ಆಫ್ರಿಕಾ ಕಪ್ ಆಫ್ ನೇಷನ್ಸ್ ಪ್ರಶಸ್ತಿ ಮತ್ತೆ ಸೆನೆಗಲ್ ಮುಡಿಗೆ!
ಮೊರಾಕೊಗೆ 3-0 ಗೆಲುವು ನೀಡಿದ್ದ CAF ನಿರ್ಧಾರ ರದ್ದು; ಫೈನಲ್ ನ 1-0 ಫಲಿತಾಂಶವನ್ನು ಎತ್ತಿಹಿಡಿದ CAS

Credit: Reuters
ಸ್ವಿಟ್ಜರ್ಲೆಂಡ್: 2025ರ ಆಫ್ರಿಕಾ ಕಪ್ ಆಫ್ ನೇಷನ್ಸ್ ಫುಟ್ಬಾಲ್ ಟೂರ್ನಿಯ ಚಾಂಪಿಯನ್ ಪಟ್ಟವನ್ನು ಸೆನೆಗಲ್ ಗೆ ಮರಳಿ ನೀಡಲಾಗಿದೆ. ಸೆನೆಗಲ್ ನ 1-0 ಗೆಲುವನ್ನು ರದ್ದುಗೊಳಿಸಿ ಮೊರಾಕೊಗೆ 3-0 ಫಲಿತಾಂಶ ನೀಡಿದ್ದ ಆಫ್ರಿಕನ್ ಫುಟ್ಬಾಲ್ ಒಕ್ಕೂಟದ (CAF) ಮೇಲ್ಮನವಿ ಮಂಡಳಿಯ ವಿವಾದಾತ್ಮಕ ನಿರ್ಧಾರವನ್ನು ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯ (CAS) ಮಂಗಳವಾರ ರದ್ದುಗೊಳಿಸಿದೆ. ಇದರೊಂದಿಗೆ ಫೈನಲ್ ಪಂದ್ಯದ ಮೂಲ ಫಲಿತಾಂಶವೇ ಅಂತಿಮಗೊಂಡಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ಜ.18ರಂದು ರಬಾತ್ ನಲ್ಲಿ ನಡೆದ ಫೈನಲ್ ನಲ್ಲಿ ಸೆನೆಗಲ್ 1-0 ಗೋಲುಗಳಿಂದ ಮೊರಾಕೊವನ್ನು ಮಣಿಸಿ ಪ್ರಶಸ್ತಿ ಗೆದ್ದಿತ್ತು. ಆದರೆ, ಪಂದ್ಯದ ವೇಳೆ ನಡೆದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಆಫ್ರಿಕನ್ ಫುಟ್ಬಾಲ್ ಒಕ್ಕೂಟದ ಮೇಲ್ಮನವಿ ಮಂಡಳಿ ಸೆನೆಗಲ್ ನ ಗೆಲುವನ್ನು ರದ್ದುಗೊಳಿಸಿ ಮೊರಾಕೊವನ್ನು ವಿಜೇತ ತಂಡವೆಂದು ಘೋಷಿಸಿತ್ತು. ಈ ನಿರ್ಧಾರ ಪ್ರಶ್ನಿಸಿ ಸೆನೆಗಲ್ ಸಲ್ಲಿಸಿದ್ದ ಮೇಲ್ಮನವಿಯನ್ನು ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯ ಎತ್ತಿಹಿಡಿದಿದೆ.
