀಗ ಮಂದಾನ ಅವರು ಐದು ಅಥವಾ ಹೆಚ್ಚು ಬಾರಿ 50ಕ್ಕಿಂತ ಅಧಿಕ ರನ್ ಗಳಿಸಿದ ಆಟಗಾರ್ತಿಯರ ಸಾಲಿಗೆ ಸೇರಿದಂತಾಗಿದೆ. ಮಿಥಾಲಿ ರಾಜ್ 23 ಇನಿಂಗ್ಸ್ಗಳಲ್ಲಿ ಐದು ಅರ್ಧಶತಕ ಸಿಡಿಸಿದ್ದರೆ, ಹರ್ಮನ್ಪ್ರೀತ್ ಕೌರ್ ಮತ್ತು ಸ್ಮೃತಿ ಮಂದಾನಾ ಕ್ರಮವಾಗಿ 34 ಹಾಗೂ 26 ಇನಿಂಗ್ಸ್ಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಪೂನಮ್ ರಾವತ್ 15 ಇನಿಂಗ್ಸ್ಗಳಲ್ಲಿ 3 ಅರ್ಧಶತಕ ಬಾರಿಸಿದ್ದಾರೆ.




