ಭಾರತ ವಿರುದ್ಧ ಸತತ ನಾಲ್ಕನೇ ಅರ್ಧಶತಕ : ಲೆಜೆಂಡ್ಗಳ ಸಾಲಿಗೆ ಸೇರಿದ ಸೊನಾಲ್ ದಿನುಶಾ

ಸೊನಾಲ್ ದಿನುಶಾ | Photo Credit : PTI
ಕೊಲಂಬೊ: ಟೆಸ್ಟ್ ಕ್ರಿಕೆಟ್ನಲ್ಲಿ ಸತತ ನಾಲ್ಕನೇ ಬಾರಿ ಫಿಫ್ಟಿ ಪ್ಲಸ್ ಸ್ಕೋರ್ ಗಳಿಸಿದ ಸೊನಾಲ್ ದಿನುಶಾ ಭಾರತ ತಂಡದ ವಿರುದ್ಧ ತನ್ನ ಶ್ರೇಷ್ಠ ಪ್ರದರ್ಶನ ಮುಂದುವರಿಸಿದರು. ಈ ಸಾಧನೆಯ ಮೂಲಕ ಲಂಕಾದ ಆಟಗಾರ ಕ್ರಿಕೆಟ್ನ ಅತ್ಯಂತ ಖ್ಯಾತ ಬ್ಯಾಟರ್ಗಳ ಪಟ್ಟಿಗೆ ಸೇರಿದರು.
ಶ್ರೀಲಂಕಾದ ಎಡಗೈ ಬ್ಯಾಟರ್ ದಿನುಶಾ ದ್ವಿತೀಯ ಟೆಸ್ಟ್ ಪಂದ್ಯದ ಕೊನೆಯ ದಿನದಾಟವಾದ ಗುರುವಾರ ಈ ಮೈಲಿಗಲ್ಲು ತಲುಪಿದರು. 264 ಎಸೆತಗಳಲ್ಲಿ ಔಟಾಗದೆ 133 ರನ್ ಗಳಿಸಿ ಪ್ರತಿರೋಧದ ಇನಿಂಗ್ಸ್ ಆಡಿದ ದಿನುಶಾ ಆತಿಥೇಯರು ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರವಹಿಸಿದರು.
ಈಗಾಗಲೇ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮೂರು ಬಾರಿ ಗಮನಾರ್ಹ ಸ್ಕೋರ್ ಗಳಿಸಿರುವ ದಿನುಶಾ ಮತ್ತೊಂದು ಆಕರ್ಷಕ ಇನಿಂಗ್ಸ್ ಆಡಿದರು.
ದಿನುಶಾ ಮೊದಲ ಟೆಸ್ಟ್ ಪಂದ್ಯದಲ್ಲಿ 100 ರನ್ ಗಳಿಸಿದ ನಂತರ 2ನೇ ಇನಿಂಗ್ಸ್ನಲ್ಲಿ 84 ರನ್ ಗಳಿಸಿದ್ದರು. ದ್ವಿತೀಯ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ 103 ರನ್ ಗಳಿಸಿದ ದಿನುಶಾ ಎರಡನೇ ಇನಿಂಗ್ಸ್ನಲ್ಲಿ ಮತ್ತೊಂದು ಫಿಫ್ಟಿ ಪ್ಲಸ್ ಸ್ಕೋರ್ ಗಳಿಸಿದರು.
ದಿನುಶಾ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಎಲ್ಲ ನಾಲ್ಕು ಇನಿಂಗ್ಸ್ಗಳಲ್ಲಿ 50ಕ್ಕೂ ಅಧಿಕ ರನ್ ಗಳಿಸಿದ ಶ್ರೀಲಂಕಾದ ಮೂರನೇ ಬ್ಯಾಟರ್ ಎನಿಸಿಕೊಂಡರು. ಇದರೊಂದಿಗೆ ಕುಮಾರ ಸಂಗಕ್ಕರ ಹಾಗೂ ಡಿಮುತ್ ಕರುಣ್ರತ್ನೆ ಅವರನ್ನು ಸೇರಿಕೊಂಡರು.
