ಶ್ರೀಲಂಕಾ ವಿರುದ್ಧದ ಪಂದ್ಯ; ದಾಖಲೆ ಸೃಷ್ಟಿಸಿದ ಸ್ಮೃತಿ ಮಂದಾನ

PC: x.com/the_hindu
ಹೊಸದಿಲ್ಲಿ: ಭಾರತ ಮಹಿಳಾ ಕ್ರಿಕೆಟ್ ತಂಡದ ಉಪನಾಯಕಿ ಸ್ಮೃತಿ ಮಂದಾನ 10 ಸಾವಿರ ಅಂತರರಾಷ್ಟ್ರೀಯ ರನ್ ಗಳಿಸಿದ ಎರಡನೇ ಭಾರತೀಯ ಆಟಗಾರ್ತಿ ಎಂಬ ಖ್ಯಾತಿಗೆ ಪಾತ್ರರಾದರು. ಜತೆಗೆ ಅತ್ಯಂತ ವೇಗವಾಗಿ 10 ಸಾವಿರ ರನ್ ಗಳ ಮೈಲುಗಲ್ಲು ಸ್ಥಾಪಿಸಿದ ಮಹಿಳೆ ಎಂಬ ಹೆಗ್ಗಳಿಕೆಯೂ ಅವರದ್ದಾಯಿತು.
ಬಾಂಗ್ಲಾದೇಶ ವಿರುದ್ಧ 2013ರಲ್ಲಿ ಭಾರತ ಪರ ಪದಾರ್ಪಣೆ ಮಾಡಿದ್ದ ಮಂದಾನಾ, ತಿರುವನಂತಪುರದ ಗ್ರೀನ್ ಫೀಲ್ಡ್ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ಶ್ರೀಲಂಕಾ ವಿರುದ್ಧ ನಡೆದ ನಾಲ್ಕನೇ ಟಿ20 ಪಂದ್ಯದಲ್ಲಿ ಈ ಮೈಲುಗಲ್ಲು ತಲುಪಲು 27 ರನ್ ಗಳಿಸಬೇಕಿತ್ತು. ಕೇವಲ 20 ಎಸೆತಗಳಲ್ಲೇ 27 ರನ್ ಗಳಿಸಿದ ಅವರು, ಬಳಿಕ 11 ಬೌಂಡರಿ ಮತ್ತು ಮೂರು ಸಿಕ್ಸರ್ ಗಳೊಂದಿಗೆ 48 ಎಸೆತಗಳಲ್ಲಿ 80 ರನ್ ಗಳನ್ನು ಸಿಡಿಸಿದರು. 170.2 ಸ್ಟ್ರೈಕ್ ರೇಟ್ ನೊಂದಿಗೆ 32ನೇ ಅಂತರರಾಷ್ಟ್ರೀಯ ಅರ್ಧಶತಕ ಗಳಿಸಿದರು.
ಈ ಸಾಧನೆಯೊಂದಿಗೆ ಮಂದಾನಾ, ಈಗಾಗಲೇ 10 ಸಾವಿರ ಅಂತರರಾಷ್ಟ್ರೀಯ ರನ್ ಗಳಿಸಿದ ನ್ಯೂಜಿಲೆಂಡ್ ನ ಸೂಝಿ ಬೇಟ್ಸ್ ಮತ್ತು ಇಂಗ್ಲೆಂಡ್ನ ಮಾಜಿ ನಾಯಕಿ ಚಾರ್ಲೊಟ್ ಎಡ್ವರ್ಡ್ ಅವರ ಸಾಲಿಗೆ ಸೇರಿದರು.
ಏಳು ಟೆಸ್ಟ್ ಪಂದ್ಯಗಳಿಂದ 629 ರನ್ ಕಲೆ ಹಾಕಿರುವ ಅವರು, 117 ಏಕದಿನ ಪಂದ್ಯಗಳಲ್ಲಿ 5322 ರನ್ ಗಳಿಸಿದ್ದಾರೆ. ಅಂತೆಯೇ ಟಿ20 ಕ್ರಿಕೆಟ್ ನಲ್ಲಿ 4000 ಅಂತರರಾಷ್ಟ್ರೀಯ ರನ್ಗಳನ್ನು ಗಳಿಸಿದ ಭಾರತದ ಮೊಟ್ಟಮೊದಲ ಹಾಗೂ ವಿಶ್ವದ ಎರಡನೇ ಆಟಗಾರ್ತಿ ಎಂಬ ದಾಖಲೆಯನ್ನು ಸರಣಿಯ ಮೊದಲ ಪಂದ್ಯದಲ್ಲಿ ಇವರು ಸೃಷ್ಟಿಸಿದ್ದರು.
ಎಡಗೈ ಆರಂಭಿಕ ಆಟಗಾರ್ತಿ ಏಕದಿನ ವಿಶ್ವಕಪ್ ನಲ್ಲಿ ಒಂಬತ್ತು ಇನಿಂಗ್ಸ್ ಗಳಲ್ಲಿ 54.25 ಸರಾಸರಿಯೊಂದಿಗೆ 434 ರನ್ ಗಳಿಸಿದ್ದರು. 2025ರಲ್ಲಿ ಏಕದಿನ ಪಂದ್ಯಗಳ 23 ಇನಿಂಗ್ಸ್ ಗಳಲ್ಲಿ 1362 ರನ್ ಗಳಿಸಿರುವ ಅವರು ಅತಿಹೆಚ್ಚು ರನ್ ಗಳಿಸಿದ ಆಟಗಾರ್ತಿಯಾಗಿದ್ದಾರೆ. ಐದು ಅರ್ಧಶತಕ ಹಾಗೂ ಐದು ಶತಕಗಳನ್ನು ಅವರು 2025ರಲ್ಲಿ ಸಿಡಿಸಿದ್ದಾರೆ.







