ದಿಲ್ಲಿ ಕ್ಯಾಪಿಟಲ್ಸ್ ಮುಖ್ಯ ಕೋಚ್ ಆಗಿ ಸೌರವ್ ಗಂಗೂಲಿ ನೇಮಕ

ಸೌರವ್ ಗಂಗೂಲಿ | Photo Credit : PTI
ಹೊಸದಿಲ್ಲಿ: ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರನ್ನು ಐಪಿಎಲ್ ನ ದಿಲ್ಲಿ ಕ್ಯಾಪಿಟಲ್ಸ್ ತಂಡದ ಮುಖ್ಯ ಕೋಚ್ ಆಗಿ ಮಂಗಳವಾರ ನೇಮಕ ಮಾಡಲಾಗಿದೆ. 2019ರಿಂದ ದಿಲ್ಲಿ ಕ್ಯಾಪಿಟಲ್ಸ್ ತಂಡದೊಂದಿಗೆ ಸಂಪರ್ಕ ಹೊಂದಿರುವ ಸೌರವ್ ಗಂಗೂಲಿ, ಮೊದಲಿಗೆ ಅದರ ಸಲಹೆಗಾರರಾಗಿ ಸೇರ್ಪಡೆಯಾಗಿದ್ದರು. ವರ್ಷಗಳುರುಳಿದಂತೆ ಪುರುಷ ಮತ್ತು ಮಹಿಳಾ ತಂಡಗಳ ನಿರ್ದೇಶಕ ಹುದ್ದೆ ಸೇರಿದಂತೆ ದಿಲ್ಲಿ ಕ್ಯಾಪಿಟಲ್ಸ್ ತಂಡದ ಹಲವಾರು ಹುದ್ದೆಗಳನ್ನು ಅವರು ನಿಭಾಯಿಸಿದ್ದರು.
ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಸೌರವ್ ಗಂಗೂಲಿ, “ಐಪಿಎಲ್ ನಲ್ಲಿ ದಿಲ್ಲಿ ಕ್ಯಾಪಿಟಲ್ಸ್ ತಂಡದ ಮುಖ್ಯ ಕೋಚ್ ಪಾತ್ರವನ್ನು ನಿರ್ವಹಿಸಲು ಎದುರು ನೋಡುತ್ತಿದ್ದೇನೆ. ದಿಲ್ಲಿ ಕ್ಯಾಪಿಟಲ್ಸ್ ತಂಡ ನನ್ನ ಹೃದಯಕ್ಕೆ ಹತ್ತಿರವಾಗಿದ್ದು, ಹಲವಾರು ವರ್ಷಗಳಿಂದ ಅದರೊಂದಿಗೆ ನನಗೆ ಬಲವಾದ ಸಂಬಂಧವಿದೆ” ಎಂದು ಹೇಳಿದ್ದಾರೆ.
“ನಾನು ದಿಲ್ಲಿ ಕ್ಯಾಪಿಟಲ್ಸ್ ತಂಡದ ಮಾಲಕರು, ಆಡಳಿತ ಮಂಡಳಿ, ನೆರವು ಸಿಬ್ಬಂದಿಗಳು ಹಾಗೂ ಆಟಗಾರರೊಂದಿಗೆ ನಿಕಟವಾಗಿ ಕೆಲಸ ಮಾಡಿದ್ದೇನೆ. ಹೀಗಾಗಿ, ಈ ಜವಾಬ್ದಾರಿ ನನಗೆ ರೋಮಾಂಚನವನ್ನುಂಟು ಮಾಡಿದೆ. ನಮ್ಮ ಬಳಿ ಪ್ರತಿಭಾವಂತರ ತಂಡವಿದ್ದು, ಇತ್ತೀಚಿನ ದಿನಗಳಲ್ಲಿ ಅವರು ಉತ್ತಮ ಕ್ರಿಕೆಟ್ ಆಡಿದ್ದಾರೆ. ನಾನು ಈ ತಂಡದೊಂದಿಗೆ ಹೊಸ ಋತುವಿನಲ್ಲಿ ಕೆಲಸ ಮಾಡಲು ಹಾಗೂ ಬಲಿಷ್ಠ ತಂಡವನ್ನು ಕಟ್ಟಲು ಎದುರು ನೋಡುತ್ತಿದ್ದೇನೆ” ಎಂದು ಅವರು ತಿಳಿಸಿದ್ದಾರೆ.