ಪಂದ್ಯವನ್ನು ಪುನರಾರಂಭಿಸುವ ರೆಫರಿಯ ನಿರ್ಧಾರವು 'ಆಟದ ಮೈದಾನದ ಸಿದ್ಧಾಂತ'ದ ವ್ಯಾಪ್ತಿಗೆ ಬರುತ್ತದೆ ಎಂದು ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯದ ಸಮಿತಿ ಸ್ಪಷ್ಟಪಡಿಸಿದೆ. ರೆಫರಿ ಯಾವುದೇ ಕಾನೂನು ದೋಷ ಎಸಗಿಲ್ಲ ಎಂಬ ತೀರ್ಮಾನಕ್ಕೆ ಸಮಿತಿ ಬಂದಿದೆ ಎಂದು ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯದ ಪ್ರಧಾನ ಕಾರ್ಯದರ್ಶಿ ಮ್ಯಾಥ್ಯೂ ರೀಬ್ ತಿಳಿಸಿದ್ದಾರೆ.
ಫೈನಲ್ ಪಂದ್ಯದ ನಿಗದಿತ ಅವಧಿಯ ಕೊನೆಯ ಹಂತದಲ್ಲಿ ಸೆನೆಗಲ್ ವಿರುದ್ಧ ಪೆನಾಲ್ಟಿ ನೀಡಲಾಗಿತ್ತು. ಇದರಿಂದ ಅಸಮಾಧಾನಗೊಂಡ ಸೆನೆಗಲ್ ಆಟಗಾರರು 14 ನಿಮಿಷಗಳ ಕಾಲ ಮೈದಾನದಿಂದ ಹೊರನಡೆದಿದ್ದರು. ಬಳಿಕ ಪಂದ್ಯ ಪುನರಾರಂಭಕ್ಕೂ ಮುನ್ನ ಆಟಗಾರರು ಮರಳಿದ್ದರು. ಈ ನಡುವೆ ಮೊರಾಕೊ ಪೆನಾಲ್ಟಿ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ವಿಫಲವಾಗಿತ್ತು. ಹೆಚ್ಚುವರಿ ಸಮಯದಲ್ಲಿ ಪೇಪ್ ಗುಯೆ ನಿರ್ಣಾಯಕ ಗೋಲು ದಾಖಲಿಸಿ ಸೆನೆಗಲ್ ಗೆ ಗೆಲುವು ತಂದುಕೊಟ್ಟಿದ್ದರು.
ಪಂದ್ಯವನ್ನು ಪುನರಾರಂಭಿಸುವ ನಿರ್ಧಾರ ರೆಫರಿಯ ಏಕೈಕ ಅಧಿಕಾರ ವ್ಯಾಪ್ತಿಗೆ ಒಳಪಡುತ್ತದೆ. ಆ ನಿರ್ಧಾರದ ಪರಿಣಾಮಗಳನ್ನು ಆಟದ ಮೈದಾನಕ್ಕೆ ಸೀಮಿತಗೊಳಿಸಬೇಕು ಎಂದು CAS ಅಭಿಪ್ರಾಯಪಟ್ಟಿದೆ.
►ನಿಯಮಗಳು ಅನ್ವಯಿಸುವುದಿಲ್ಲ
ಮೊರಾಕೊ ತನ್ನ ವಾದಕ್ಕೆ ಆಧಾರವಾಗಿ ಉಲ್ಲೇಖಿಸಿದ್ದ AFCON ನಿಯಮಗಳ 82 ಮತ್ತು 84ನೇ ವಿಧಿಗಳು, ರೆಫರಿ ಪಂದ್ಯವನ್ನು ಶಾಶ್ವತವಾಗಿ ರದ್ದುಗೊಳಿಸಿದ ಸಂದರ್ಭಗಳಲ್ಲಿ ಮಾತ್ರ ಅನ್ವಯಿಸುತ್ತವೆ. ಈ ಪಂದ್ಯವನ್ನು ರೆಫರಿ ಪುನರಾರಂಭಿಸಿದ್ದರಿಂದ ನಿಯಮಗಳನ್ನು ಅನ್ವಯಿಸಲು ಸಾಧ್ಯವಿಲ್ಲ ಎಂದು CAS ಸಮಿತಿ ತಿಳಿಸಿದೆ.
