T20 ಸರಣಿ ಕ್ಲೀನ್ ಸ್ವೀಪ್ ಗೈದ ಭಾರತ | ಕೊನೆಯ ಪಂದ್ಯದಲ್ಲೂ ಝಿಂಬಾಬ್ವೆಗೆ ಸೋಲು

Image Credit: PTI
ಹರಾರೆ, ಜು.26: ವೈಭವ್ ಸೂರ್ಯವಂಶಿಯ ಬಿರುಸಿನ ಅರ್ಧಶತಕದ ನೆರವಿನಿಂದ T20 ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ರವಿವಾರ ಭಾರತ ತಂಡವು ಝಿಂಬಾಬ್ವೆ ತಂಡವನ್ನು 35 ರನ್ ಗಳಿಂದ ಪರಾಭವಗೊಳಿಸಿದೆ.
ಇದರೊಂದಿಗೆ ಭಾರತವು ಮೂರು ಪಂದ್ಯಗಳ ಸರಣಿಯನ್ನು 3–0 ಅಂತರದಿಂದ ಕ್ಲೀನ್ಸ್ವೀಪ್ ಗೈದಿದೆ.
ಹರಾರೆ ಸ್ಪೋರ್ಟ್ಸ್ ಕ್ಲಬ್ ನಲ್ಲಿ ನಡೆದ ಪಂದ್ಯದಲ್ಲಿ ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ 49 ಎಸೆತಗಳಲ್ಲಿ 81 ರನ್ ಗಳನ್ನು ಸಿಡಿಸಿದರು. ಅವರ ಅಬ್ಬರದ ಇನಿಂಗ್ಸ್ ನಲ್ಲಿ 8 ಬೌಂಡರಿಗಳು ಮತ್ತು 4 ಸಿಕ್ಸರ್ ಗಳಿದ್ದವು.
ಟಾಸ್ ಗೆದ್ದ ಭಾರತೀಯ ನಾಯಕ ಶ್ರೇಯಸ್ ಅಯ್ಯರ್ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಭಾರತವು ನಿಗದಿತ 20 ಓವರ್ಗಳಲ್ಲಿ ಕೇವಲ ಐದು ವಿಕೆಟ್ ಗಳ ನಷ್ಟಕ್ಕೆ 192 ರನ್ ಗಳನ್ನು ಗಳಿಸಿತು. ವಿಕೆಟ್ ಕೀಪರ್ ಇಶಾನ್ ಕಿಶನ್ 29 ರನ್ಗಳನ್ನು ಗಳಿಸಿದರೆ, ನಾಯಕ ಅಯ್ಯರ್ 27 ರನ್ಗಳ ಕೊಡುಗೆ ನೀಡಿದರು. ರಿಂಕು ಸಿಂಗ್ 25 ರನ್ ಗಳನ್ನು ಗಳಿಸಿದರು.
ಗೆಲ್ಲಲು 193 ರನ್ ಗಳ ಗುರಿಯನ್ನು ಪಡೆದ ಝಿಂಬಾಬ್ವೆ 20 ಓವರ್ ಗಳಲ್ಲಿ ಏಳು ವಿಕೆಟ್ ಗಳ ನಷ್ಟಕ್ಕೆ 157 ರನ್ ಗಳನ್ನು ಮಾತ್ರ ಗಳಿಸಲು ಸಾಧ್ಯವಾಯಿತು. ಭಾರತೀಯ ಬೌಲರ್ ಗಳ ಮಾರಕ ದಾಳಿಯಿಂದ ಪಾರಾಗಲು ಝಿಂಬಾಬ್ವೆಯ ಬ್ಯಾಟರ್ ಗಳಿಗೆ ಸಾಧ್ಯವಾಗಲಿಲ್ಲ.
ರಯಾನ್ ಬರ್ಲ್ 54 ರನ್ಗಳನ್ನು ಗಳಿಸಿ ಔಟಾಗದೆ ಉಳಿದರು. ಅವರಿಗೆ ಉಳಿದ ಬ್ಯಾಟರ್ ಗಳಿಂದ ಬೆಂಬಲ ಸಿಗಲಿಲ್ಲ. ಭಾರತದ ಪರವಾಗಿ ಮಯಾಂಕ್ ಯಾದವ್ ಮೂರು ವಿಕೆಟ್ಗಳನ್ನು ಉರುಳಿಸಿದರು.