ಸಂಗಕ್ಕರ 2013ರಲ್ಲಿ ಸ್ವದೇಶದಲ್ಲಿ ಬಾಂಗ್ಲಾದೇಶ ವಿರುದ್ದ ಪಂದ್ಯದಲ್ಲಿ ಹಾಗೂ 2014ರಲ್ಲಿ ಇಂಗ್ಲೆಂಡ್ ವಿರುದ್ಧ ಈ ಸಾಧನೆ ಮಾಡಿದ್ದರು. ಕರುಣರತ್ನೆ 2018ರಲ್ಲಿ ಸ್ವದೇಶದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಈ ಅಪರೂಪದ ಸಾಧನೆ ಮಾಡಿದ್ದರು.
ಭಾರತ ತಂಡದ ವಿರುದ್ಧ ದಿನುಶಾರ ಸಾಧನೆಯು ಅತ್ಯಂತ ಅಪರೂಪವಾಗಿದ್ದು, ಭಾರತ ತಂಡದ ವಿರುದ್ಧ ತನ್ನ ಮೊದಲ ನಾಲ್ಕು ಟೆಸ್ಟ್ ಇನಿಂಗ್ಸ್ಗಳಲ್ಲಿ ಫಿಫ್ಟಿ ಪ್ಲಸ್ ಸ್ಕೋರ್ ಗಳಿಸಿದ ಕೇವಲ ಎರಡನೇ ಬ್ಯಾಟರ್ ಆಗಿದ್ದಾರೆ.
ಝಿಂಬಾಬ್ವೆಯ ದಿಗ್ಗಜ ಆಟಗಾರ ಆ್ಯಂಡಿ ಫ್ಲವರ್ 2000ರಲ್ಲಿ ಭಾರತ ಪ್ರವಾಸ ಕೈಗೊಂಡಿದ್ದಾಗ ಈ ಸಾಧನೆಗೈದ ಇನ್ನೋರ್ವ ಬ್ಯಾಟರ್ ಆಗಿದ್ದಾರೆ. ಆಗ ಫ್ಲವರ್ ಅವರು ನಾಲ್ಕು ಇನಿಂಗ್ಸ್ಗಳಲ್ಲಿ ಔಟಾಗದೆ 183, 70, 55 ಹಾಗೂ ಔಟಾಗದೆ 232 ರನ್ ಗಳಿಸಿದ್ದರು.
ದಿನುಶಾ ಭಾರತ ತಂಡದ ವಿರುದ್ಧ ಮೊದಲ ನಾಲ್ಕು ಟೆಸ್ಟ್ ಇನಿಂಗ್ಸ್ಗಳಲ್ಲಿ ಪ್ರತಿ ಬಾರಿಯೂ ಫಿಫ್ಟಿ ಪ್ಲಸ್ ಸ್ಕೋರ್ ಗಳಿಸಿದ 5ನೇ ಬ್ಯಾಟರ್ ಆಗಿದ್ದಾರೆ.
ಇಂಗ್ಲೆಂಡ್ನ ಡೌಗ್ಲಾಸ್ ಜಾರ್ಡಿನ್ 1932 ಹಾಗೂ 1934ರ ನಡುವೆ ಈ ಸಾಧನೆ ಮಾಡಿದ್ದರೆ, ವೆಸ್ಟ್ಇಂಡೀಸ್ನ ಲೆಜೆಂಡ್ಗಳಾದ ಎವರ್ಟನ್ ವೀಕ್ಸ್ ಹಾಗೂ ಕ್ಲೈಡ್ ವಾಲ್ಕಟ್ 1948ರಲ್ಲಿ ಈ ಸಾಧನೆ ಮಾಡಿದ್ದರು. 1959ರಲ್ಲಿ ಇಂಗ್ಲೆಂಡ್ನ ಕೆಟ್ ಬ್ಯಾರಿಂಗ್ಟನ್ ಈ ಮೈಲಿಗಲ್ಲು ತಲುಪಿದ್ದರು.