ತೀವ್ರ ಒತ್ತಡದ ಸನ್ನಿವೇಶದಲ್ಲಿ ರೆಫರಿ ನಿರ್ಧಾರ ಕೈಗೊಂಡಿದ್ದರು ಎಂಬುದನ್ನು ಸಮಿತಿ ಒಪ್ಪಿಕೊಂಡಿದೆ. ಆದರೆ, ಇದರಿಂದ ಅವರ ನಿರ್ಧಾರವನ್ನು 'ಅನಿಯಂತ್ರಿತ' ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.
ಸೆನೆಗಲ್ ಫುಟ್ಬಾಲ್ ಫೆಡರೇಶನ್, ಕೋಚ್ ಪೇಪ್ ಥಿಯಾವ್ ಹಾಗೂ ಕೆಲವು ಆಟಗಾರರ ವಿರುದ್ಧ ಪ್ರತ್ಯೇಕ ಶಿಸ್ತು ಕ್ರಮಗಳನ್ನು ಕೈಗೊಂಡು CAF ಈಗಾಗಲೇ ಶಿಕ್ಷೆ ವಿಧಿಸಿರುವುದನ್ನೂ ಸಮಿತಿ ಉಲ್ಲೇಖಿಸಿದೆ.
ಫ್ರೆಂಚ್ ಕ್ರೀಡಾ ಕಾನೂನು ತಜ್ಞ ಜೆರಾಲ್ಡ್ ಸೈಮನ್ ಸಮಿತಿಯ ಅಧ್ಯಕ್ಷತೆ ವಹಿಸಿದ್ದರು. ಇಟಲಿಯ ಅಂತರರಾಷ್ಟ್ರೀಯ ಕಾನೂನು ಪ್ರಾಧ್ಯಾಪಕ ಲುಯಿಗಿ ಫುಮಗಲ್ಲಿ ಹಾಗೂ ಹ್ಯಾಂಬರ್ಗ್ ಮೂಲದ ವಕೀಲ ಮತ್ತು ಜ್ಯೂರಿಚ್ ವಿಶ್ವವಿದ್ಯಾಲಯದ ಕಾನೂನು ಪ್ರಾಧ್ಯಾಪಕ ಉಲ್ರಿಚ್ ಹಾಸ್ ಸಮಿತಿಯ ಸದಸ್ಯರಾಗಿದ್ದರು. ತೀರ್ಪು ಸರ್ವಾನುಮತದಿಂದ ಪ್ರಕಟವಾಗಿದೆ.
ಮಂಗಳವಾರವೇ ಪ್ರಕರಣದ ಸಂಪೂರ್ಣ ತೀರ್ಪಿನ ಆಧಾರಗಳನ್ನು ಎರಡೂ ಪಕ್ಷಗಳಿಗೆ ನೀಡಲಾಗಿದೆ. ಗೌಪ್ಯತೆ ಕೋರದಿದ್ದರೆ ತೀರ್ಪನ್ನು ಸೂಕ್ತ ಸಮಯದಲ್ಲಿ ಸಾರ್ವಜನಿಕವಾಗಿ ಪ್ರಕಟಿಸಲಾಗುವುದು ಎಂದು CAS ತಿಳಿಸಿದೆ.
ಮೊರಾಕೊ ಫುಟ್ಬಾಲ್ ಫೆಡರೇಶನ್, ರೆಫರಿಯ ನಿರ್ಧಾರವು 'ಆಟದ ಮೈದಾನದ ಸಿದ್ಧಾಂತ'ದ ವ್ಯಾಪ್ತಿಯನ್ನು ಮೀರಿದೆ. ಆಟಗಾರರು ಮೈದಾನದಿಂದ ಹೊರನಡೆದಿರುವುದು AFCON ನಿಯಮಗಳ 82 ಮತ್ತು 84ನೇ ವಿಧಿಗಳ ಉಲ್ಲಂಘನೆಯಾಗಿದೆ ಎಂದು ವಾದ ಮಂಡಿಸಿತ್ತು.






